ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
‘ಗುರು’ ಎಂದರೇ ಪ್ರೀತಿಯ ಆಗರ, ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಜ್ಯೋತಿಯನ್ನು ಬೆಳಗಿಸುವವರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.ನಗರದ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಸಿಬಿಎಸ್ಸ್‌ಸಿ ಶಾಲೆಗಳ ಒಕ್ಕೂಟವಾದ ಸಹ್ಯಾದ್ರಿ ಸಹೋದಯ ಸ್ಕೂಲ್ಸ್ ಕಾಂಪ್ಲೆಕ್ಸ್ ವತಿಯಿಂದ ಹಮ್ಮಿಕೊಂಡಿದ್ದ ಅಧ್ಯಯನ-5 ಶಿಕ್ಷಕರ ಒಂದು ದಿನದ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ಸೂರ್ಯನ ಬೆಳಕು ಭೂಮಿಗೆ ಬಂದ ಹಾಗೆ ಲಕ್ಷಾಂತರ ಮಕ್ಕಳ ಜೀವನದಲ್ಲಿ ಗುರುಗಳು ಸುಜ್ಞಾನದ ಬೆಳಕನ್ನು ಬೀರುತ್ತಾರೆ. ಸಮಾಜದಲ್ಲಿ ವೈದ್ಯರಿಗೆ ಮತ್ತು ಗುರುಗಳಿಗೆ ಬಹಳ ಮಹತ್ವವಿದೆ. ಶ್ವಾಸ ನಿಂತರೆ ಜೀವ ಹೋಗುತ್ತದೆ, ಆದರೆ ವಿಶ್ವಾಸ ಮತ್ತು ನಂಬಿಕೆ ಹೋದರೆ ಜೀವನವೇ ಹೋಗುತ್ತದೆ. ರೋಗಿಗಳು ವೈದ್ಯರನ್ನು ನಂಬುತ್ತಾರೆ. ವಿದ್ಯಾರ್ಥಿಗಳು ಗುರುಗಳನ್ನು ನಂಬುತ್ತಾರೆ. ಹಿಂದಿನ ಕಾಲದ ಶಿಕ್ಷಣ ಈಗಿಲ್ಲ, ಈಗಿನ ಶಿಕ್ಷಣ ಗೂಗಲ್ ಆಧಾರಿತವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಒಳ್ಳೆಯ ವ್ಯಕ್ತಿತ್ವ ಮತ್ತು ಸಂಸ್ಕಾರ ನೀಡಬೇಕು. ಅವರಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಬಿತ್ತಬೇಕು. ಬೆಳಗಿನ ಜಾವ ನಿದ್ದೆಗೆಡಿಸುವ ಹಾಗೆ ಕನಸುಗಳು ಇರಬೇಕು ಮತ್ತು ಆ ಕನಸ್ಸನ್ನು ನೆನಸು ಮಾಡುವ ದೃಢ ಸಂಕಲ್ಪ ಹಾಗೂ ಆತ್ಮ ವಿಶ್ವಾಸ ತುಂಬಿಸುವ ಕೆಲಸ ಮಾಡಬೇಕು. ಅವರಲ್ಲಿ ಪರಿವರ್ತನೆಯನ್ನು ತರಬೇಕು. ಭಾವನೆಯನ್ನು ಸದ್ಭಾವನೆಯನ್ನಾಗಿ ಮೂಡಿಸಬೇಕು. ನಿರಂತರ ಪ್ರಯತ್ನ ಮಾಡಿ ಗುರಿ ಮುಟ್ಟುವ ಹಾಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸಬೇಕು. ಉತ್ತಮ ಸಂಸ್ಕಾರ ನೀಡಿ, ಸತ್ಪ್ರಜೆಯನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.ಅಭಿಮನ್ಯು ಅಕಾಡೆಮಿಯ ಸಿಇಒ ಅರ್ಜುನ್ ದೇವಯ್ಯ, ಬೆಸ್ಟ್ ಟೀಚರ್ ಅವಾರ್ಡ್ ಪಡೆದ ಎಸ್.ಹರ್ಷ, ಹೊಂಗಿರಣ ಸ್ವತಂತ್ರ ಪಿಯು ಕಾಲೇಜಿನ ಪ್ರಾಂಶುಪಾಲ ವಿ.ರೋಹಿತ್ , ಸುಖೇಶ್ ಶೇರಿಗಾರ್, ಶ್ರೀಕಾಂತ್ ಹೆಗಡೆ, ರವೀಂದ್ರ, ಅರುಣಾಜ್ಯೋತಿ, ಡಾ. ಸಿ.ಎಲ್.ದ್ರಾಕ್ಷಾಯಿಣಿ , ಶೃತಿ ಆರ್.ಸ್ವಾಮಿ, ಶೋಭಾ ರವೀಂದ್ರ, ಕಿರಣ್ ಮತ್ತಿತರರು ಇದ್ದರು.
ನಿರ್ಮಲ ತುಂಗಾ ಅಭಿಯಾನಕ್ಕೆ ಕರೆವಿದ್ಯಾರ್ಥಿಗಳಲ್ಲಿ ಮುಂದಿನ ಭವಿಷ್ಯಕ್ಕೆ ಪರಿಸರ ಪ್ರಜ್ಞೆ ಮೂಡಿಸಬೇಕು. ಶುದ್ಧ ತುಂಗೆ ಮಲೀನವಾಗಿದ್ದು, ಅಲ್ಯೂಮಿನಿಯಂ ಇರುವುದು ಖಾತರಿಯಾಗಿದೆ. ಇದು ದೇಹಕ್ಕೆ ಅಪಾಯಕಾರಿ ಶುದ್ಧ ತುಂಗೆಗಾಗಿ ‘ನಿರ್ಮಲ ತುಂಗಾ ಅಭಿಯಾನ’ ಹಮ್ಮಿಕೊಂಡಿ ದ್ದು, ವಿದ್ಯಾರ್ಥಿಗಳನ್ನು ಇದರಲ್ಲಿ ಪಾಲ್ಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಕರೆ ನೀಡಿದರು.