ನಾಳೆಯಿಂದ ಹಾಸನಾಂಬೆ ಹಿರಿಯಕ್ಕ ಕೆಂಚಾಂಬಿಕೆ ಜಾತ್ರೆ

| Published : Oct 25 2025, 01:00 AM IST

ಸಾರಾಂಶ

ಸಪ್ತಮಾತೃಕೆಯರಲ್ಲಿ ಹಿರಿಯರಾದ ಕೆಂಚಾಂಬಿಕೆಯ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲದೆ ಇರುವ ಕಾರಣ, ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯುವ ಇಲ್ಲಿನ ಜಾತ್ರಾ ಮಹೋತ್ಸವ ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದಷ್ಟು ಜನಮನ್ನಣೆ ಪಡೆದಿಲ್ಲ. ಸಪ್ತಮಾತ್ರಕ್ಕೆಯರಾದ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ ಇವರಲ್ಲಿ ಹಿರಿಯರಾದ ಬ್ರಾಹ್ಮಿ ದೇವಿ ತಾಲೂಕಿನ ಹರಿಹಳ್ಳಿಯಲ್ಲೂ ವೈಷ್ಣವಿ, ಮಹೇಶ್ವರಿ, ಕೋಮಾರಿಯರು ಹಾಸನಾಂಬೆ ದೇಗುಲದಲ್ಲೂ ವಾರಾಹಿ, ಇಂದ್ರಾಣಿ, ಚಾಮುಂಡೀಯರು ಹಾಸನದ ದೇವಿಗೆರೆಯಲ್ಲೂ ಪೂಜಿಸಲ್ಪಡುತ್ತಾರೆ.

ಕನ್ನಡಪ್ರಭ ವಾರ್ತೆ ಆಲೂರು

ವರ್ಷದಲ್ಲಿ ಒಮ್ಮೆ ಮಾತ್ರ ಬಾಗಿಲು ತೆರೆಯಲ್ಪಡುವ ಸಪ್ತ ಮಾತೃಕೆರಲ್ಲಿ ಒಬ್ಬರಾದ ಶ್ರೀ ಹಾಸನಾಂಬೆಯ ದರ್ಶನಕ್ಕೆ ಗುರುವಾರ ತೆರೆ ಬಿದ್ದಿದ್ದು ಹಾಸನಾಂಬೆಯ ಹಿರಿಯಕ್ಕ ಆಲೂರು ತಾಲೂಕಿನ ಹರಿಹಳ್ಳಿ ಬಳಿ ಇರುವ ಶ್ರೀ ಕೆಂಚಾಂಬಿಕೆಯ ಜಾತ್ರಾ ಮಹೋತ್ಸವ ಇದೇ ಭಾನುವಾರದಿಂದ ಪ್ರಾರಂಭವಾಗಲಿದೆ.

ಸಪ್ತಮಾತೃಕೆಯರಲ್ಲಿ ಹಿರಿಯರಾದ ಕೆಂಚಾಂಬಿಕೆಯ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲದೆ ಇರುವ ಕಾರಣ, ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯುವ ಇಲ್ಲಿನ ಜಾತ್ರಾ ಮಹೋತ್ಸವ ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದಷ್ಟು ಜನಮನ್ನಣೆ ಪಡೆದಿಲ್ಲ. ಸಪ್ತಮಾತ್ರಕ್ಕೆಯರಾದ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ ಇವರಲ್ಲಿ ಹಿರಿಯರಾದ ಬ್ರಾಹ್ಮಿ ದೇವಿ ತಾಲೂಕಿನ ಹರಿಹಳ್ಳಿಯಲ್ಲೂ ವೈಷ್ಣವಿ, ಮಹೇಶ್ವರಿ, ಕೋಮಾರಿಯರು ಹಾಸನಾಂಬೆ ದೇಗುಲದಲ್ಲೂ ವಾರಾಹಿ, ಇಂದ್ರಾಣಿ, ಚಾಮುಂಡೀಯರು ಹಾಸನದ ದೇವಿಗೆರೆಯಲ್ಲೂ ಪೂಜಿಸಲ್ಪಡುತ್ತಾರೆ.

