ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯ ನಮಗೂ ಕೊಡಿ

| Published : Sep 09 2025, 01:01 AM IST

ಸಾರಾಂಶ

ಹಲವಾರು ವರ್ಷಗಳಿಂದ ಆಟೋ ರಿಕ್ಷಾಗಳನ್ನೇ ನಂಬಿಕೊಂಡು ತಮ್ಮ ಉಪಜೀವನ ನಡೆಸುತ್ತಿರುವ ಆಟೋ ಚಾಲಕರು, ಉಚಿತ ಪ್ರಯಾಣದಂತಹ ಯೋಜನೆಯಿಂದ ಗ್ರಾಹಕರಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದರಿಂದ ಚಾಲಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಹುಬ್ಬಳ್ಳಿ: ಕಟ್ಟಡ ಕಾರ್ಮಿಕರಿಗೆ ಸಿಗುವಂತಹ ಎಲ್ಲ ಸೌಲಭ್ಯಗಳನ್ನು ಆಟೋ ಚಾಲಕರಿಗೂ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಚೆನ್ನಮ್ಮ್ಮ ಸರ್ಕಲ್‌ನಲ್ಲಿ ಸಮಾವೇಶಗೊಂಡ ನೂರಾರು ಆಟೋ ಚಾಲಕರು, ಅಲ್ಲಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಸಂಚರಿಸಿ ಮಿನಿ ವಿಧಾನಸೌಧ ಆವರಣದ ತಹಸೀಲ್ದಾರ್ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿದರು.

ಈ ವೇಳೆ ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಯ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಹಲವಾರು ವರ್ಷಗಳಿಂದ ಆಟೋ ರಿಕ್ಷಾಗಳನ್ನೇ ನಂಬಿಕೊಂಡು ತಮ್ಮ ಉಪಜೀವನ ನಡೆಸುತ್ತಿರುವ ಆಟೋ ಚಾಲಕರು, ಉಚಿತ ಪ್ರಯಾಣದಂತಹ ಯೋಜನೆಯಿಂದ ಗ್ರಾಹಕರಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದರಿಂದ ಚಾಲಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೋರ್ಟ್ ಆದೇಶದ ಅನ್ವಯ ಯಾತ್ರಿ, ಓಲಾ, ಉಬರ್, ಜಿಗ್ನೊ ಸೇರಿದಂತೆ ಹಲವಾರು ಟ್ರಾವೆಲ್ಸ್ ಏಜೆನ್ಸಿಗಳನ್ನು ಬಂದ್ ಮಾಡಲಾಗಿದೆ. ಅದನ್ನು ಯಾವುದೇ ಕಾರಣಕ್ಕೂ ಪುನಃ ಆರಂಭಿಸಲು ಸರ್ಕಾರ ಅನುಮತಿ ನೀಡಬಾರದು. ಗುತ್ತಿಗೆ ಆಧಾರದ ಮೇಲೆ ಎರಡು, ಮೂರು ಚಕ್ರದ ವಾಹನ ಬಾಡಿಗೆ ನೀಡದಂತೆ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಸೇವೆ ನೀಡಿ: ಈ ವೇಳೆ ಸಂಘಟನೆ ರಾಜ್ಯಾಧ್ಯಕ್ಷ ಶೇಖರಯ್ಯಾ ಮಠಪತಿ ಮಾತನಾಡಿ, ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಆಟೋ ಚಾಲಕರಿಗೂ ನೀಡಬೇಕು. ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು. ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಕುಟುಂಬಕ್ಕೆ ಉಚಿತ ಆರೋಗ್ಯ ಸೇವೆ ನೀಡಬೇಕು ಎಂದು ಒತ್ತಾಯಿಸಿದರು.

ಕೂಡಲೇ ಸರ್ಕಾರ ಹಾಗೂ ಕಾರ್ಮಿಕ ಸಚಿವರು ಆಟೋ ರಿಕ್ಷಾ ಚಾಲಕರಿಗೆ ಸಮುದಾಯ ಭವನ ನಿರ್ಮಿಸಿಕೊಡಬೇಕು. ಸರ್ಕಾರದಿಂದಲೇ ಆಟೋ ರಿಕ್ಷಾ ಚಾಲಕರ ದಿನ ಆಚರಿಸುವಂತಾಗಬೇಕು. ಜತೆಗೆ ಬ್ಯಾಡ್ಜ್, ಎನ್‌ಟಿ, ಎಲ್‌ಎಂವಿ ಲೈಸೆನ್ಸ್ ಹೊಂದಿದ ವಾಹನಗಳಿಗೆ ಮೊದಲ ಹಂತದಲ್ಲಿ ಕಾರ್ಮಿಕರ ಕಾರ್ಡ್ ನೀಡಬೇಕು. ಜತೆಗೆ ಸರ್ಕಾರದಿಂದ ಇತರೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದರು.

ನಂತರ ತಹಸೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮತ್ತು ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜೀವನ್ ಉತ್ಕುರಿ, ರಫೀಕ್ ಕುಂದಗೋಳ, ರಾಜೇಶ ಬಿಜವಾಡ, ದಾವೂದ್ ಅಲಿಶೇಖ್, ಮಹಾವೀರ ಬಿಲಾನ್, ಮಲ್ಲಿಕಾರ್ಜುನ ನಂದಿಹಾಳ, ದಾವಲಸಾಬ್ ಕುರಹಟ್ಟಿ, ಗುರು ಬೆಟಗೇರಿ, ಮುರುಳಿ ಇಂಗಳಹಳ್ಳಿ, ಬಾಬರ್ ಜಮಖಾನ್, ಸಾದಿಕ್ ತಡಕೋಡ, ಅಮರ ಗದಗ, ಲೋಕೇಶ ಚಿಕ್ಕಮಗಳೂರ, ಅಮರೇಶ, ಶ್ರೀಕಾಂತ ಗಡಾದ, ಕಲ್ಲಪ್ಪ ಅಣ್ಣಿಗೇರಿ, ಶಿವರಾಜ ಸಿಂಗನಹಳ್ಳಿ, ಮಹೇಶ ದೊಡ್ಡಮನಿ, ಅಣ್ಣಪ್ಪ ಗುಡಿಹಾಳ ಸೇರಿದಂತೆ ಅನೇಕರಿದ್ದರು.