ದೇಸೀ ಗೋತಳಿ ಉಳಿವು ಅತ್ಯಗತ್ಯ: ವಜ್ರದೇಹಿ ಸ್ವಾಮೀಜಿ ಕರೆ

| Published : Dec 17 2023, 01:45 AM IST

ಸಾರಾಂಶ

ಪ್ರಸ್ತುತ ದೇಸಿ ಗೋವುಗಳ ಸಂತತಿ ಅಳಿವಿನ ಅಂಚಿನಲ್ಲಿದ್ದು, ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಸಮಾಜದ ಮೇಲಿದೆ. ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಕರೆ ನೀಡಿದ್ದಾರೆ. ಗೋವರ್ಧನ ಪೂಜೆ ಹಾಗೂ ಗೋವಿಗಾಗಿ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಸ್ತುತ ದೇಸಿ ಗೋವುಗಳ ಸಂತತಿ ಅಳಿವಿನ ಅಂಚಿನಲ್ಲಿದ್ದು, ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಸಮಾಜದ ಮೇಲಿದೆ. ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.ವಿಶ್ವಹಿಂದು ಪರಿಷತ್‌ನ ಸೇವಾ ಪ್ರಕಲ್ಪವಾದ ಗೋವನಿತಾಶ್ರಯ ಟ್ರಸ್ಟ್‌ ಹಾಗೂ ಗೋವರ್ಧನ ಪೂಜಾ ಸಮಿತಿ ಮಂಗಳೂರು ವತಿಯಿಂದ ನಗರದ ಕದ್ರಿ ಮೈದಾನದಲ್ಲಿ ಹಮ್ಮಿಕೊಂಡಿರುವ ಗೋವರ್ಧನ ಪೂಜೆ ಹಾಗೂ ಗೋವಿಗಾಗಿ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಅವರು ಆಶೀರ್ವಚನ ನೀಡಿದರು.ಜೀವನದಲ್ಲಿ ಪುಣ್ಯ ಸಂಪಾದನೆಗೆ ಎಲ್ಲರೂ ಗೋಸೇವೆ ಮಾಡಬೇಕು. ಪಜೀರು ಬೀಜಗುರಿಯ ಗೋಶಾಲೆಗೆ ನೆರವು ನೀಡುವ ಮೂಲಕ ಪುಣ್ಯ ಗಳಿಸುವ ಅವಕಾಶ ನಮ್ಮ ಮುಂದಿದೆ. ಅದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಗೋವನಿತಾಶ್ರಯ ಟ್ರಸ್ಟ್‌ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್‌, ಗೋವುಗಳ ರಕ್ಷಣೆಗಾಗಿ ಗೋವನಿತಾಶ್ರಯ ಟ್ರಸ್ಟ್‌ ಮೂಲಕ ಪಜೀರಿನಲ್ಲಿ ಗೋಶಾಲೆ ತೆರೆಯಲಾಗಿದ್ದು, ಪ್ರಸ್ತುತ ಅಲ್ಲಿ 400ಕ್ಕೂ ಅಧಿಕ ಗೋವುಗಳಿವೆ. ಒಂದು ಗೋವನ್ನು ಸಾಕಲು ವಾರ್ಷಿಕ 15 ಸಾವಿರ ರು. ಖರ್ಚು ಅಂದಾಜಿಸಲಾಗಿದ್ದು, ಗೋವುಗಳ ಪಾಲನೆಗೆ ಸಮಾಜದ ಸಹಕಾರ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗೋವನಿತಾಶ್ರಯ ಟ್ರಸ್ಟ್‌ನ ಟ್ರಸ್ಟಿ ಡಾ.ಪಿ. ಅನಂತಕೃಷ್ಣ ಭಟ್‌, ಗೋವುಗಳನ್ನು ರಕ್ಷಿಸುವ ಬಜರಂಗದಳದ ಗೋರಕ್ಷಾ ಕಾರ್ಯಕರ್ತರ ಕೆಲಸ ಸ್ತುತ್ಯರ್ಹ. ಕಸಾಯಿಖಾನೆಗೆ ಸಾಗಿಸುವ ವೇಳೆ ರಕ್ಷಣೆಗೊಂಡ ಗೋವುಗಳ ಸಹಿತ ದನಕರುಗಳನ್ನು ಪಜೀರಿನ ಗೋಶಾಲೆಯಲ್ಲಿ ಸಾಕಲಾಗುತ್ತಿದೆ. ಅವುಗಳ ಆಹಾರಕ್ಕೆ ಪ್ರತಿ ತಿಂಗಳು ಲಕ್ಷಾಂತರ ರೂ. ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಸಹಕಾರ ಯಾಚಿಸಲಾಗುತ್ತಿದೆ. ಇಂದಿನ ಮಕ್ಕಳಿಗೆ ಗೋವುಗಳನ್ನು ವೀಕ್ಷಿಸಲು, ಕರುಗಳ ಜತೆ ಆಟವಾಡಲು ಗೋವರ್ಧನ ಪೂಜೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.ವಿಹಿಂಪ ಮುಖಂಡ ಕೃಷ್ಣಮೂರ್ತಿ, ಬಾಲಂಭಟ್‌ ಮನೆತನದ ಗಿರಿಧರ ಭಟ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್‌ಕುಮಾರ್‌ ರೈ ಬೋಳಿಯಾರ್‌, ಪಾಲಿಕೆ ಸದಸ್ಯೆ ಶಕೀಲಾ ಕಾವ, ಬಿಲ್ಡರ್‌ಗಳಾದ ಲಕ್ಷ್ಮೇಶ ಭಂಡಾರಿ, ಕರುಣಾಕರ್‌, ಉದ್ಯಮಿ ರತ್ನಾಕರ ಜೈನ್‌, ಪ್ರಮುಖರಾದ ಶರವು ಗಣೇಶ ಭಟ್‌, ಪ್ರದೀಪ್‌ ಪಂಪ್‌ವೆಲ್‌ ಇದ್ದರು.

ಶ್ರೀ ಗೋವರ್ಧನ ಪೂಜಾ ಸಮಿತಿ ಅಧ್ಯಕ್ಷ ಜಗದೀಶ ಕೆ.ಶೇಣವ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿಹಿಂಪ ಜಿಲ್ಲಾ ಸಹಕಾರ್ಯದರ್ಶಿ ರವಿ ಅಸೈಗೋಳಿ ವಂದಿಸಿದರು. ಜಿಲ್ಲಾ ಪ್ರಚಾರ ಪ್ರಮುಖ್‌ ಆಶಿಕ್‌ ಗೋಪಾಲಕೃಷ್ಣ ನಿರೂಪಿಸಿದರು.ಇಂದು ಸಮಾರೋಪ: ಪಜೀರಿನ ಗೋಶಾಲೆಯಿಂದ 50ಕ್ಕೂ ಹೆಚ್ಚು ದನಕರುಗಳನ್ನು ಕರೆತಂದು ಕದ್ರಿ ಮೈದಾನದಲ್ಲಿ ಕಟ್ಟಿಹಾಕಲಾಗಿದೆ. ಇಲ್ಲಿ ಗೋಪೂಜೆ, ಗೋಗ್ರಾಸ ನೀಡಲು ಅವಕಾಶ ಕಲ್ಪಿಸಲಾಗಿದೆ. ನಗರದ ವಿವಿಧ ಶಾಲಾ ಮಕ್ಕಳು ಆಗಮಿಸಿ ಗೋವುಗಳನ್ನು ಹತ್ತಿರದಿಂದ ವೀಕ್ಷಿಸಿ, ಮೈದಡವಿ ಆನಂದಿಸಿದರು. ಭಾನುವಾರ ಮಧ್ಯಾಹ್ನ ಕಾರ್ಯಕ್ರಮ ಸಮಾರೋಪಗೊಳ್ಳಲಿದ್ದು, ಮಧ್ಯಾಹ್ನ 2.30ಕ್ಕೆ ಕದ್ರಿ ಮಂಜುನಾಥ ದೇವಸ್ಥಾನದಿಂದ ಪಜೀರು ಗೋಶಾಲೆಗೆ ಗೋವಿಗಾಗಿ ಹೊರೆಕಾಣಿಕೆ ಅರ್ಪಣೆ ಮೆರವಣಿಗೆ ನಡೆಯಲಿದೆ.