ಪುರಾಣದ ಪ್ರಕಾರ ಸಪ್ತಮಾತೃಕೆಯರು ಕಾಶಿಯಲ್ಲಿ ಆವಿರ್ಭವಿಸಿ, ದುಷ್ಟ ಸಂಹಾರಕ್ಕಾಗಿ ತ್ರಿಮೂರ್ತಿಗಳ ಕೋರಿಕೆಯಿಂದಾಗಿ ಸಂಚಾರ ಕೈಗೊಂಡರಂತೆ, ಈ ಹಾದಿಯಲ್ಲಿ ಉತ್ತರ ಭಾರತದಿಂದ ದಕ್ಷಿಣ ಘಟ್ಟ ಪ್ರದೇಶದ ಮೂಲಕ ಮಲೆನಾಡು ಪ್ರದೇಶವನ್ನು ಪ್ರವೇಶಿಸುತ್ತಾರೆ. ಇವರಲ್ಲಿ ಬ್ರಾಹ್ಮೀದೇವಿ ರಕ್ತಬೀಜಾಸುರನ ಸಂಹಾರಕ್ಕೆ ನಿಯುಕ್ತಿಗೊಂಡಂತೆ ಮಲೆನಾಡ ಸೆರಗಿನಲ್ಲಿ ಉಳಿದು, ವೈಷ್ಣವೀ ಮೊದಲಾದ ಆರುಮಂದಿ ಬಯಲುಸೀಮೆಯ ಹಾಸನ ಭಾಗದತ್ತ ತೆರಳಿ ಅಲ್ಲಿ ನೆಲೆಸಿದ್ದ ರಾಕ್ಷಸ ಸಂಹಾರಕ್ಕೆ ಮುಂದಾಗುತ್ತಾರೆ, ಅಲ್ಲಿಯೇ ನೆಲೆಸುತ್ತಾರೆ.

ರಕ್ತಬೀಜಾಸುರ ಬ್ರಹ್ಮನಿಂದ ಯಾರಾದರೂ ಕೊಲ್ಲಲು ಬಂದರೆ ನನ್ನ ರಕ್ತದ ಒಂದು ಹನಿ ಬಿದ್ದೆಡೆಯಲ್ಲಿ ನನ್ನಷ್ಟೇ ಬಲವುಳ್ಳ ಸಹಸ್ರ ರಕ್ತಬೀಜರು ಹುಟ್ಟಲಿ ಎಂಬುದಾಗಿ ವರ ಪಡೆದಿರುತ್ತಾನೆ. ಮಹಿಷಾಸುರನ ಸಂಹಾರದ ನಂತರ ಪಲಾಯನ ಮಾಡಿ ಈ ಭಾಗದಲ್ಲಿ ಬಂದು ರಾಜ್ಯಭಾರ ಮಾಡುತ್ತಿರುತ್ತಾನೆ. ನರರು, ಸುರರು, ಋುಷಿ ಮುನಿಗಳು, ಪ್ರಾಣಿಗಳನ್ನೂ ಹಿಂಸಿಸುತ್ತಾ ಮೆರೆಯುತ್ತಿರುತ್ತಾನೆ. ಇವನ ಕಾಟ ಸಹಿಸಲಾಗದೆ ತ್ರಿಮೂರ್ತಿಗಳನ್ನು ನೋಡಲು ಋಷಿ ಮುನಿಗಳು ತೆರಳಿ, ತಮ್ಮ ಅಹವಾಲು ಹೇಳುತ್ತಾರೆ. ಕೊನೆಯಲ್ಲಿ ನಿಮ್ಮ ಕಷ್ಟ ಕಾರ್ಪಣ್ಯಗಳನ್ನು ನೀಗಿಸಿ ಕಾಪಾಡಲು ದೇವಿ ಬರುತ್ತಾಳೆಂದು ಅಭಯ ನೀಡುತ್ತಾರೆ.

ಕಾಶಿಯಲ್ಲಿ ಸಪ್ತಮಾತೃಕೆಯರ ಅವತಾರವಾಗುತ್ತದೆ.

