ಜಾತಿ ಪತ್ರ ತಂದುಕೊಡಿ, ಸಾಲಮನ್ನಾ ಮಾಡ್ಸಿ!

| Published : Sep 27 2025, 12:00 AM IST

ಜಾತಿ ಪತ್ರ ತಂದುಕೊಡಿ, ಸಾಲಮನ್ನಾ ಮಾಡ್ಸಿ!
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಪ್ರಮಾಣ ಪತ್ರ ತಂದುಕೊಡಿ, ಸಾಲಮನ್ನಾ ಮಾಡಿಸಿ...!’ ಇದು ಸೆ.22ರಿಂದ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಗಣತಿದಾರರಿಗೆ ಕುಟುಂಬಸ್ಥರು ಕೇಳುತ್ತಿರುವ ಪ್ರಶ್ನೆಗಳು.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

‘ಜಾತಿ ಪ್ರಮಾಣ ಪತ್ರ ತಂದುಕೊಡಿ, ಸಾಲಮನ್ನಾ ಮಾಡಿಸಿ...!’ ಇದು ಸೆ.22ರಿಂದ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಗಣತಿದಾರರಿಗೆ ಕುಟುಂಬಸ್ಥರು ಕೇಳುತ್ತಿರುವ ಪ್ರಶ್ನೆಗಳು.

ಆರಂಭದ ದಿನದಿಂದಲೂ ಗಣತಿದಾರರು ಸರ್ವರ್‌ ಸಮಸ್ಯೆ, ತಾಂತ್ರಿಕ ದೋಷಗಳಿಂದ ರೋಸಿ ಹೋಗಿದ್ದಾರೆ. ಇದರ ನಡುವೆ ಈಗ ಸಮೀಕ್ಷೆಗೆ ತೆರಳಿದ ವೇಳೆ ಕುಟುಂಬ ಸದಸ್ಯರ ವಿಚಿತ್ರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪರದಾಡುತ್ತಿದ್ದಾರೆ.

ಗಣತಿದಾರರು ಸೇರಿದಂತೆ ಜನರಿಗೆ ಅರಿವಿನ ಕೊರತೆ, ಗೊಂದಲಮಯ ಪ್ರಶ್ನೆ ಮತ್ತು ಪದೇ ಪದೇ ತಾಂತ್ರಿಕ ದೋಷಗಳಿಂದಾಗಿ ಗಣತಿಗೆ ಈಗಾಗಲೇ ಹಲವು ಅಡೆತಡೆ ಎದುರಾಗಿದೆ. ಪ್ರಾರಂಭವಾದ ಕೇವಲ ನಾಲ್ಕು ದಿನಗಳಲ್ಲಿ ಗಣತಿದಾರರು ಹಲವಾರು ಸಮಸ್ಯೆ ಎದುರಿಸಿದ್ದಾರೆ. ಸರ್ವರ್‌ ಸಮಸ್ಯೆಯಿಂದ ಡೇಟಾ ಅಪ್‌ಲೋಡ್ ಮಾಡುವುದು ಕಷ್ಟಸಾಧ್ಯವಾಗುತ್ತಿದೆ. ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ವಿಶಿಷ್ಠ ಮನೆಯ ಐಡಿ (ಯುಎಚ್‌ಐಡಿ) ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಮತ್ತು ಸಮೀಕ್ಷಾ ಕಾಲಂಗಳು ಓಪನ್‌ ಆಗುತ್ತಿಲ್ಲ. ಹೀಗಾಗಿ, ಗಣತಿದಾರರು ಹತಾಶರಾಗುತ್ತಿದ್ದಾರೆ. ಇದರ ನಡುವೆ ಕುಟುಂಬಸ್ಥರ ಪ್ರಶ್ನೆಗಳಿಂದ ಗಣತಿದಾರರು ದಿಗ್ಭ್ರಾಂತರಾಗಿದ್ದಾರೆ.

ಸಾಲ ಮನ್ನಾ ಮಾಡಿಸಿಕೊಡಿ:

ಸಮೀಕ್ಷೆ ವೇಳೆ ಅನೇಕರು ಜಾತಿ ಅಥವಾ ಉಪ-ಜಾತಿಯ ವಿವರ ಬಹಿರಂಗಪಡಿಸಲು ನಿರಾಕರಿಸುತ್ತಿದ್ದಾರೆ. ಕೆಲವರು ನಾವು ನಮ್ಮ ಜಾತಿಯನ್ನು ಏಕೆ ಬಹಿರಂಗಪಡಿಸಬೇಕು? ಎಂದು ಗಣತಿದಾರರನ್ನು ಕೇಳುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಾತಿ ಪ್ರಮಾಣಪತ್ರ ಅಪ್‌ಲೋಡ್ ಮಾಡಬೇಕಾದ ಹಿಂದುಳಿದ ಸಮುದಾಯಗಳ ಜನರು, ನೀವೇ ನಮಗೆ ಪ್ರಮಾಣಪತ್ರ ವ್ಯವಸ್ಥೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಅದೇ ರೀತಿ ಸಾಲಗಳ ಬಗ್ಗೆ ಗಣಿತದಾರರ ಪ್ರಶ್ನೆಗೆ, ಅನೇಕರು ನಾವು ಬಡವರು, ಸಿಕ್ಕಾಪಟ್ಟೆ ಸಾಲ ಮಾಡಿದ್ದೇವೆ. ಸಾಲಮನ್ನಾ ಮಾಡುತ್ತೀರಾ? ಎಂದು ಕೇಳಿರುವ ಅನೇಕ ಉದಾಹರಣೆಗಳಿವೆ. ಇನ್ನು, ಜಾತಿ ಆಧಾರಿತ ತಾರತಮ್ಯದ ಕುರಿತಾದ ಪ್ರಶ್ನೆಗಳಿಗೆ ಗಣತಿದಾರರು ಸುಸ್ತಾಗಿ ಹೋಗುತ್ತಿದ್ದಾರೆ.

