ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬರ ಮತ್ತು ಪ್ರಕೃತಿ ವಿಕೋಪ ನಿರ್ವಹಣೆಗೆ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಗೆ ತಲಾ ₹5 ಕೋಟಿ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಚಿತ್ರದುರ್ಗ ಜಿಲ್ಲಾ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಕೃತಿ ವಿಕೋಪ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರ ಮತ್ತು ಪ್ರಕೃತಿ ವಿಕೋಪ ನಿರ್ವಹಣೆಯ ಒಟ್ಟಾರೆ ಜವಾಬ್ದಾರಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೇಲಿರುತ್ತದೆ. ಜಿಲ್ಲಾಧಿಕಾರಿಗಳು ₹5 ಕೋಟಿ ಹಣವನ್ನು ಬರ ಮತ್ತು ಪ್ರಕೃತಿ ವಿಕೋಪದ ತುರ್ತು ಕಾರ್ಯಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹೆಚ್ಚುವರಿ ಅನುದಾನದ ಅಗತ್ಯವಿದ್ದಲ್ಲಿ ತಕ್ಷಣವೇ ಪ್ರಸ್ತಾವನೆ ಸಲ್ಲಿಸಬೇಕು. ಯಾವುದೇ ಅಧಿಕಾರಿ ಬರ ಕೆಲಸದಿಂದ ನುಣುಚಿಕೊಂಡಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು, ಹೊಸದಾಗಿ ಕೊರೆದಿರುವ ಹಾಗೂ ಬಾಕಿ ಇರುವ ಎಲ್ಲಾ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ 15 ದಿನಗಳ ಒಳಗೆ ಕಡ್ಡಾಯವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಬರಗಾಲದ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲೇ ಇರಬೇಕು ಮತ್ತು ಸಾರ್ವಜನಿಕರಿಗೆ ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣವೇ ಲಭ್ಯವಿರಬೇಕು. ಹತ್ತಿರದ ಜಿಲ್ಲೆಗಳಿಂದ ದಿನನಿತ್ಯ ಓಡಾಟ ನಡೆಸುವ ಅಧಿಕಾರಿಗಳಿಗೆ ರಿಯಾಯಿತಿ ಇಲ್ಲ. ಜಿಲ್ಲಾಧಿಕಾರಿಗಳು ಇಂತಹ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು ಎಂದು ನಿರ್ದೇಶನ ನೀಡಿದರು.


ಜಿಲ್ಲೆಯಲ್ಲಿ ರಸಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡು ವಿತರಿಸುವ ನಿಯಮದಿಂದ ರೈತರಿಗೆ ತೊಂದರೆಯಾಗುತ್ತಿದ್ದು, ವಿನಾಯಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೋರಿದರು. ಈ ಹಿಂದೆ ಕೆಎಂಇಆರ್ ಸಿ ಅನುದಾನವನ್ನು ಕೇವಲ ಗಣಿಗಾರಿಕೆ ಚಟುವಟಿಕೆ ಇರುವ ತಾಲೂಕುಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಮಾದರಿಯಲ್ಲೇ ಇಡೀ ಜಿಲ್ಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಕುಡಿಯುವ ನೀರಿಗೂ ಈ ಅನುದಾನ ಬಳಸಲು ವಿನಾಯಿತಿ ಕೋರಲಾಗುವುದು ಎಂದು ಪರಮೇಶ್ವರ್ ಹೇಳಿದರು.

ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಅಲ್ಪಾವಧಿ ಬೆಳೆಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಸಭೆಯಲ್ಲಿ ಮನವಿ ಮಾಡಿದರು.

ಪ್ರಸಕ್ತ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಸುಮಾರು 70,000 ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ, ಇದುವರೆಗೆ ಕೇವಲ 5,000 ರೈತರಿಗೆ ಮಾತ್ರ ಸಾಲ ವಿತರಿಸಲಾಗಿದೆ. ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಹೀಗಾಗಿ, ಬೆಳೆ ವಿಮೆಯ ನೂರರಷ್ಟು (100%) ಪ್ರೀಮಿಯಂ ಕಂತನ್ನು ರಾಜ್ಯ ಸರ್ಕಾರವೇ ಭರಿಸಿ ರೈತರಿಗೆ ಆರ್ಥಿಕ ಅನುಕೂಲ ಮಾಡಿಕೊಡಬೇಕು. ಸದ್ಯ ವಿವಿ ಸಾಗರ ಜಲಾಶಯದಲ್ಲಿ ಶೇಕಡಾ 30 ರಷ್ಟು ನೀರಿದ್ದು, ಅಲ್ಲಿಂದ ಮೊಳಕಾಲ್ಮೂರು ತಾಲೂಕಿನ ಪಕ್ಕದಲ್ಲಿರುವ ಕೆರೆಗಳಿಗೆ ನೀರು ಹರಿಸಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಎನ್.ವೈ.ಗೋಪಾಕೃಷ್ಣ ಮನವಿ ಮಾಡಿದರು.

ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಹೊಳಲ್ಕೆರೆ ತಾಲೂಕು ಮಲೆನಾಡು ಭಾಗಕ್ಕೆ ಹೊಂದಿಕೊಂಡಿದ್ದರೂ ಈ ಬಾರಿ ತೀವ್ರ ಬರಗಾಲದ ಪರಿಸ್ಥಿತಿ ಎದುರಿಸುತ್ತಿದೆ. ತಾಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ತಾಲೂಕಿನಲ್ಲಿ ಶೇ. 45 ಕ್ಕಿಂತಲೂ ಹೆಚ್ಚು ಮಳೆ ಕೊರತೆಯಾಗಿದೆ ಎಂದರು.

ಶಾಸಕ ಟಿ. ರಘುಮೂರ್ತಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಪೂರ್ಣಗೊಳ್ಳಬೇಕಾದರೆ ಕೇಂದ್ರ ಸರ್ಕಾರ ಘೋಷಿಸಿರುವ ₹5,300 ಕೋಟಿ ಅನುದಾನ ಬಿಡುಗಡೆಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯ ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಹಣ ಬಿಡುಗಡೆ ಮಾಡಿಸಬೇಕು ಎಂದರು.

ಶಾಸಕ ಬಿ.ಜಿ ಗೋವಿಂದಪ್ಪ ಮಾತನಾಡಿ, ಮಳೆಯ ಕೊರತೆಯಿಂದಾಗಿ ಹೊಸದುರ್ಗ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ತಾಲೂಕಿನ ಯಾವುದೇ ಗ್ರಾಮ ಪಂಚಾಯಿತಿಯಲ್ಲೂ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ತಾಲೂಕಿನ 18 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಹಾಗೂ 11 ಹಳ್ಳಿಗಳಿಗೆ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯುವ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಭದ್ರಾ ನೀರು ಬರುತ್ತದೆ ಎಂಬ ಭರವಸೆಯಿಂದ ಕಳೆದ ವರ್ಷ ತಾಲೂಕಿನಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಅಡಿಕೆ ಸಸಿಗಳನ್ನು ನೆಡಲಾಗಿತ್ತು. ಆದರೆ ಪ್ರಸ್ತುತ ತೀವ್ರ ನೀರಿನ ಅಭಾವದಿಂದಾಗಿ ಈಗಾಗಲೇ ಶೇ.50 ರಷ್ಟು ಅಡಿಕೆ ತೋಟಗಳು ಒಣಗುವ ಹಂತ ತಲುಪಿವೆ. ಈ ಬಗ್ಗೆ ಸರ್ಕಾರ ತಕ್ಷಣ ಗಮನಹರಿಸಿ, ಕುಡಿಯುವ ನೀರು ಹಾಗೂ ತೋಟಗಳನ್ನು ಉಳಿಸಲು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದರು.

ವಿಪ ಸದಸ್ಯರಾದ ಶ್ರೀನಿವಾಸ, ಕೆ.ಎಸ್.ನವೀನ್, ಆದಿ ಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ರಾಜ್ಯ ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಡಾ.ಯೋಗೇಶ್ ಬಾಬು, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ ಆಮ್ಲಾನ್ ಅದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು

ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತೆ ಹೊನ್ನಾಂಭ ಇದ್ದರು.