ಎಲ್ಲರೂ ಒಟ್ಟಾಗಿ ದೇಶ ಸಂಚಾರ ಮುಗಿಸಿ ಈ ಗ್ರಾಮಕ್ಕೆ ಬರುತ್ತಾರೆ, ಬ್ರಾಹ್ಮೀದೇವಿ ಇಲ್ಲಿಯೇ ಉಳಿಯುತ್ತಾರೆ, ಉಳಿದ ಆರು ಜನ ಸಿಂಹಾಸನಪುರಿಯತ್ತ ತೆರಳುತ್ತಾರೆ. ಸಂಚಾರ ಮುಗಿಸಿ ಬಂದು ಕಡೇ ಬಾರಿಗೆ ಒಟ್ಟಾಗಿದ್ದುದು ಇಲ್ಲಿಯ ಮಹತ್ವದ ಅಂಶ.

ಮುಂದೆ ರಕ್ತಬೀಜಾಸುರನೊಂದಿಗೆ ಘೋರ ಯುದ್ಧ ಸಂಭವಿಸುತ್ತದೆ, ಹಲವು ಕಾಲ ನಡೆದ ಸೆಣಸಾಟದ ತರುವಾಯ ತ್ರಿಮೂರ್ತಿಗಳು ತಮ್ಮ ಶಕ್ತಿಯನ್ನೆಲ್ಲಾ ಧಾರೆಯೆರೆದು ವಾಯುವ್ಯದಲ್ಲಿ ಬ್ರಹ್ಮ, ಆಗ್ನೇಯದಲ್ಲಿ ವಿಷ್ಣು, ಈಶಾನ್ಯದಲ್ಲಿ ಈಶ್ವರರು ಕುಳಿತು ಯುದ್ಧ ವೈಖರಿಯನ್ನು ನೋಡುತ್ತಾರೆ. ಕೊನೆಯಲ್ಲಿ ದೇವಿಯು ತನ್ನ ನಾಲಿಗೆಯನ್ನು ನೆಲದಲ್ಲಿ ಹಾಸಿ ಅದರ ಮೇಲೆಳೆದು ರಕ್ತಬೀಜಾಸುರನನ್ನು ಸಂಹಾರ ಮಾಡುತ್ತಾರೆ. ಈ ಸಂದರ್ಭದಲ್ಲಿ ದೇವಿಯನ್ನು ಕಂಡ ತ್ರಿಮೂರ್ತಿಗಳು ಕೆಂಚಮ್ಮ ಎಂದು ಉದ್ಘರಿಸಿ ಪುಷ್ಪ ಮಳೆಗರೆಯುತ್ತಾರೆ. ಇಂದಿಗೂ ಕೆಂಚಾಂಬಿಕೆಯ ಬೆಟ್ಟ ಕೆಂಪು ಮಣ್ಣಿನಿಂದ ಕೂಡಿದ್ದು ಕಥೆಗೆ ಸಾಕ್ಷಿಯಂತೆ ಗೋಚರವಾಗುತ್ತದೆ.

