ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಧಾನಿ ನರೇಂದ್ರ ಮೋದಿಯವರು ಮಹತ್ವಾಕಾಂಕ್ಷೆಯ ಯೋಜನೆಯಾದ ವಿಕಸಿತ ಭಾರತದಿಂದ ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಶಕ್ತಿ ಸಿಗಲಿದೆ ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅಭಿಪ್ರಾಯಪಟ್ಟರು.ಶನಿವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಆರ್ಯವೈಶ್ಯ ಶ್ರೀರಾಮ ಸೊಸೈಟಿಯ 100ನೇ ವರ್ಷ ವರ್ಷಾಚರಣೆ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದೆ ಮೈಸೂರು ಅರಸರು ಜನಸಾಮಾನ್ಯರಿಗಾಗಿ ಹಾಗೂ ಮುಂದಿನ ಪೀಳಿಗೆಯ ಏಳಿಗೆಗಾಗಿ ಅನೇಕ ಯೋಜನೆಗಳನ್ನು ನೀಡಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸರ್ವರೂ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.
ಪ್ರಧಾನಿ ಮೋದಿಯವರು 2047 ಸಾಲಿಗೆ ದೃಷ್ಟಿ ಇಟ್ಟುಕೊಂಡು ವಿಕಸಿತ ಭಾರತ ಕನಸು ಹೊಂದಿದ್ದಾರೆ. ಅದಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ವಿಶೇಷವಾಗಿ ದೇಶದ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಒಂದು ಸಹಕಾರಿ ಸಂಘ ಸ್ಥಾಪನೆ ಆಗಬೇಕು. ಆಗ ಮೂಲಕ ಪ್ರತಿಯೊಬ್ಬರೂ ಸ್ವಾವಲಂಬಿ ಬದುಕು ಸಾಗಿಸಬೇಕೆನ್ನುವುದು ಅವರ ಕಲ್ಪನೆಯಾಗಿದೆ. ಇದರಿಂದ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಶಕ್ತಿ ಸಿಗಲಿದೆ ಎಂದರು.ಮೈಸೂರು ಅರಸರು ಕಟ್ಟಿದ ಆಣೆಕಟ್ಟೆಗಳು, ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಹಕಾರ ಸಂಘಗಳು ಈಗಿನ ಜನರಿಗೆ ಫಲ ನೀಡುತ್ತಿವೆ. ಅದರಂತೆ ಮೋದಿ ಅವರು ಮೈಸೂರು ಅರಸರ ಪ್ರತಿಧ್ವನಿಯಾಗಿ ಇಡೀ ದೇಶದ ಏಳಿಗೆ ಹಾಗೂ ಮುಂದಿನ ಪೀಳಿಗೆಗೆ ಅನುಕೂಲವಾಗಲು ವಿಕಸಿತ ಭಾರತ ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಮೈಸೂರು ಅರಸರು ಸ್ಥಾಪಿಸಿದ ಆರ್ಯವೈಶ್ಯ ಶ್ರೀರಾಮ ಸೊಸೈಟಿಗೆ ಈಗ ನೂರರ ಸಂಭ್ರಮ. ಅಂದು ನೆಟ್ಟಿದ್ದ ಬೀಜ ಇಂದು ಎಲ್ಲರಿಗೂ ಫಲ ನೀಡುತ್ತಿದೆ. ಅನೇಕ ಸೊಸೈಟಿಗಳು ಸ್ಥಾಪನೆಯಾದ ನಾಲ್ಕೈದು ವರ್ಷಗಳಲ್ಲೇ ಮುಚ್ಚಿ ಹೋಗುವುದನ್ನು ನೋಡಿದ್ದೇವೆ. ಆದರೆ ಆರ್ಯವೈಶ್ಯ ಸೊಸೈಟಿಯ ಹಿರಿಯರು ಅದನ್ನು ಮುಚ್ಚಲು ಬಿಡದೆ ಹೆಮ್ಮರವಾಗಿ ಬೆಳೆಸಿರುವುದು ಶ್ಲಾಘನೀಯ ಎಂದರು.ಶಿವಮೊಗ್ಗ ಎಂದರೆ ಮಲೆನಾಡು. ಮೈಸೂರು ಅರಸರಿಗೆ ಅಚ್ಚು ಮೆಚ್ಚಿನ ತಾಣ. ಇಲ್ಲಿನ ಕೆಮ್ಮಣ್ಣಗುಂಡಿ ಗಿರಿಧಾಮ, ಸಾಗರ ಇತ್ಯಾದಿಗಳಲ್ಲಿ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಇಂದಿಗೂ ಶಿವಮೊಗ್ಗದೊಂದಿಗೆ ಮೈಸೂರು ಮನೆತನಕ್ಕೆ ಉತ್ತಮ ಬಾಂಧವ್ಯ ಇದೆ ಎಂದು ಸ್ಮರಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಮಾತನಾಡಿ, ಆರ್ಯವೈಶ್ಯ ಸಮಾಜದ ಪ್ರಮುಖರ ಪ್ರಯತ್ನ ದಿಂದ ಉತ್ತಮವಾದ ಸೊಸೈಟಿ ಸ್ಥಾಪನೆಯಾಗಿ ನೂರು ವರ್ಷ ದಾಟಿದೆ. ಇದರ ಬೆಳವಣಿಗೆಯಲ್ಲಿ ಎಲ್ಲರ ಪಾತ್ರ ಇದೆ ಎಂದರು.ಪ್ರಮುಖವಾಗಿ ಭಾರತದಲ್ಲಿ ಹಿಂದೂಗಳ ಪರಿಸ್ಥಿತಿ ಕಷ್ಟದಲ್ಲಿದೆ. ಬಾಂಗ್ಲಾದೇಶದಲ್ಲಿ ಶೇ.9ರಷ್ಟು ಹಿಂದೂಗಳಿದ್ದರೂ ಸಾರ್ವಜನಿಕ ದುರ್ಗಾಪೂಜೆಗೆ ಅವಕಾಶವಿಲ್ಲ. ಭಾರತದಲ್ಲಿ ಹಿಂದೂಗಳು ಶೇ.80 ರಷ್ಟಿದ್ದರೂ ಗಣಪತಿ ಮೆರವಣಿಗೆಗೆ ಕಲ್ಲು ತೂರುತ್ತಾರೆ. ಇಂತಹ ಪರಿಸ್ಥಿತಿ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು ಎಂದರು.
ಬೆಂಗಳೂರು ವಾಸವಿ ವಿದ್ಯಾಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅತಿಥಿಯಾಗಿ ಭಾಗವಹಿಸಿದ್ದರು. ಸೊಸೈಟಿ ಅಧ್ಯಕ್ಷ ಡಿ.ಎಂ.ಅರವಿಂದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿ.ಚೇತನ್ ಮೊದಲಾದವರು ಉಪಸ್ಥಿತರಿದ್ದರು.