ಪೋಲೀಸ್ ಇಲಾಖೆ ವಿಧಿಸಿರುವ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಕರಿಸಬೇಕು. ಕೋಮು ಸೌಹಾರ್ದ ಕಾಪಾಡಬೇಕು. ಸಾರ್ವಜನಿಕ ಸ್ಥಾನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗೂ ಮುನ್ನ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಆಯಾ ಗ್ರಾಪಂನಿಂದ ಅನುಮತಿ ಪಡೆಯಬೇಕು
ಕೋಲಾರ : ಆ.26 ಮತ್ತು 27 ರಂದು ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಿನಾಯಕನ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಗಣೇಶ ಉತ್ಸವ ವ್ಯವಸ್ಥಾಪಕರು ಹಾಗೂ ಸದಸ್ಯರ ಸಭೆಯನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಗಣೇಶಮೂರ್ತಿ ಪ್ರತಿಷ್ಠಾಪಿಸುವ ಮತ್ತು ಮೆರವಣಿಗೆ ಮಾಡುವ ವೇಳೆ ಏನೆಲ್ಲಾ ಕ್ರಮ ಅನುಕರಿಸಬೇಕು, ಈದ್ ಮಿಲಾದ್ ಹಬ್ಬವೂ ಜೊತೆ ಜೊತೆ ಬಂದಿರುವ ಕಾರಣಕ್ಕೆ ಗ್ರಾಮಗಳ ಮುಖ್ಯಸ್ಥರ ಹಾಗೂ ವಿನಾಯಕ ಉತ್ಸವ ಮಂಡಳಿ ಸದಸ್ಯರು ಮತ್ತು ವ್ಯವಸ್ಥಾಪಕರ ಸಭೆ ನಡೆಸಿದರು.
ಮೂರ್ತಿ ಸ್ಥಾಪನೆಗೆ ಅನುಮತಿ ಕಡ್ಡಾಯ
ವೃತ್ತ ನಿರೀಕ್ಷಕ ಕಾಂತರಾಜು ಮಾತನಾಡಿ, ಪೋಲೀಸ್ ಇಲಾಖೆ ವಿಧಿಸಿರುವ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಕರಿಸಬೇಕು. ಕೋಮು ಸೌಹಾರ್ದ ಕಾಪಾಡಬೇಕು. ಸಾರ್ವಜನಿಕ ಸ್ಥಾನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗೂ ಮುನ್ನ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಆಯಾ ಗ್ರಾಪಂನಿಂದ ಅನುಮತಿ ಪಡೆಯಬೇಕು. ಸಾರ್ವಜನಿಕರು ಹಾಗೂ ಸಂಚಾರಕ್ಕೆ ಸಮಸ್ಯೆ ಉಂಟಾಗದಂತೆ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಜನಸಂದಣಿ, ಸಂಚಾರ ದಟ್ಟಣೆ ಉಂಟಾಗುವ ರಸ್ತೆಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ.
ಗಣೇಶ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಆಯೋಜಕರ ಪರವಾಗಿ ಇಬ್ಬರು ಜವಾಬ್ದಾರಿಯುತ ಸದಸ್ಯರು, ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಪೊಲೀಸ್ ಠಾಣೆಗೂ ಮಾಹಿತಿ ನೀಡಬೇಕು ಗಣೇಶ ವಿಸರ್ಜನೆ ಮೆರವಣಿಗೆ ಸಂಬಂಧ ಯಾವುದೇ ಕಾರಣಕ್ಕೂ ಮಾರ್ಗ ಬದಲಾಯಿಸಬಾರದು. ಬದಲಾಯಿಸಿದರೆ ಆಯೋಜಕರೇ ನೇರ ಹೊಣೆ, ಆಗ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ವಿಸರ್ಜನೆಗೆ ಸಮಯ ನಿಗದಿ
ಗಣೇಶ ವಿಸರ್ಜನೆ ರಾತ್ರಿ 8 ಗಂಟೆಯೊಳಗೆ ಮುಗಿಯಬೇಕು ಎಂದರಲ್ಲದೆ ಗಣೇಶ ಕೂರಿಸಲು ಕೋಲಾರ ತಾಲ್ಲೂಕು ಕಛೇರಿಯಲ್ಲಿ ಏಕಗವಾಕ್ಷಿಯನ್ನು ತೆರೆಯಲಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಪೋಲೀಸ್ ಸಿಬ್ಬಂದಿಗಳು ಹಾಗೂ ಗಣೇಶ ಉತ್ಸವ ವ್ಯವಸ್ಥಾಪಕರು ಹಾಗೂ ಸದಸ್ಯರು ಭಾಗವಹಿಸಿದ್ದರು.