ಕನ್ನಡಪ್ರಭ ವಾರ್ತೆ ಹಾಸನ

ಸಾಲವಾಗಿ ಕೊಟ್ಟಿದ್ದ 7 ಸಾವಿರ ರು.ಗಳನ್ನು ವಾಪಸ್‌ ಕೊಡಲಿಲ್ಲ ಎನ್ನುವ ಕಾರಣಕ್ಕೆ ಸ್ನೇಹಿತನನ್ನೇ ಅಪಹರಿಸಿ ಹಲ್ಲೆ ನಡೆಸಿ ಆತ ಸಾವನ್ನಪ್ಪಿದ ನಂತರ ಶವವನ್ನು ಸುಟ್ಟುಹಾಕಿರುವ ಘಟನೆಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ತಿಳಿಸಿದ್ದಾರೆ.ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಂ. ವರುಣ್ ಎಂಬ ಯುವಕನನ್ನು ಅಪಹರಿಸಿ ಎರಡು ದಿನಗಳ ಕಾಲ ನಿರಂತರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಪ್ರಕರಣದಲ್ಲಿ ಸತೀಶ್, ಉಮರ್, ವಿಜಯ ನಾಯಕ್, ದಾಸರಕೊಪ್ಪಲು ಚೇತನ್ ಹಾಗೂ ಮನು ಬಂಧಿತರಾಗಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಶಶಾಂಕ್ ಸೇರಿದಂತೆ ಇತರ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿರುವ ಮಾಹಿತಿ ಪ್ರಕಾರ, ಪ್ರಮುಖ ಆರೋಪಿ ಶಶಾಂಕ್ ವರುಣ್‌ಗೆ ೭ ಸಾವಿರ ಹಣ ನೀಡಿದ್ದನು. ಹಣವನ್ನು ಮರಳಿ ನೀಡದ ಹಿನ್ನೆಲೆಯಲ್ಲಿ ಉಂಟಾದ ವೈಮನಸ್ಸು ಹಂತ ಹಂತವಾಗಿ ದ್ವೇಷಕ್ಕೆ ತಿರುಗಿ ಕೊನೆಗೆ ಕೊಲೆಗೆ ಕಾರಣವಾಗಿದೆ. ಮಾರ್ಚ್ ೧೦ರಂದು ಬೈಕ್ ರಿಪೇರಿ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದ ವರುಣ್, ನಂತರ ಮನೆಗೆ ಮರಳಿರಲಿಲ್ಲ. ಇದೇ ದಿನ ಹಣಕಾಸು ವಿಚಾರಕ್ಕೆ ಸಂಬಂಧಿಸಿ ವರುಣ್ ಮತ್ತು ಆತನ ಸ್ನೇಹಿತ ಲೋಹಿತ್ ಅವರನ್ನು ಆರೋಪಿಗಳು ಕರೆದುಕೊಂಡು ಹೋಗಿ, ಹಾಸನ ತಾಲೂಕಿನ ಹಂಗರಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಬಂಧಿಸಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಹಿಂಸೆಯ ತೀವ್ರತೆ ಎಷ್ಟರ ಮಟ್ಟಿಗೆ ಇತ್ತು ಎಂದರೆ, ಇಬ್ಬರನ್ನೂ ನಿರಂತರವಾಗಿ ಹೊಡೆದು ಕಿರುಕುಳ ನೀಡಲಾಗಿತ್ತು. ಮಾರ್ಚ್ ೧೧ರಂದು ಮಧ್ಯಾಹ್ನ ನೀರು ತರಲು ಕಳುಹಿಸಿದ ಸಂದರ್ಭದಲ್ಲಿ ಲೋಹಿತ್ ಆರೋಪಿಗಳ ಕೈಯಿಂದ ತಪ್ಪಿಸಿಕೊಂಡು ಪಾರಾಗಿದ್ದು, ಸಮೀಪದ ಗ್ರಾಮಕ್ಕೆ ತೆರಳಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ವೇಳೆ ನಿರಂತರ ಹಲ್ಲೆಯಿಂದಾಗಿ ವರುಣ್ ಮೃತಪಟ್ಟಿದ್ದಾನೆ ಎಂದು ಎಸ್‌ಪಿ ವಿವರಿಸಿದರು. ಘಟನೆ ಬಳಿಕ ಆರೋಪಿಗಳು ತಮ್ಮ ಕೃತ್ಯವನ್ನು ಮುಚ್ಚಿಹಾಕಲು ಮೃತದೇಹವನ್ನು ಹಂಗರಹಳ್ಳಿಯಿಂದ ಗುಂಡೇಗೌಡನಕೊಪ್ಪಲಿಗೆ ಸಾಗಿಸಿ, ಎರಡು ದಿನಗಳ ಕಾಲ ಒಂದು ಕೊಠಡಿಯಲ್ಲಿ ಇಟ್ಟು ಬಳಿಕ ಮಾರ್ಚ್ ೧೩ರಂದು ಸುಟ್ಟುಹಾಕಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಮೂಲಕ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ್ದಾರೆ.ಮಾರ್ಚ್ ೧೫ರಂದು ವರುಣ್ ತಾಯಿ ಗಂಡಸಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ಮಾರ್ಚ್ ೧೯ರಂದು ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗುತ್ತಿದ್ದಂತೆ ಪ್ರಕರಣವು ನಾಪತ್ತೆಯಿಂದ ಕೊಲೆ ಪ್ರಕರಣವಾಗಿ ಪರಿವರ್ತನೆಗೊಂಡಿತು. ಮೃತದೇಹ ಸಂಪೂರ್ಣವಾಗಿ ಸುಟ್ಟಿರುವುದರಿಂದ ಗುರುತು ದೃಢೀಕರಣಕ್ಕಾಗಿ ಬಯೋಲಾಜಿಕಲ್ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ವೈದ್ಯಕೀಯ ವರದಿ ನಂತರ ಹೆಚ್ಚಿನ ವಿವರಗಳು ಲಭ್ಯವಾಗಲಿವೆ ಎಂದು ತಿಳಿಸಿದರು. ಬಂಧಿತ ಆರೋಪಿಗಳ ವಿರುದ್ಧ ಹಿಂದೆ ಯಾವುದೇ ಗಂಭೀರ ಅಪರಾಧ ಪ್ರಕರಣಗಳ ಹಿನ್ನೆಲೆ ಇಲ್ಲದಿದ್ದರೂ, ಗಾಂಜಾ ಸೇವನೆ ಕುರಿತ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಯುವಜನತೆಯಲ್ಲಿನ ಮದ್ಯ-ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ಎತ್ತಿ ತೋರಿಸುತ್ತಿದೆ.