ಕನ್ನಡಪ್ರಭ ವಾರ್ತೆ ಬೆಂಗಳೂರು:
10 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಆಗಿಂದಾಗ್ಗೆ ಬಹಳಷ್ಟು ಬ್ಯಾಂಕ್ ಖಾತೆ ಬದಲಾಯಿಸಿರುವುದು, 23262 ಮಹಿಳೆಯರು ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೂ ಅವರಿಗೆ 46.52 ಕೋಟಿ ರು. ಪಾವತಿ, 19 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ!ಇಷ್ಟೆಲ್ಲಾ ಅಪರಾ-ತಪರಾ ನಡೆದಿರುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ. ಇದನ್ನು ಮಹಾಲೇಖಪಾಲರ ಕಚೇರಿ ಪತ್ತೆಹಚ್ಚಿದ್ದು, ಈ ಬಗ್ಗೆ ಇಲಾಖೆಯಿಂದ ಉತ್ತರ ಬಯಸಿರುವುದು ಬಹಿರಂಗವಾಗಿದೆ. ಗೃಹಲಕ್ಷ್ಮಿ ಯೋಜನೆಯನ್ನು ಸಿಎಜಿ ಡೇಟಾ ಅನಾಲಿಕ್ಸ್ ವಿಭಾಗವು ತೀವ್ರವಾಗಿ ಪರಿಶೀಲನೆಗೆ ಒಳಪಡಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
23,262 ಜನರಿಗೆ ಬ್ಯಾಂಕ್ ಖಾತೆಯ ವಿವರಗಳಿಲ್ಲದಿದ್ದರೂ ಬರೊಬ್ಬರಿ 46.52 ಕೋಟಿ ರುಪಾಯಿ ಪಾವತಿಸಲಾಗಿದೆ. ಬ್ಯಾಂಕ್ ಖಾತೆ ಸಂಖ್ಯೆ ಇಲ್ಲದಿದ್ದರೂ ಕೋಟ್ಯಂತರ ರು. ಪಾವತಿ ಮಾಡಿದ್ದಾದರೂ ಹೇಗೆ ಎಂದು ವರದಿ ಕೇಳಲಾಗಿದೆ. ಇಷ್ಟೇ ಅಲ್ಲ, 10,06,308 ಫಲಾನುಭವಿಗಳು ಆಗಿಂದಾಗ್ಗೆ ಬಹಳಷ್ಟು ಬ್ಯಾಂಕ್ ಖಾತೆ ಬದಲಾಯಿಸಿರುವುದು ಸಂಶಯಾಸ್ಪದವಾಗಿದೆ.---19,020 ಫಲಾನುಭವಿಗಳಿಗೆ
ಒಂದೇ ಬ್ಯಾಂಕ್ ಖಾತೆ!
ಇನ್ನೂ ಒಂದು ಅಚ್ಚರಿಯ ವಿಷಯವೆಂದರೆ, ಭಾಗ್ಯಲಕ್ಷ್ಮಿ ಯೋಜನೆಯ 19,020 ಫಲಾನುಭವಿಗಳು ಜಂಟಿಯಾಗಿ ಅಥವಾ ಒಟ್ಟಿಗೇ ಒಂದೇ ಬ್ಯಾಂಕ್ ಖಾತೆ ಹೊಂದಿದ್ದಾರೆ. ಸಿಎಜಿ ಡೇಟಾ ಅನಾಲಿಕ್ಸ್ ವಿಭಾಗ ತೀವ್ರವಾಗಿ ಪರಿಶೀಲನೆಗೆ ಒಳಪಡಿಸಿದಾಗ ಇದು ಬಹಿರಂಗವಾಗಿದೆ. ಇಷ್ಟೊಂದು ಸಂಖ್ಯೆಯ ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಯನ್ನು ಹೇಗೆ ಬಳಸಿದರು? ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಗೆ ಅವಕಾಶ ನೀಡಿತು? ಎಂಬುದು ಯಕ್ಷ ಪ್ರಶ್ನೆಯಾಗಿದೆ.8995 ಖಾತೆಗೆ ಹೆಚ್ಚುವರಿ
₹1.80 ಕೋಟಿ ಪಾವತಿ:ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಫಲಾನುಭವಿಗೆ ಇಲ್ಲಿಯವರೆಗೂ 30 ಕಂತಿನಲ್ಲಿ ತಲಾ ₹60 ಸಾವಿರ ಪಾವತಿಯಾಗಿದೆ. ಆದರೆ, 8995 ಖಾತೆಗೆ ಕೆಲ ನಿರ್ದಿಷ್ಟ ತಿಂಗಳಿನಲ್ಲಿ 1.80 ಕೋಟಿ ರುಪಾಯಿಯನ್ನು ಪುನಃ ಪಾವತಿಸಲಾಗಿದೆ. ಇದನ್ನು ಸಿಎಜಿ ಪತ್ತೆ ಹಚ್ಚಿದ್ದು, ಈ ಬಗ್ಗೆ ಮಾಹಿತಿ ಕೇಳಿದೆ.
ಸಿಎಜಿ ಅಸಮಾಧಾನ:ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ದತ್ತಾಂಶಗಳನ್ನು ನೀಡಿ ಎಂದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಂದಿಸಿಲ್ಲ. ಬ್ಯಾಂಕ್ ಖಾತೆಗಳ ವಿವರಗಳು, ಅನರ್ಹರಾದ ಫಲಾನುಭವಿಗಳ ಪಟ್ಟಿ, ಫಲಾನುಭವಿಗಳಿಗೆ ಸಂಬಂಧಿಸಿದ ವಿವರಗಳನ್ನು ಹಲವು ಬಾರಿ ಕೇಳಿದರೂ ಇಲಾಖೆ ನೀಡಿಲ್ಲ ಎಂದು ಸಿಎಜಿ ಅಸಮಾಧಾನ ವ್ಯಕ್ತಪಡಿಸಿದೆ.
