ಸಾರಾಂಶ
ಮಂತ್ರಿ ಮಂಡಲದ ಸಚಿವರ ಮೊಗದಲ್ಲಿ ಕಿಂಚಿತ್ ಕಳೆಯಿಲ್ಲ. ಪಟ್ಟ ಬಿಟ್ಟುಕೊಡಬೇಕಾದ ‘ಡ್ಯೂ ಡೇಟ್’ ಹತ್ತಿರ ಬಂತಲ್ಲ ಎಂಬ ಸೂತಕ, ಸಂಭ್ರಮಕ್ಕಿಂತಲೂ ಭಯಂಕರವಾಗಿ ಕಾಡುತ್ತಿದೆ. ಸಾಧನಾ ಸಮಾವೇಶದ ಬೆನ್ನಲ್ಲೇ ಸರ್ಕಾರದ ‘ಕರಿಮಣಿ ಮಾಲೀಕತ್ವ’ಕ್ಕಾಗಿ ಭೀಕರ ಕದನ ನಡೆಯಲಿದೆ ಎಂಬ ಚರ್ಚೆ ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ದಟ್ಟವಾಗಿದೆ ಎಂದು ಸುನಿಲ್ ಕುಮಾರ್ ಪೋಸ್ಟ್ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಬಳ್ಳಾರಿಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡಲು ಹೊರಟ ಕಾಂಗ್ರೆಸ್ ಸರ್ಕಾರದಲ್ಲಿ ‘ಪ್ರೇತಕಳೆ’ ರಾರಾಜಿಸುತ್ತಿದೆ ಎಂದು ಕಾರ್ಕಳ ಶಾಸಕ ವ್ಯಂಗ್ಯವಾಡಿದ್ದಾರೆ.ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಮಂತ್ರಿ ಮಂಡಲದ ಸಚಿವರ ಮೊಗದಲ್ಲಿ ಕಿಂಚಿತ್ ಕಳೆಯಿಲ್ಲ. ಪಟ್ಟ ಬಿಟ್ಟುಕೊಡಬೇಕಾದ ‘ಡ್ಯೂ ಡೇಟ್’ ಹತ್ತಿರ ಬಂತಲ್ಲ ಎಂಬ ಸೂತಕ, ಸಂಭ್ರಮಕ್ಕಿಂತಲೂ ಭಯಂಕರವಾಗಿ ಕಾಡುತ್ತಿದೆ. ಸಾಧನಾ ಸಮಾವೇಶದ ಬೆನ್ನಲ್ಲೇ ಸರ್ಕಾರದ ‘ಕರಿಮಣಿ ಮಾಲೀಕತ್ವ’ಕ್ಕಾಗಿ ಭೀಕರ ಕದನ ನಡೆಯಲಿದೆ ಎಂಬ ಚರ್ಚೆ ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ದಟ್ಟವಾಗಿದ್ದು, ‘ಕೊರಳಿಗೆ ಬೆರಳು’ ಬೀಳುವ ದಿನ ಹತ್ತಿರವಾಗುತ್ತಿದೆ. ಆದಾಗಿಯೂ ಎರಡು ವರ್ಷದಲ್ಲಿ ನಯಾಪೈಸೆಯಷ್ಟೂ ಜನಪರ ಕೆಲಸ ಮಾಡದ ಈ ‘ದಂಡಪಿಂಡ’ ಸರ್ಕಾರ ಸಾಧನಾ ಸಮಾವೇಶ ನಡೆಸುತ್ತಿರುವುದು ಜನಾದೇಶದ ಕ್ರೂರ ವ್ಯಂಗ್ಯವಾಗಿದೆ ಎಂದಿದ್ದಾರೆ.
