ಸಾರಾಂಶ
ಬೆಳಗಾವಿ ನಗರದ ರಿಂಗ್ ರಸ್ತೆ ಕಾಮಗಾರಿಯು ಬಹುವರ್ಷಗಳಿಂದ ನೆನಗುದಿಗೆ ಬಿದ್ದಿತ್ತು. ಅದಕ್ಕೆ ₹೧೬೨೨ ಕೋಟಿ ಅನುದಾನವನ್ನು ಗಡ್ಕರಿ ಅವರು ಮಂಜೂರು ಮಾಡಿದ್ದಾರೆ .
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಾಗವಾಡ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಮುರಗುಂಡಿ (ಕಾಗವಾಡ)ಯಿಂದ ಗೋಟೂರ ವರೆಗಿನ ಚತುಷ್ಪಥ ರಸ್ತೆಯ ಕಾಮಗಾರಿಗೆ ಕೇಂದ್ರದಿಂದ ₹೨೬೧೫ ಕೋಟಿ ಮಂಜೂರು ಮಾಡಿ, ಅದರಂತೆ ಶಿರಗುಪ್ಪಿಯಿಂದ ಅಂಕಲಿಯ ಕೃಷ್ಣಾ ಮೇಲ್ಸೇತುವೆ ಕಾಮಗಾರಿಗೂ ಅದೇ ಮಂಜೂರಾತಿಯಲ್ಲಿ ₹೮೮೭ ಕೋಟಿ ಹಣ ಮೀಸಲಿಟ್ಟು ಚಾಲನೆ ನೀಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಚಿಕ್ಕೋಡಿ, ಕಾಗವಾಡ ಭಾಗದ ಜನತೆಯ ಪರಿವಾಗಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಸನ್ಮಾನಿಸಿ ಅಭಿನಂದಿಸಿದರು.ಬೆಳಗಾವಿ ನಗರದ ರಿಂಗ್ ರಸ್ತೆ ಕಾಮಗಾರಿಯು ಬಹುವರ್ಷಗಳಿಂದ ನೆನಗುದಿಗೆ ಬಿದ್ದಿತ್ತು. ಅದಕ್ಕೆ ₹೧೬೨೨ ಕೋಟಿ ಅನುದಾನವನ್ನು ಗಡ್ಕರಿ ಅವರು ಮಂಜೂರು ಮಾಡಿದ್ದಾರೆ ಎಂದು ಹೇಳಿದ ಡಾ.ಕೋರೆ, ಕಾಗವಾಡದಿಂದ ಮೀರಜ್(ಮಹಾರಾಷ್ಟ) ಸಂಪರ್ಕ ಕಲ್ಪಿಸುವ ಸುಮಾರು ೧೭ ಕಿ.ಮೀ.ರಸ್ತೆಯನ್ನು ಉನ್ನತ ದರ್ಜೆಗೆ ಏರಿಸಬೇಕು. ಈ ರಸ್ತೆಯು ಮುಂದೆ ಸೊಲ್ಲಾಪುರ - ಲಾತೂರ - ನಾಗಪೂರಕ್ಕೆ ಹೋಗಲು ಎರಡು ರಾಜ್ಯಗಳಿಗೆ ಅನುಕೂಲವಾಗುತ್ತದೆ ಎಂದು ವಿನಂತಿಸಿಕೊಂಡಾಗ ಸಚಿವರು, ಸಕಾರಾತ್ಮಕವಾಗಿ ಸ್ಪಂದಿಸಿ ಮುಂಬರುವ ದಿನಗಳಲ್ಲಿ ಶೀಘ್ರವಾಗಿ ಈ ಯೋಜನೆಗೆ ಚಾಲನೆ ನೀಡಲಾಗುವುದೆಂದು ತಿಳಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕ ಅಭಯ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶಕವಟಗಿಮಠ ಇದ್ದರು.