ಸಾರಾಂಶ
ಶಿವಮೊಗ್ಗ: ‘ಮಧ್ಯ ಕರ್ನಾಟಕ ಪ್ರದೇಶವನ್ನು ಕರಾವಳಿ ಭಾಗಕ್ಕೆ ಸಂಪರ್ಕಿಸುವ ತಾಲೂಕಿನ ಹಸಿರುಮಕ್ಕಿಯ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ 2026ರ ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ತಿಳಿಸಿದರು.ಸಾಗರ ತಾಲೂಕಿನಲ್ಲಿರುವ ಹಸಿರು ಮಕ್ಕಿ ಸೇತುವೆ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿ ಬಳಿಕ ಮಾತನಾಡಿದರು.
ಈ ಭಾಗದಲ್ಲಿ ಸೇತುವೆ ನಿರ್ಮಿಸುವುದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕನಸಾಗಿತ್ತು. ಟೆಂಡರ್ ನಿಯಮಾವಳಿ ಪ್ರಕಾರ 1155 ಮೀ. ಉದ್ದ ಹಾಗೂ 8.5 ಮೀ. ಅಗಲದ ಸೇತುವೆ ನಿರ್ಮಾಣ ಕಾಮಗಾರಿಗೆ 2018ರಲ್ಲಿ ಟೆಂಡರ್ ಪ್ರಕ್ರಿಯೆ ನಡೆದಾಗ ಅಂದಾಜು ವೆಚ್ಚ ₹115 ಕೋಟಿಯಾಗಿತ್ತು. ಪ್ರಸ್ತುತ 125 ಕೋಟಿ ರು. ಅಂದಾಜು ವೆಚ್ಚ ತಗಲುವ ಸಾಧ್ಯತೆ ಇದೆ ಎಂದರು.ಕೆಲವು ಶರಾವತಿ ಸಂತ್ರಸ್ತರಿಂದ ತಮ್ಮ ಭಾಗದಲ್ಲಿ ಸರ್ವೇ ಆಗಿಲ್ಲ, ತಮ್ಮ ಬ್ಲಾಕ್‌ಅನ್ನು ಸರ್ವೇಯಲ್ಲಿ ಸೇರಿಸಿಲ್ಲವೆಂಬ ದೂರುಗಳಿವೆ. ನಾವು ಸಂತ್ರಸ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಲು ಬಿಡುವುದಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ಏನೇ ಸಮಸ್ಯೆಗಳಿದ್ದರೂ ಅಹವಾಲು ನೀಡಿ, ಸಮಸ್ಯೆಗಳನ್ನು ಖಂಡಿತವಾಗಿ ಬಗೆಹರಿಸುತ್ತೇವೆ. ಆತಂಕಕ್ಕೆ ಒಳಗಾಗುವುದು ಬೇಡ ಎಂದು ಭರವಸೆ ನೀಡಿದರು.
ಶಾಸಕ ಬೇಳೂರು ಗೋಪಾಲ ಕೃಷ್ಣ ಮಾತನಾಡಿ, ’ಕಾಗೋಡು ತಿಮ್ಮಪ್ಪ ಅವರ ಕನಸು ನನಸುಗೊಳಿಸಲು ಬಿಜೆಪಿಗರು ಬಿಡಲಿಲ್ಲ. ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಹಸಿರು ಮಕ್ಕಿ ಸೇತುವೆ ಕಾಮಗಾರಿಗೆ ಹಿನ್ನಡೆ ಆಗಿತು. ಉದ್ದೇಶಿತ ಸೇತುವೆ ನಿರ್ಮಾಣ ಕಾಮಗಾರಿ ಮಾರ್ಗದಲ್ಲಿ ಒಟ್ಟು 34 ಪಿಲ್ಲರ್‌ಗಳು ಶರಾವತಿ ಹಿನ್ನೀರಿನ ಆಳದೊಳಗಿಂದ ನಿರ್ಮಾಣವಾಗಬೇಕಿದೆ. ಆದರೆ ಈವರೆಗೆ 22 ಪಿಲ್ಲರ್‌ಗಳ ಕಾಮಗಾರಿ ಮಾತ್ರ ಆಗಿದೆ. ಸೇತುವೆ ಪೂರ್ಣಗೊಳ್ಳಲು 16ಮೀಟರ್ ಬಾಕಿ ಇದೆ ಎಂದು ತಿಳಿಸಿದರು.ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಕಾಮಗಾರಿ, ಸಿಗಂಧೂರು ಸೇತುವೆ ನಿರ್ಮಾಣ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದರು. ಈ ವೇಳೆ ಸ್ಥಳೀಯ ಜನ ಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಇದ್ದರು.
ಬಿಜೆಪಿಯಿಂದ ಕಾಮಗಾರಿಗೆ ನಿರ್ಲಕ್ಷ್ಯಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಿರುವ ಅಂಬಾರಗೊಡ್ಲು- ಕಳಸವಳ್ಳಿ (ಸಿಗಂದೂರು) ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು ಎನ್ನುವ ಕಾರಣಕ್ಕೆ ಮಲೆನಾಡು- ಕರಾವಳಿ ಸಂಪರ್ಕ ಕಲ್ಪಿಸುವ ಹಸಿರು ಮಕ್ಕಿ ಸೇತುವೆ ಕಾಮಗಾರಿಯನ್ನು ಹಿಂದಿನ ಬಿಜೆಪಿ ಸರ್ಕಾರ ಕಡೆಗಣಿಸಿತು. ಇಲ್ಲಿನ ಸಂಸದರು, ಶಾಸಕರ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಪುನಃ ಚಾಲನೆ ದೊರೆತಿದೆ. ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದರು.
ಪ್ರಸನ್ನ ಅವರಿಂದ ತುಮರಿ ಸೇತುವೆ ನಿರ್ಮಾಣ
ಹೋರಾಟಗಾರ ಪ್ರಸನ್ನ ಕೆರೆಕೈ ಅವರು ಸಿಗಂದೂರು ಸೇತುವೆ ನಿರ್ಮಿಸಬೇಕು ಎಂದು ಮೊದಲ ಬಾರಿ ಕನಸು ಕಂಡರು. ಪ್ರಸನ್ನ ಅವರಿಂದ ತುಮರಿ ಸೇತುವೆ ಆಗಿದೆ. ಆದರೆ, ಇದನ್ನು ಮರೆಮಾಚಿದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೇತುವೆ ಮುಂಭಾಗ ನಿಂತು ಪೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಸೇತುವೆ ನಿರ್ಮಿಸಿರುವುದು ಉತ್ತಮ ಕಾರ್ಯವೇ ಆದರೆ, ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದಲೂ ತೆರಿಗೆ ಪಾವತಿಸಲಾಗುತ್ತದೆ ಎನ್ನುವುದು ಮರೆಯಕೂಡದು ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.