ಸಾರಾಂಶ
ಕುಮಟಾ:
ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಕಾಮಗಾರಿ ನಡೆಸಿ ದೀವಳ್ಳಿ ಬಳಿ ಅಘನಾಶಿನಿ ನದಿ ನೀರೆತ್ತುವ ಮುನ್ನ ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನದಿಯಲ್ಲಿ ನೀರಿನ ಲಭ್ಯತೆ ಬಗ್ಗೆ ಶಾಸಕ ದಿನಕರ ಶೆಟ್ಟಿ ಖಚಿತಪಡಿಸಿ ಜವಾಬ್ದಾರಿ ಹೊರಬೇಕು. ಇಲ್ಲದಿದ್ದರೆ ವೃಥಾ ಕಾಮಗಾರಿಯಿಂದ ಸರ್ಕಾರದ ನೂರಾರು ಕೋಟಿ ಹಣ ಪೋಲು ಮಾಡುವುದಾದರೆ ಸಾರ್ವಜನಿಕ ಹೋರಾಟ ಅನಿವಾರ್ಯ ಎಂದು ಸಾಮಾಜಿಕ ಕಾರ್ಯಕರ್ತ ಭಾಸ್ಕರ ಪಟಗಾರ ತಿಳಿಸಿದರು.ಈ ಬಗ್ಗೆ ಜೆಜೆಎಂ ಬಹುಗ್ರಾಮ ಯೋಜನೆಯಡಿ ಅಘನಾಶಿನಿ ನದಿ ನೀರು ಎತ್ತಲಾಗುವ ದೀವಳ್ಳಿಯಲ್ಲಿ ನದಿಪಾತ್ರಕ್ಕೆ ಬುಧವಾರ ತೆರಳಿದ ಭಾಸ್ಕರ ಪಟಗಾರ ಸ್ಥಳೀಯರೊಂದಿಗೆ ಚರ್ಚಿಸಿದರು. ಈ ವೇಳೆ ಸೊಪ್ಪಿನಹೊಸಹಳ್ಳಿ, ಸಂತೇಗುಳಿ ಭಾಗದ ಕೃಷಿಕರು ಸಮಸ್ಯೆ ವಿವರಿಸಿ ಕಳೆದ ಕೆಲ ವರ್ಷಗಳಿಂದ ಅಘನಾಶಿನಿ ನದಿಯಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ನೀರು ಬತ್ತುತ್ತಿದೆ. ದೀವಳ್ಳಿಯಿಂದ ಮರಾಕಲ್ ಯೋಜನೆಯಡಿ ಕುಮಟಾ-ಹೊನ್ನಾವರಕ್ಕೆ ಈಗಾಗಲೇ ನೀರು ಸರಬರಾಜು ವ್ಯವಸ್ಥೆ ಚಾಲ್ತಿಯಲ್ಲಿದ್ದು ಆ ಯೋಜನೆಗೂ ನೀರಿನ ತತ್ವಾರವಾಗುತ್ತದೆ. ಹೀಗಾಗಿ ಜೆಜೆಎಂ ಯೋಜನೆಯ ನೀರೆತ್ತುವ (ಪಂಪ್‌ಹೌಸ್) ಸ್ಥಳ ಬದಲಾವಣೆ ಮಾಡಬೇಕೆಂದು ಶಾಸಕ ದಿನಕರ ಶೆಟ್ಟಿ ಅವರಿಗೆ ಒತ್ತಾಯಿಸಿದ್ದೆವು. ಶಾಸಕರು ಸ್ಥಳ ವೀಕ್ಷಣೆ ಮಾಡಿ ನಿರ್ಧರಿಸುವುದಾಗಿ ತಿಳಿಸಿದ್ದರು. ಆದರೆ ಬದಲಾವಣೆಯೂ ಆಗಿಲ್ಲ. ಆದರೆ, ಯೋಜನೆಯ ಕಾಮಗಾರಿ ಈ ಭಾಗದಲ್ಲಿ ನಡೆದಿದೆ ಎಂದು ತಿಳಿಸಿದರು.ಕೇಂದ್ರ ಸರ್ಕಾರದ ₹ ೧೯೯ ಕೋಟಿ ವೆಚ್ಚದಲ್ಲಿ ೧೪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಪೂರೈಸಲಿರುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ಜನ ವಿರೋಧದ ನಡುವೆಯೂ ಹಲವೆಡೆ ನಡೆದಿದೆ. ದೀವಳ್ಳಿಯಲ್ಲಿ ನದಿಯಲ್ಲಿ ಈಗಲೇ ಮರಾಕಲ್ ಕುಮಟಾ-ಹೊನ್ನಾವರ ಜಂಟಿ ಯೋಜನೆಗೆ ಸಮರ್ಪಕ ನೀರಿಲ್ಲ. ಮತ್ತೊಂದು ಬೃಹತ್ ಯೋಜನೆಗೆ ಎಲ್ಲಿಂದ ನೀರು ಕೊಡಲು ಸಾಧ್ಯ. ಯೋಜನೆಯನ್ನು ಸಮರ್ಪಕವಾಗಿ ಮಾಡದೇ ಇರುವ ಕಾರಣಕ್ಕೆ ಭವಿಷ್ಯದಲ್ಲಿ ನೀರಿನ ಕೊರತೆಯಿಂದ ನೂರಾರು ಕೋಟಿ ಕಾಮಗಾರಿ ವ್ಯರ್ಥವಾಗಬಾರದು. ಸ್ಥಳೀಯ ಕೃಷಿಕರಿಗೂ ಸಮಸ್ಯೆಯಾಗಬಾರದು. ಈ ನಿಟ್ಟಿನಲ್ಲಿ ಒಂದು ವಾರದೊಳಗೆ ಸೂಕ್ತ ನಿರ್ಣಯ ಕೈಗೊಳ್ಳದಿದ್ದರೆ ಬೃಹತ್ ಹೋರಾಟ ಮಾಡೋಣ. ಆದ್ದರಿಂದ ಈ ಬಗ್ಗೆ ಶಾಸಕ ದಿನಕರ ಶೆಟ್ಟಿ ಅವರನ್ನು ಜಲಮೂಲದ ಗ್ಯಾರಂಟಿ ಕೊಡಿ ಎಂದು ಗಮನ ಸೆಳೆದಿದ್ದೇನೆ ಎಂದು ತಿಳಿಸಿದರು.ಸ್ಥಳೀಯರಾದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಲ್ವದಾರ್ ಅಂಬ್ರೋಸ್, ಮೋಹನ ನಾಯ್ಕ, ಸಾತು ಗೌಡ, ತುಳಸು ಗೌಡ, ಸಂತೋಷ ಇನ್ನಿತರರು ಇದ್ದರು.