ಇತಿಹಾಸದ ಪ್ರಕಾರ ವಿಜಯನಗರದ ಸ್ಥಾಪಕರಾದ ಹಕ್ಕಬುಕ್ಕರು ತಮ್ಮ ಸಂಚಾರದ ಸಂದರ್ಭಕ್ಕೆ ಈ ಭಾಗದಲ್ಲಿ ಬೀಡು ಬಿಟ್ಟಿರುತ್ತಾರೆ. ರಾತ್ರಿ ಮಲಗಿದ್ದಾಗ ಸ್ವಪ್ನವಾದಂತಾಗಿ "ನೀನು ಬಿಡಾರ ಹೂಡಿರುವ ಸ್ಥಳ ಮಹತ್ವದ್ದು, ದೇವಿಯಾದ ನಾನಿಲ್ಲಿ ಕೆಂಚಮ್ಮ ಎಂಬ ಅಭಿದಾನದಿಂದ ನೆಲೆಸಿರುವೆ, ಇಲ್ಲಿ ದೇವಾಲಯ ಕಟ್ಟಿಸೆಂದು ಹೇಳಿದಂತಾಗುತ್ತದೆ " ಮರುದಿನ ಎದ್ದು ನೋಡಿದರೆ ಏನೊಂದೂ ಕುರುಹು ಕಾಣುವುದಿಲ್ಲ, ದಿಕ್ಕು ತೋಚದಂತಾಗಿ ಸನಿಹದಲ್ಲೇ ಬೆರಣಿ ಆಯುತ್ತಿದ್ದ ವಯೋವೃದ್ಧೆಯನ್ನು ಕರೆದು ಕೇಳಲಾಗಿ ''''''''ಇಲ್ಲಿ ಅಂತಹುದೇನೂ ಇಲ್ಲ, ಆದರೆ ಗೌಡರ ಆಕಳೊಂದು ಪ್ರತಿದಿನ ಅಲ್ಲೊಂದು ಹುತ್ತದ ಮೇಲೆ ಹಾಲು ಕರೆಯುತ್ತದೆ'''''''' ಎಂದು ಸ್ಥಳ ತೋರಿಸುತ್ತಾಳೆ. ಸ್ಥಳ ನಿರ್ಧಾರವಾದ ಬಳಿಕ ತಮ್ಮ ಗುರುಗಳಾದ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ದೇವಾಲಯ ಕಟ್ಟಿಸಿ, ಸಾರೋದ್ಧಾರವಾಗಿ ಪೂಜಾ ಕೈಂಕರ್ಯ ನೆರವೇರಲು ಎರಡು ಗ್ರಾಮಗಳನ್ನು ಉಂಬಳಿಯಾಗಿ ನೀಡಿದರು. ಅಂದಿನಿಂದ ಇಂದಿನವರೆಗೂ ಸುಮಾರು ನಲವತ್ತೆಂಟು ಹಳ್ಳಿಗಳ ಗ್ರಾಮದೇವಿಯಾಗಿ ಕೆಂಚಾಂಬಿಕೆಯನ್ನು ಪೂಜಿಸಲಾಗುತ್ತಿದೆ.

ಎಲ್ಲ ಗ್ರಾಮಗಳಲ್ಲಿ ದೇವಿಯ ಹೆಸರಲ್ಲಿ ದೊಡ್ಡ ಜಾತ್ರಾ ಕಾಲದಲ್ಲಿ ಸಾಂಪ್ರದಾಯಿಕವಾಗಿ ಸುಗ್ಗಿಗಳು ನಡೆಸಲ್ಪಡುತ್ತವೆ. ವೈಶಾಖ ಮಾಸದ ಮೊದಲ ಭಾನುವಾರ ದೊಡ್ಡ ಜಾತ್ರೆಯ ಆರಂಭದ ಕುರುಹಾಗಿ ''''''''ಸಾರು'''''''' ಹಾಕಲಾಗುತ್ತದೆ, ಮೂಲ ದೇವಾಲಯದಲ್ಲಿ ಪಾದಪೂಜೆ ನಡೆಸಿ ಗ್ರಾಮಗಳಿಗೆ ಪ್ರಸಾದ ವಿತರಿಸಲಾಗುತ್ತದೆ, ನಿಯುಕ್ತ ಮಂದಿ ಮೊದಲು ದೇವಿಯ ಸನ್ನಿಧಾನದಲ್ಲಿ ಸಾರುತ್ತಾರೆ. ಸೇರು ಅಕ್ಕಿ ಸೇರು ಭತ್ತ, ಹಂಚೆತ್ತಬೇಡಿ (ಹಂಚಿಟ್ಟು ಹುರೀಬೇಡಿ) ಹಸೀ ಕೊನೆ ಮುರೀಬೇಡಿ, ಒಳಗಿದ್ದೋರು ಒಳಗೆ ಹೊರಗಿದ್ದೋರು ಹೊರಗೆ ಇವತ್ತಿಗೆ ಎಂಟು ದಿನಕ್ಕೆ ಕೆಂಚಮ್ಮನ ಜಾತ್ರೆ ಎಂದು ಸಾರು ಹಾಕುತ್ತಾರೆ.