ಕೆಲವು ಗಣತಿದಾರರು ಕುಟುಂಬಗಳ ಸಂಪೂರ್ಣ ವಿವರ ಭರ್ತಿ ಮಾಡುವಲ್ಲಿ ಯಶಸ್ವಿಯಾದರೂ, ಡೇಟಾ ಸಲ್ಲಿಸಲು ಪ್ರಯತ್ನಿಸಿದಾಗ ಸಾಫ್ಟ್‌ವೇರ್ ಸ್ಥಗಿತಗೊಳ್ಳುತ್ತಿದೆ. ಇದರ ಪರಿಣಾಮ ಬೆರಳೆಣಿಕೆಯಷ್ಟು ಮನೆಗಳು ಮಾತ್ರ ಸೇರ್ಪಡೆಗೆ ಸಾಧ್ಯವಾಗುತ್ತಿದೆ ಎಂದು ಗಣತಿದಾರರು ಬೇಸರ ವ್ಯಕ್ತಪಡಿಸುತ್ತಾರೆ. ಕೆಲವು ಗಣತಿದಾರರು ತರಬೇತಿ ಪಡೆದಿದ್ದರೂ ಸಹ, ಸಮೀಕ್ಷಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಇತರ ಇಲಾಖೆಗಳಿಂದ ನಿಯೋಜಿತರಾದ ಅನೇಕರಿಗೆ ಇನ್ನೂ ತಮ್ಮ ಗೊತ್ತುಪಡಿಸಿದ ಪ್ರದೇಶಗಳ ಬಗ್ಗೆ ತಿಳಿದಿಲ್ಲ. ಸಮೀಕ್ಷೆ ಮಾಡುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಸಮೀಕ್ಷಾ ಕಾರ್ಯವನ್ನು ತಮ್ಮ ಸ್ವಂತ ಶಾಲೆಯ ವ್ಯಾಪ್ತಿಗೆ ಸೀಮಿತಗೊಳಿಸಬೇಕಿತ್ತು ಎಂಬ ಆಗ್ರಹವನ್ನು ಸಹ ವ್ಯಕ್ತಪಡಿಸಿದ್ದಾರೆ.

ಮುಂದುವರಿದ ಜಾತಿ ಗೊಂದಲ:

ಏತನ್ಮಧ್ಯೆ, ಜಾತಿ ಸಂಘಟನೆಗಳ ನಾಯಕರು, ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು ಧರ್ಮ, ಜಾತಿ ಮತ್ತು ಉಪಜಾತಿ ಘೋಷಿಸುವ ಬಗ್ಗೆ ಗೊಂದಲವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ, ಇದರಿಂದಾಗಿ ಜನರು ಮಾಹಿತಿ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಹೀಗಾಗಿ, ಸಮೀಕ್ಷೆ ಮಾಡಲು ಗಣಿತದಾರರು ಹತ್ತು ಹಲವು ರೀತಿಯಲ್ಲಿ ಒತ್ತಡಕ್ಕೆ ಒಳಗಾತ್ತಿದ್ದಾರೆ.---

ಕೋಟ್‌....

ಗಣತಿದಾರರು ಸಮೀಕ್ಷೆಯ ಉದ್ದೇಶಗಳನ್ನು ಮೊದಲಿಗೆ ಜನರಿಗೆ ಸ್ಪಷ್ಟವಾಗಿ ವಿವರಿಸಬೇಕು. ಈ ಮೂಲಕ ಕುಟುಂಬಗಳಲ್ಲಿ ನಿಧಾನವಾಗಿ ನಂಬಿಕೆ ಬೆಳೆಸಿದರೆ, ಜನರು ಸಹಕರಿಸುತ್ತಾರೆ. ಕಲ್ಯಾಣ ಯೋಜನೆಗಳನ್ನು ರೂಪಿಸಲು ಸಮೀಕ್ಷೆ ನಡೆಸಲಾಗುತ್ತಿದೆ. ತೊಂದರೆಗಳನ್ನು ಎದುರಿಸುತ್ತಿರುವ ಗಣತಿದಾರರಿಗಾಗಿ ಸಹಾಯವಾಣಿ ಸ್ಥಾಪಿಸಲಾಗಿದೆ. ಅವರು ಅದನ್ನು ಆತ್ಮವಿಶ್ವಾಸದಿಂದ ಬಳಸಬೇಕು ಮತ್ತು ಅವರಿಗೆ ನಿಯೋಜಿಸಲಾದ ಕಾರ್ಯವನ್ನು ಪೂರ್ಣಗೊಳಿಸಬೇಕು. ನಾನು ಸಹ ನಿರಂತರವಾಗಿ ಸಮೀಕ್ಷೆಯ ಮೇಲ್ವಿಚಾರಣೆ ಮಾಡುತ್ತಿದ್ದು, ಈವರೆಗೆ 6,800 ಮನೆಗಳ ಡೇಟಾ ಸಂಗ್ರಹಿಸಲಾಗಿದೆ.

- ದಿವ್ಯಪ್ರಭು, ಜಿಲ್ಲಾಧಿಕಾರಿ, ಧಾರವಾಡ.