ಸಾರಾಂಶ
ಗಡಿಭಾಗದ ಮಲ್ಲೇಶನಪಾಳ್ಯಕ್ಕೆ ಗ್ರಾಮಕ್ಕೆ ಇದ್ದ ರಸ್ತೆಯನ್ನು ಆನೆಗಳ ಹಾವಳಿಯನ್ನು ತಡೆಗಟ್ಟುವ ನೆಪದಲ್ಲಿ ಅರಣ್ಯ ಇಲಾಖೆ ಬಂದ್ ಮಾಡಿಸಿದೆ. ಇದರಿಂದ ಗ್ರಾಮಸ್ಥರು ಸುಮಾರು ಐದಾರು ಕಿಮೀ ದೂರ ಸುತ್ತು ಬಳಿಸಿ ಹೊಳೆ ಹಾಗೂ ಗದ್ದೆಗಳ ಮೂಲಕ ಹೋಗಬೇಕಾದ ಅನಿವಾರ್ಯ ಎದುರಾಗಿದೆ. ಕೂಡಲೇ ರಸ್ತೆ ಬಿಟ್ಟುಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಗಡಿಭಾಗದ ಮಲ್ಲೇಶನಪಾಳ್ಯಕ್ಕೆ ಗ್ರಾಮಕ್ಕೆ ಇದ್ದ ರಸ್ತೆಯನ್ನು ಬಂದ್ ಮಾಡಿ ಜನರ ಸಂಚಾರಕ್ಕೆ ಅಡ್ಡಿಯಾಗಿದ್ದು ಒಂದು ವಾರದ ಒಳಗಾಗಿ ಅರಣ್ಯ ಇಲಾಖೆಯವರು ಮುಚ್ಚಿರುವ ದಾರಿಯನ್ನು ತೆರವುಗೊಳಿಸದಿದ್ದರೆ ಇಲಾಖೆ ವಿರುದ್ದ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು. ತಾಲೂಕಿನ ಗಡಿಭಾಗದ ದೋಣಿಮಡಗು ಗ್ರಾಪಂ ವ್ಯಾಪ್ತಿಯ ಮಲ್ಲೇಶನಪಾಳ್ಯಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಸ್ಯೆಯನ್ನು ಆಲಿಸಿ ಮಾತನಾಡಿ. ದೋಣಿಮಡುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇಶನಪಾಳ್ಯದಲ್ಲಿ ವಾಲ್ಮಿಕಿ ಸಮುದಾಯಕ್ಕೆ ಸೇರಿದ ಜನರು ಬದುಕು ಸಾಗಿಸುತ್ತಿದ್ದಾರೆ ಎಂದರು.ಸಾರ್ವಜನಿಕ ರಸ್ತೆ ಬಂದ್
ಕಳೆದ ಒಂದೂವರೆ ತಿಂಗಳಿನಿಂದ ಅರಣ್ಯ ಇಲಾಖೆಯವರು ಆನೆಗಳ ಹಾವಳಿಯನ್ನು ತಡೆಗಟ್ಟುವ ನೆಪದಲ್ಲಿ ವರ್ಷಗಳಿಂದ ಸಂಚರಿಸುತ್ತಿದ್ದ ಸಾರ್ವಜನಿಕ ರಸ್ತೆಯನ್ನು ಮುಚ್ಚಿ ಹಾಕಿದ್ದಾರೆ. ಇದರಿಂದ ಗ್ರಾಮಸ್ಥರು ಸುಮಾರು ಐದಾರು ಕಿಮೀ ದೂರ ಸುತ್ತು ಬಳಿಸಿ ಹೊಳೆ ಹಾಗೂ ಗದ್ದೆಗಳ ಮೂಲಕ ಹೋಗಬೇಕಾದ ಅನಿವಾರ್ಯ ಎದುರಾಗಿದೆ ಎಂದರು.ಈ ಮಾರ್ಗದ ರಸ್ತೆಯು ಮಳೆಗಾಲದಲ್ಲಿ ನೀರಿನಿಂದ ತುಂಬಿ ಮೂರ‍್ನಾಲ್ಕು ತಿಂಗಳು ಜನ ಸಂಚರಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಗ್ರಾಮದ ಜನತೆಗೆ ರಸ್ತೆ ಇಲ್ಲದೆ ದಿಗ್ಬಂದನ ಹೇರಿದಂತೆ ಆಗುತ್ತದೆ. ಹತ್ತಾರು ವರ್ಷಗಳಿಂದ ಗ್ರಾಮಸ್ಥರು ಉಳುಮೆ ಮಾಡಿಕೊಂಡು ಬೇಸಾಯ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳುವ ಮೂಲಕ ಬಡ ಜನರನ್ನು ಒಕ್ಕಲೆಬ್ಬಿಸುವ ಕೆಲಸವನನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು ಆರೋಪಿಸಿದರು.
ಗ್ರಾಮಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ರಸ್ತೆಯನ್ನು ಬಿಡಲು ಸಾಧ್ಯವಿಲ್ಲ. ಹೊಲ ಗದ್ದೆಗಳ ಮಾರ್ಗವಾಗಿ ಗ್ರಾಮಸ್ಥರು ಹೋಗಬೇಕು. ಯಾವ ಕಾರಣಕ್ಕೂ ರಸ್ತೆಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರಿಗೆ ಎಚ್ಚರಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಥಳೀಯ ಶಾಸಕರಗೆ ಭಯಪಟ್ಟು ಯಾರೂ ಸಹ ಕರೆಯನ್ನು ಸ್ವೀಕರಿಸಲಿಲ್ಲ ಎಂದರು.ಅರಣ್ಯ ಸಚಿವ ಖಂಡ್ರೆ ಭರವಸೆ
ಆದ ಕಾರಣ ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರಿಗೆ ದೂರವಾಣಿ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಮನವಿಯನ್ನು ಮಾಡಲಾಗಿದೆ. ಮನವಿಗೆ ಸ್ಪಂದಿಸಿದ ಸಚಿವರು ಅಧಿಕಾರಿಗಳ ಜೊತೆಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಬರವಸೆ ನೀಡಿದ್ದಾರೆ. ಒಂದು ವಾರದ ಒಳಗಾಗಿ ಗ್ರಾಮಕ್ಕೆ ರಸ್ತೆಯನ್ನು ಬಿಟ್ಟುಕೊಡದೇ ಹೋದರೆ ಅರಣ್ಯ ಇಲಾಖೆ ಎದುರು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.