ಮೇವು ಬ್ಯಾಂಕಿನಲ್ಲಿ ಮಾರಾಟವಾಗದ ಮೇವು

| Published : May 19 2024, 01:48 AM IST

ಸಾರಾಂಶ

ತಾಲೂಕಾಡಳಿತ ಕೊಣ್ಣೂರ ಗ್ರಾಮದ ಎಪಿಎಂಸಿ ಆವರಣದಲ್ಲಿ ಏ. 16ರಂದು ರೈತರ ಜಾನುವಾರುಗಳಿಗೆ ಅನುಕೂಲವಾಗಲೆಂದು ಮೇವು ಬ್ಯಾಂಕ್‌ ಆರಂಭ ಮಾಡಿತ್ತು.

ಎಸ್.ಜಿ.ತೆಗ್ಗಿನಮನಿ ನರಗುಂದ

ತಾಲೂಕಿನಲ್ಲಿ ಬರಗಾಲದ ಹಿನ್ನೆಲೆ ತಾಲೂಕಾಡಳಿತದಿಂದ ಮೇವು ಬ್ಯಾಂಕ್‌ ಆರಂಭ ಮಾಡಿದ್ದು, ಆದರೆ ರೈತರು ಇಲ್ಲಿಗೆ ಬಂದು ಮೇವು ಖರೀದಿಸದ ಹಿನ್ನೆಲೆ ಅವು ಹಾಗೆಯೇ ಉಳಿದುಕೊಂಡಿವೆ.

2023-24 ನೇ ಸಾಲಿನಲ್ಲಿ ನರಗುಂದ ತಾಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಆಗದ ಕಾರಣ ತಾಲೂಕನ್ನು ಸರ್ಕಾರ ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ ನಂತರ ತಾಲೂಕಾಡಳಿತ ಕೊಣ್ಣೂರ ಗ್ರಾಮದ ಎಪಿಎಂಸಿ ಆವರಣದಲ್ಲಿ ಏ. 16ರಂದು ರೈತರ ಜಾನುವಾರುಗಳಿಗೆ ಅನುಕೂಲವಾಗಲೆಂದು ಮೇವು ಬ್ಯಾಂಕ್‌ ಆರಂಭ ಮಾಡಿತ್ತು. ಆದರೆ ಕಳೆದ ಒಂದು ತಿಂಗಳಿಂದ ಯಾರೂ ಮೇವು ಖರೀದಿ ಮಾಡದ್ದರಿಂದ ಎಪಿಎಂಸಿ ಆವರಣದಲ್ಲಿ ಮೇವು ಹಾಗೇ ಉಳಿದುಕೊಂಡಿದೆ.

ತಾಲೂಕಿನ ರೈತರು ಹಿಂದಿನ ವರ್ಷ ತಮ್ಮ ಜಾನುವಾರುಗಳಿಗೆ ಬೇಕಾದ ಹೊಟ್ಟು, ಮೇವುಗಳನ್ನು ಕನಿಷ್ಟ 2 ವರ್ಷಕ್ಕೆ ಆಗುವಷ್ಟು ಸಂಗ್ರಹ ಮಾಡಿಕೊಂಡಿದ್ದಾರೆ. ಮೇಲಾಗಿ ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳದ ಅಕ್ಕಪಕ್ಕದ ಗ್ರಾಮದ ರೈತರು ತಮ್ಮ ಜಮೀನುಗಳಲ್ಲಿ ಹಸಿ ಮೇವು ಬೆಳೆಯುವುದರಿಂದ ಮೇವು ಖರೀದಿಗೆ ಯಾವ ರೈತರು ಮುಂದಾಗುತ್ತಿಲ್ಲ ಎನ್ನಲಾಗಿದೆ.

ತಾಲೂಕಾಡಳಿತ ಕೊಣ್ಣೂರ ಗ್ರಾಮದಲ್ಲಿ ಮೇವು ಬ್ಯಾಂಕ್‌ ಆರಂಭ ಮಾಡಿ 4 ಟನ್‌ ಮೇವು ಸಂಗ್ರಹಿಸಿತ್ತು. ಒಂದು ಕೆಜಿ ಮೇವಿಗೆ ₹2 ರಂತೆ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕಳೆದೊಂದು ತಿಂಗಳಿಂದ ಕೇವಲ 1.50 ಕಿಂಟಲ್‌ ಮಾತ್ರ ಮೇವು ಮಾರಾಟವಾಗಿದೆ ಎನ್ನಲಾಗಿದೆ.

ತಾಲೂಕಿನಲ್ಲಿ ಒಟ್ಟು 19000 ಎತ್ತು, ಎಮ್ಮೆ, 35000 ಕುರಿ, ಮೇಕೆಯನ್ನು ರೈತರು ಸಾಕುತ್ತಿದ್ದಾರೆ ಎಂದು ತಾಲೂಕು ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ವೆಂಕಟೇಶ ಸಣ್ಣಬಿದರಿ ತಿಳಿಸಿದ್ದಾರೆ.

ಸರ್ಕಾರ ನರಗುಂದ ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ ನಂತರ ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ಮೇವು ಬ್ಯಾಂಕ್‌ ಪ್ರಾರಂಭ ಮಾಡಲಾಗಿತ್ತು. ಮೊದಲು ಕೊಣ್ಣೂರ ಗ್ರಾಮದಲ್ಲಿ ಮೇವು ಮಾರಾಟ ಮಾಡಿದ ನಂತರ ಇನ್ನೊಂದು ಮೇವು ಬ್ಯಾಂಕ್‌ ಆರಂಭಿಸುವ ಆಲೋಚನೆ ಇತ್ತು. ಆದರೆ ರೈತರಿಂದ ಹೆಚ್ಚಿನ ಮೇವಿನ ಬೇಡಿಕೆ ಬಂದಿಲ್ಲ ಎಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಹೇಳಿದರು.