ಕಾಂಗ್ರೆಸ್‌ನಿಂದ ಜಿಲ್ಲೆಗೆ ವಂಚನೆ ಆರೋಪ । ಸಚಿವರಿಗೆ ಪ್ರತಿಭಟನೆ ಬಿಸಿ । ಪ್ರತಿಭಟನಾಕಾರರು ವಶಕ್ಕೆ

------

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯದ ಕಾಂಗ್ರೆಸ್‌ ಸರ್ಕಾರ ಜಿಲ್ಲೆಗೆ ಸಚಿವ ಸ್ಥಾನ ನೀಡದೇ ವಂಚಿಸಿರುವುದನ್ನು ಖಂಡಿಸಿ ಉಸ್ತುವಾರಿ ಸಚಿವ ಡಾ.ಅಜಯ್‌ ಧರ್ಮಸಿಂಗ್‌ ಅವರ ವಿರುದ್ಧ ಗೋಬ್ಯಾಕ್‌ ಹೋರಾಟ ನಡೆಸಲಾಯಿತು. ಸಚಿವರಿಗೆ ಘೇರಾವ್‌ ಹಾಕಲು ಯತ್ನಿಸಿದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದುಕೊಂಡು ಹೋಗಿ ಬಿಡುಗಡೆಗೊಳಿಸಿದರು. ಇದು ಒಂದು ಕಡೆಯಾದರೆ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಉಸ್ತುವಾರಿ ಸಚಿವರಿಗೆ ಸಾಲು ಸಾಲು ಪ್ರತಿಭಟನೆಗಳ ಬಿಸಿ ತಟ್ಟಿತು. ರಾಷ್ಟ್ರಧ್ವಜಾರೋಹಣ ನಂತರ ಸುದ್ದಿಗೋಷ್ಠಿ ನಡೆಸಿದ ಸಚಿವರು ಉಳಿದ ಸಮಯದಲ್ಲಿ ವಿವಿಧ ಸಂಘಟನೆಗಳಿಂದ ಮನವಿ ಪಡೆದರು.

ಸ್ಥಳೀಯ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ರಾಯಚೂರು ಜಿಲ್ಲಾ ನಾಗರಿಕರ ಸಮಿತಿ, ಕರವೇ (ಶಿವರಾಮೇಗೌಡ ಬಣ) ಮುಖಂಡರು ಜಿಲ್ಲೆಗೆ ಸಚಿವ ಸ್ಥಾನ ನೀಡದೇ ವಂಚಿಸಿರುವುದನ್ನು ಹಾಗೂ ಹೊರ ಜಿಲ್ಲೆಯ ಡಾ.ಅಜಯಸಿಂಗ್ ಅವರಿಗೆ ಉಸ್ತುವಾರಿ ನೀಡಿದ್ದನ್ನು ಖಂಡಿಸಿ ಗೋ ಬ್ಯಾಕ್, ಗೋಬ್ಯಾಕ್ ಅಜಯಸಿಂಗ್ ಗೋಬ್ಯಾಕ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಹಿರಿಯ ಹೋರಾಟಗಾರ ವಕೀಲ ಎಸ್ ಮಾರೆಪ್ಪ, ರವೀಂದ್ರನಾಥ ಪಟ್ಟಿ, ಅಶೋಕ ಕುಮಾರ ಸಿ.ಕೆ ಜೈನ್,ವಿಶ್ವನಾಥ ಪಟ್ಟಿ,ಅಮರೇಗೌಡ ಪಾಟೀಲ, ನರಸಪ್ಪ, ಜೈ ಭೀಮ್‌ ವಲ್ಲಭ ಇತರರು ಇದ್ದರು

ಸಚಿವರಿಗೆ ಮನವಿ: ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆ ಸದಸ್ಯರು ಸರ್ಕಾರಿ ಶಾಲೆಗಳ ಉಳಿವು ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ವಿದ್ಯಾ ಪಾಟೀಲ್, ರಾಧ, ಸಾವಿತ್ರಮ್ಮ, ರೇಣುಕಮ್ಮ, ಅಕ್ಕಮ್ಮ, ಶಾಂಭವಿ, ಹನುಮೇಶ, ಬಸವರಾಜ, ಗುರುರಾಜ ಪಾಟೀಲ್, ಮರಿಯಮ್ಮ, ಇಂದ್ರಮ್ಮ, ಸೈಯದ್ ಹಫಿಜುಲ್ಲಾ ಸೇರಿದಂತೆ ಅನೇಕರು ಇದ್ದರು.

ಧರಣಿ ಸ್ಥಳಕ್ಕೆ ಭೇಟಿ: ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಕಳೆದ 8 ವರ್ಷಗಳಿಂದ ಜಿಲ್ಲೆಯ ವಿವಿಧ ಸ್ಲಂ ಹಾಗೂ ವಿಶೇಷ ವರ್ಗದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಆಗ್ರಹಿಸಿ ದಲಿತ ಸಮರ ಸೇನೆ ಹಾಗೂ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ಅಹೋರಾತ್ರಿ ಪ್ರತಿಭಟನಾ ಧರಣಿ ಸ್ಥಳಕ್ಕೆ ಸಚಿವ ಡಾ.ಅಜಯ್‌ ಧರ್ಮಸಿಂಗ್‌ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಈ ವೇಳೆ ಡಿಸಿ, ಮುಖಂಡರು, ಸಮಿತಿ ಪದಾಧಿಕಾರಿಳು,ಸದಸ್ಯರು,ಮಹಿಳೆಯರು ಇದ್ದರು.

-----ಬಾಕ್ಸ್‌----

ಏಮ್ಸ್ ಮಂಜೂರಾತಿಗೆ ದೆಹಲಿಗೆ ನಿಯೋಗ:

ರಾಯಚೂರು ಜಿಲ್ಲಾ ಏಮ್ಸ್ (AIIMS) ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಶನಿವಾರಕ್ಕೆ 1556 ನೇ ದಿನ ಪೂರೈಸಿದೆ. ಧರಣಿ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಡಾ.ಅಜಯ್ ಧರ್ಮಸಿಂಗ್‌ ಅವರು ಮನವಿ ಸ್ವೀಕರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರಿಗೆ ಏಮ್ಸ್ ಸಂಸ್ಥೆಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಲೇಬೇಕು. ಈಗಾಗಲೇ ನಮ್ಮ ಸರ್ಕಾರ ಅನೇಕ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ, ಆದರೆ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳಿದೆ, ಆದಷ್ಟು ಶೀಘ್ರದಲ್ಲಿಯೇ ನಿಯೋಗದ ಮೂಲಕ ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ದ ಅವರನ್ನು ಭೇಟಿ ಮಾಡಿ ಮಹತ್ವಾಕಾಂಕ್ಷಿ ಜಿಲ್ಲೆ, ರಾಯಚೂರಿಗೆ ಏಮ್ಸ್ ಸಂಸ್ಥೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸಲಾಗುತ್ತದೆ ಎಂದು ಭರವಸೆ ನೀಡಿದರು. ಈ ವೇಳೆ ಸಮಿತಿ ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರಾ,ರಂಜಿತ, ದುಳ್ಳಯ್ಯ ಗುಂಜಳ್ಳಿ, ಗೋವಿಂದ ಈಟೇಕಲ್‌, ಜಕ್ರಪ್ಪ, ಅನೀಲ್ ಕುಮಾರ, ಭೀಮೇಶ, ಹನುಂತ ಇದ್ದರು.

-----ಫೋಟೊ-------

15ಕೆಪಿಆರ್‌ಸಿಆರ್‌ 04: ರಾಯಚೂರಿನ ಉಸ್ತುವಾರಿ ಸಚಿವ ಡಾ.ಅಜಯ್‌ ಧರ್ಮಸಿಂಗ್‌ ವಿರುದ್ಧ ಗೋಬ್ಯಾಕ್‌ ಹೋರಾಟ ನಡೆಸಿದವರನ್ನು ಪೊಲೀಸರು ವಶಕ್ಕೆ ಪಡೆದು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಬಿಡುಗಡೆಗೊಳಿಸಿದರು.

------------------------

ಕರವೇ ಮನವಿ: ಜಿಲ್ಲೆಯಲ್ಲಿ ಸಿ.ಹೆಚ್. ಪೌಡರ್ ಮಿಶ್ರಿತ ಹೆಂಡ ಹಾಗೂ ಅನಧಿಕೃತ ಮದ್ಯ ಮಾರಾಟವನ್ನು ತಡೆಯುವುದರ ಜೊತೆಗೆ, ಪರವಾನಗಿ ಪಡೆದ ಮದ್ಯದ ಅಂಗಡಿಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ವ್ಯವಹಾರ ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ (ಟಿ.ಎ.ನಾರಾಯಣಗೌಡ ಬಣ) ಜಿಲ್ಲಾ ಸಮಿತಿಯ ಕಾರ್ಯಕರ್ತರು ಸಚಿವರಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಕೇಂದ್ರ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಪಂ ವ್ಯಾಪ್ತಿಯ ಗ್ರಾಮಗಳು, ದೊಡ್ಡಿಗಳು, ತಾಂಡಾಗಳು, ಕ್ಯಾಂಪ್‌ಗಳು, ವಾರ್ಡ್‌ಗಳು ಹಾಗೂ ಸ್ಲಂ ಪ್ರದೇಶಗಳಲ್ಲಿ ಅನಧಿಕೃತ ಮದ್ಯ ಮಾರಾಟ ನಡೆಯುತ್ತಿದೆ ಎಂದು ದೂರಿದರು. ಯುವಜನರು, ರೈತರು ಹಾಗೂ ಕೂಲಿ ಕಾರ್ಮಿಕರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಹದಗೆಡುತ್ತಿದ್ದು, ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಈ ಹಿನ್ನೆಲೆಯಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ಜಿಲ್ಲೆಯ ಜನತೆಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಸಮಿತಿ ಜಿಲ್ಲಾಧ್ಯಕ್ಷ ವಿನೋದರೆಡ್ಡಿ, ಬಸವರಾಜ, ರಾಜಾಸಾಬ್ ಗಾಂಧಿನಗರ, ನಂದಪ್ಪ ಮಡ್ಡಿ ಸಾದೀಕ್ ಸೇರಿ ಇತರರು ಇದ್ದರು.ಎಂಆರ್‌ಎಚ್‌ಎಸ್‌ನಿಂದ ಮನವಿ : ಜಿಲ್ಲೆ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ದಲಿತ ಮುಖಂಡ ಭೂಮಾನಂದನ ಕೊಲೆ ಖಂಡನೀಯವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಮೃತವ್ಯಕ್ತಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಮಾದಿಗ ದಂಡೋರಾ-ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು.