ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ತರಲಾಗಿದ್ದು, ಮಾರ್ಚ್ ೧೬ರಂದು ದುಂಡು ಮೇಜಿನ ಸಭೆ ಹಾಗೂ ಮಾರ್ಚ್ ೧೯ರಂದು ಬೃಹತ್ ಪ್ರತಿಭಟನಾ ಸಭೆ ಏರ್ಪಡಿಸಲಾಗಿದೆ ಎಂದು ನೂತನ ಸಮಿತಿ ಅಧ್ಯಕ್ಷ ಡಾ. ವೈ.ಎಸ್. ವೀರಭದ್ರಪ್ಪ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಹಾಸನ ವಿಶ್ವವಿದ್ಯಾಲಯವನ್ನು ಮುಚ್ಚಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮರು ವಿಲೀನಗೊಳಿಸಬೇಕೆಂಬ ರಾಜ್ಯ ಸಚಿವ ಸಂಪುಟದ ಶಿಫಾರಸ್ಸನ್ನು ಹಾಸನ ಜಿಲ್ಲೆಯ ಜನರಾದ ನಾವು ತೀವ್ರವಾಗಿ ವಿರೋಧಿಸುತ್ತೇವೆ. ವಿಶ್ವವಿದ್ಯಾಲಯ ಉಳಿಸಿ ಹೋರಾಟವನ್ನು ತೀವ್ರಗೊಳಿಸಲು ಮಾರ್ಚ್ ೧೬ರಂದು ಹಾಸನದಲ್ಲಿ ‘ದುಂಡು ಮೇಜಿನ ಸಭೆ’ ಕರೆಯಲಾಗಿದೆ. ಈ ಸಭೆಗೆ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು, ಶಿಕ್ಷಣ ತಜ್ಞರು, ಪ್ರಮುಖ ವ್ಯಕ್ತಿಗಳು, ಜನಪರ ಸಂಘಟನೆಗಳ ಮುಖಂಡರು, ಸಾಹಿತಿಗಳು, ಬುದ್ಧಿಜೀವಿಗಳು, ವಿಶ್ವವಿದ್ಯಾಲಯ ಮತ್ತು ಅದರ ವ್ಯಾಪ್ತಿಯ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಪೋಷಕರನ್ನು ಈ ಸಭೆಗೆ ಆಹ್ವಾನಿಸಲಾಗುವುದು. ಹಾಗೂ ಮಾರ್ಚ್ ೧೯ರಂದು ಹಾಸನ ವಿಶ್ವವಿದ್ಯಾಲಯ ಉಳಿಸುವಂತೆ ಒತ್ತಾಯಿಸಿ ಹಾಸನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದರು. ೨೦೨೩ ಮಾರ್ಚ್ ೨೧ರಲ್ಲಿ ಕರ್ನಾಟಕ ಸರ್ಕಾರ ಹಾಸನದ ಹೇಮಗಂಗೋತ್ರಿಯನ್ನು ಸ್ವತಂತ್ರ ವಿಶ್ವವಿದ್ಯಾಲಯವಾಗಿ ಘೋಷಿಸಿದೆ. ಹಾಸನ ವಿಶ್ವವಿದ್ಯಾಲಯದಲ್ಲಿ ಹೇಮಗಂಗೋತ್ರಿ ಕ್ಯಾಂಪಸ್‌ನಲ್ಲಿ ೧೧ ಸ್ನಾತಕೋತ್ತರ ವಿಭಾಗಗಳಿದ್ದು, ಒಟ್ಟು ೬೦೦ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದಲ್ಲದೇ ಹಾಸನ ವಿಶ್ವವಿದ್ಯಾಲಯದ ಸದಸ್ಯತ್ವ ಪಡೆದ ೫೬ ಪದವಿ ಕಾಲೇಜುಗಳಿವೆ. ಈ ಕಾಲೇಜುಗಳ ಪದವಿ ತರಗತಿಗಳಲ್ಲಿ ೩೦,೦೦೦ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ನಾತಕೋತ್ತರ ಕೇಂದ್ರಗಳಲ್ಲಿ ೨೦೦೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ಒಟ್ಟು ವಿದ್ಯಾರ್ಥಿಗಳಲ್ಲಿ ಬಹುತೇಕ ಪ್ರಮಾಣದಲ್ಲಿ ವಿದ್ಯಾರ್ಥಿನಿಯರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿಗತಿಗಳನ್ನು ಕುರಿತು ಅಧ್ಯಯನ ಮಾಡಲು ರಚಿಸಿದ್ದ ರಾಜ್ಯದ ಸಚಿವ ಸಂಪುಟದ ಉಪಸಮಿತಿಯು ಹಾಸನ ವಿಶ್ವವಿದ್ಯಾಲಯವೂ ಸೇರಿದಂತೆ ೯ ವಿಶ್ವವಿದ್ಯಾಲಯಗಳಿಗೆ ನೀಡಲಾಗಿದ್ದ ಸ್ವತಂತ್ರ ಸ್ಥಾನವನ್ನು ರದ್ದು ಮಾಡಿ ಹಿಂದಿನ ವಿಶ್ವವಿದ್ಯಾಲಯಗಳಲ್ಲಿ ವಿಲೀನ ಮಾಡಲು ಶಿಫಾರಸ್ಸು ಮಾಡಿದೆ. ಇದರಿಂದಾಗಿ ಹಾಸನ ಜಿಲ್ಲೆಯ ವಿದ್ಯಾರ್ಥಿಗಳು ಮುಖ್ಯವಾಗಿ ಗ್ರಾಮೀಣ ಪ್ರದೇಶ ಮತ್ತು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳು ಅದರಲ್ಲಿಯೂ ಪ್ರಮುಖವಾಗಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯುವ ಅವಕಾಶಗಳಿಂದ ವಂಚಿತರಾಗಲಿದ್ದಾರೆ. ಹಾಗೂ ಹಾಲಿ ವ್ಯಾಸಂಗ ಮಾಡುತ್ತಿರುವ ೩೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬಹಳ ತೊಂದರೆಯಾಗಲಿದೆ ಎಂದು ಹೇಳಿದರು.
ಹಸಿರು ಭೂಮಿ ಪ್ರತಿಷ್ಠಾನದ ಸಂಸ್ಥಾಪಕರಾದ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಹಾಸನ ವಿಶ್ವವಿದ್ಯಾಲಯ ಉಳಿಸುವ ಸಲುವಾಗಿ ಮಾರ್ಚ್ ೩ರಂದು ಹಾಸನದ ಕಸಾಪ ಭವನದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಜಿಲ್ಲೆಯ ಜನಪರ ಸಂಘಟನೆಗಳು, ಸಾಹಿತಿಗಳು, ವಿಚಾರವಾದಿಗಳು ಮತ್ತು ಶಿಕ್ಷಣ ಪ್ರೇಮಿಗಳನ್ನು ಒಳಗೊಂಡ ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. ಹಾಸನ ಜಿಲ್ಲೆಯ ಹಿರಿಯ ಸಾಮಾಜಿಕ ಹೋರಾಟಗಾರರಾದ ಡಾ. ವೈ.ಎಸ್. ವೀರಭದ್ರಪ್ಪ ಅವರು ಈ ಹೋರಾಟ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಹಾಸನ ೧೯೯೧ರಿಂದ ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರವು ಹಾಸನದಲ್ಲಿ ಅಸ್ತಿತ್ವದಲ್ಲಿದೆ ಎಂದರು. ಹಾಸನ ವಿಶ್ವವಿದ್ಯಾಲಯ ಕ್ಯಾಂಪಸ್ ೭೮.೦೮ ಎಕರೆ ಪ್ರದೇಶವನ್ನು ಮಾತ್ರ ಹೊಂದಿದೆ. ಅಗತ್ಯ ಪ್ರಮಾಣದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ, ಮೂಲಭೂತ ಸೌಕರ್ಯದ ಕೊರತೆ, ಅಗತ್ಯ ಅನುದಾನದ ಕೊರತೆಯ ನಡುವೆಯೂ ಹಾಸನ ವಿಶ್ವವಿದ್ಯಾಲಯ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಜಿಲ್ಲೆಯ ವಿಧ್ಯಾರ್ಥಿಗಳಿಗೆ ಸ್ಥಳೀಯವಾಗಿ ಉನ್ನತ ಶಿಕ್ಷಣ ಪಡೆಯುವ ಅವಕಾಶವೂ ಸಿಕ್ಕಿದೆ. ಇದರಿಂದಾಗಿ ಜಿಲ್ಲೆಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ತುಂಬಾ ಸಹಾಯವಾಗಲಿದೆ. ಭವಿಷ್ಯದಲ್ಲಿ ನಮ್ಮ ವಿಶ್ವವಿದ್ಯಾಲಯವು ಉತ್ತಮವಾಗಿ ಅಭಿವೃದ್ಧಿ ಹೊಂದಲು ಬಹಳ ಅವಕಾಶಗಳಿದ್ದು ಇದು ಹಾಸನ ಜಿಲ್ಲೆಯ ಹೆಮ್ಮೆಯೂ ಆಗಿದೆ ಎಂದು ಹೇಳಿದರು.