ಅಷ್ಟಕ್ಕೂ ಸಿದ್ದರಾಮಯ್ಯನವರೇ ನೀವು ಈ ರೀತಿ ಸಂಭ್ರಮಿಸುವುದಾದರೂ ಏಕೆ? ಈ ಬಗ್ಗೆ 14 ಪ್ರಶ್ನೆಗಳನ್ನು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.- ಅಭಿವೃದ್ಧಿ ನಿಧಿಯನ್ನು ಸಕಾಲಕ್ಕೆ ಬಿಡುಗಡೆ ಮಾಡದೇ ರಾಜ್ಯದ ಬೆಳವಣಿಗೆಯ ದರವನ್ನು ಹತ್ತು ವರ್ಷ ಹಿಂದೆ ತಳ್ಳಿದಕ್ಕಾಗಿಯೇ?- ಮರಣ ಪ್ರಮಾಣ ಪತ್ರದಿಂದ ಮೊದಲ್ಗೊಂಡು ಎಲ್ಲ ಸರ್ಕಾರಿ ಸೇವೆಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಸಿದಕ್ಕಾಗಿಯೇ?- ಕೇಂದ್ರ ಸರ್ಕಾರದ ಜತೆ ಕಾಲು ಕೆದರಿ ಜಗಳಕ್ಕೆ ನಿಂತು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಹಳ್ಳಹಿಡಿಸಿದಕ್ಕಾಗಿಯೇ ?- ರಾಜ್ಯವನ್ನು ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ತುಂಡು ಮಾಡುತ್ತಿರುವುದಕ್ಕಾಗಿಯೇ?- ಸರ್ವ ಜನಾಂಗದ ಶಾಂತಿಯ ತೋಟದ ಹೆಸರಿನಲ್ಲಿ ಹಿಂದು ಕಾರ್ಯಕರ್ತರ ರಕ್ತತರ್ಪಣ ಕೊಡುತ್ತಿರುವುದಕ್ಕಾಗಿಯೇ ?- ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಹಾಕಿದವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದಕ್ಕಾಗಿಯೇ ?- ಜಾತಿ ಗಣತಿ ವರದಿಯಲ್ಲಿ ಪ್ರವರ್ಗ ಪರಿಷ್ಕರಣೆ ಮಾಡಿ ಹಿಂದುಳಿದ ವರ್ಗದ ಒಗ್ಗಟ್ಟು ಒಡೆದಿದ್ದಕ್ಕಾಗಿಯೇ ?- ದಲಿತರ ಮೀಸಲು ವರ್ಗೀಕರಣ ವಿಚಾರವನ್ನು ಇನ್ನಷ್ಟು ಜಟಿಲಗೊಳಿಸಿದಕ್ಕಾಗಿಯೇ? - ಲೋಕಾಯುಕ್ತ ಸೇರಿದಂತೆ ಸ್ವಾಯತ್ತ ಸಂಸ್ಥೆಗಳನ್ನು ನುಂಗಿ- ನೀರು ಕುಡಿದಿದಕ್ಕಾಗಿಯೇ ?- ಬೆಂಗಳೂರಿನ ಮೂಲ ಸೌಕರ್ಯ ವ್ಯವಸ್ಥೆಯನ್ನು ಸುರಂಗ ಮಾರ್ಗದಲ್ಲಿ ಸಮಾಧಿ ಮಾಡಿದಕ್ಕಾಗಿಯೇ ?- ಭ್ರಷ್ಟಾಚಾರವನ್ನು ಶೇ100ಕ್ಕೆ ಹೆಚ್ಚಿಸಿದಕ್ಕಾಗಿಯೇ ?- ಎಸ್ ಸಿಎಸ್ ಪಿ, ಟಿಎಸ್ ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದಕ್ಕಾಗಿಯೇ ?-ಸಂವಿಧಾನ ಬಾಹಿರವಾಗಿ ಮುಸ್ಲಿಂರಿಗೆ ಸರ್ಕಾರಿ ಗುತ್ತಿಗೆ ಹಾಗೂ ಪೂರೈಕೆಯಲ್ಲಿ ಮೀಸಲು ಕಲ್ಪಿಸಿದಕ್ಕಾಗಿಯೇ ?ಮುಡಾ ಪ್ರಕರಣದ ಬಳಿಕ ಬೆಂಗಳೂರು ಬಿಟ್ಟು ರಾಜ್ಯ ಪ್ರವಾಸ ಮಾಡುವುದಕ್ಕೆ ಅಂಜುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರ ಈಗ ‘ಬೆಂಗಳೂರು- ಮೈಸೂರಿಗೆ’ ಮಾತ್ರ ಸೀಮಿತವಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಇಂಥ ಸಂದರ್ಭದಲ್ಲಿ ಸಮಾವೇಶ ನಡೆಸಿ ಏನನ್ನು ಸಾಧಿಸುತ್ತೀರಿ ?