ಕೆಲ ದಿನಗಳ ಹಿಂದೆ ಕೆಂಪೇಗೌಡ ಪ್ರತಿಮೆಗೆ ೪ ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ವಿವಿ ವಿಚಾರದಲ್ಲಿ ಉದಾಹರಣೆ ನೀಡಿದ ಅವರು, ಪ್ರಸ್ತುತದಲ್ಲಿ ಸರಕಾರಿ ಶಾಲೆಯನ್ನು ಕೂಡ ಉಳಿಸುತ್ತಿಲ್ಲ. ಖಾಸಗಿ ಶಾಲಾ ಬಸ್ಸುಗಳು ಇಡೀ ಹಳ್ಳಿಗಳಿಗೆ ಹೋಗಿ ಮಕ್ಕಳ ಅಪಹರಣ ರೀತಿ ಕರೆದುಕೊಂಡು ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇಡೀ ಜಿಲ್ಲೆಯ ಜನರು ಒಟ್ಟಾಗಿ ಸೇರಿ ಒಂದು ಮಾದರಿಯಾದ ಯೂನಿವರ್ಸಿಟಿ ಕಟ್ಟಬೇಕಾಗಿದೆ ಎಂದು ಕರೆ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ಇರುವ ವಿಶ್ವವಿದ್ಯಾಲಯ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ನೀತಿ ಅನುಸರಿಸಬೇಕು. ಉನ್ನತ ಶಿಕ್ಷಣದ ಗುಣಮಟ್ಟ ಹಚ್ಚಿಸಿ ಆಕರ್ಷಿಸುವಂತೆ ಮಾಡಬೇಕು. ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯಬೇಕು. ಇರುವುದನ್ನು ಮುಚ್ಚುವ ನೀತಿ ಬಿಟ್ಟು ಉಳಿಸಲು ಅದಕ್ಕೆ ಅವಶ್ಯಕವಾದ ಗುಣಮಟ್ಟ ಹೆಚ್ಚಿಸಬೇಕು ಎಂದರು. ಈ ಹಿನ್ನೆಲೆಯಲ್ಲಿ ಹಾಸನ ವಿಶ್ವವಿದ್ಯಾಲಯವನ್ನು ಉಳಿಸಿ ಅದಕ್ಕೆ ಅಗತ್ಯವಿರುವ ಭೂಮಿ, ಅನುದಾನ, ಕಾಯಂ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಲು ‘ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ’ ಅಸ್ತಿತ್ವಕ್ಕೆ ಬಂದಿದ್ದು ಹಂತಹಂತವಾಗಿ ನಿರಂತರ ಹೋರಾಟದ ಯೋಜನೆಯನ್ನು ರೂಪಿಸಿದೆ. ಇದರ ಭಾಗವಾಗಿ ಮಾರ್ಚ್ ೧೬ರ ಭಾನುವಾರ ಹಾಸನದಲ್ಲಿ ನಡೆಯುತ್ತಿರುವ ‘ದುಂಡು ಮೇಜಿನ ಸಭೆಗೆ’ ಹಾಸನ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ಕಾಲೇಜು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು, ಸಾಹಿತಿ ಬುದ್ಧಿಜೀವಿಗಳು ಮತ್ತು ಪೋಷಕರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಹಾಗೂ ಮಾರ್ಚ್ ೧೯ರಂದು ನಡೆಯುವ ಬೃಹತ್ ಪ್ರತಿಭಟನಾ ಸಭೆಯನ್ನು ಬೆಂಬಲಿಸಿ ಎಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಹಿರಿಯ ದಲಿತ ಮುಂಖಂಡ ಎಚ್.ಕೆ. ಸಂದೇಶ್, ಹಾಸನ ವಿವಿ ಪ್ರಾಧ್ಯಾಪಕ ಡಾ. ಮಹೇಶ್, ಎಂ.ಜಿ. ಪೃಥ್ವಿ, ಇತರರು ಉಪಸ್ಥಿತರಿದ್ದರು.