ಸಾರಾಂಶ
ಕೆಎಚ್‌ಬಿ ಬಡಾವಣೆಯಲ್ಲಿರುವ ಜೆಎಸ್‌ಎಸ್ ಪಬ್ಲಿಕ್ ಶಾಲೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಶುಕ್ರವಾರ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು. ರಸ್ತೆಯಲ್ಲಿ ಮಂಡಿಯುದ್ದ ನೀರು ನಿಂತಿದ್ದರಿಂದ ಬಸ್‌ಗಳೂ ಶಾಲಾ ಆವರಣದಿಂದ ಹೊರಹೋಗುವುದಕ್ಕೆ ಸಾಧ್ಯವಾಗಲಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಗುರುವಾರ ರಾತ್ರಿ ಜಿಲ್ಲಾದ್ಯಂತ ಸುರಿದ ಧಾರಾಕಾರ ಮಳೆಗೆ ನಾಲೆ ಉಕ್ಕಿ ಹರಿದ ಪರಿಣಾಮ ನಗರದ ಹೊರವಲಯದಲ್ಲಿರುವ ಕೆಎಚ್‌ಬಿ ಬಡಾವಣೆ ಸಂಪೂರ್ಣ ಜಲಾವೃತಗೊಂಡಿದೆ. ನಿವಾಸಿಗಳು ಮನೆಯಿಂದ ಹೊರಬರಲಾಗದೆ ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.ರಸ್ತೆಗಳಲ್ಲಿ ಮಂಡಿಯುದ್ದ ನೀರು ನಿಂತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ಮಂಡಿಯುದ್ದ ನೀರು ನಿಂತು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹರಸಾಹಸ ನಡೆಸುತ್ತಿದ್ದರು. ರಸ್ತೆ ದಾಟುವುದಕ್ಕೆ ಬೈಕ್ ಸವಾರರು ಪರದಾಡುತ್ತಿದ್ದು, ಮನೆಯ ಸುತ್ತಲೂ ಮಳೆ ನೀರು ನಿಂತಿರುವುದರಿಂದ ಮನೆಯಿಂದ ಹೊರಬರಲಾಗದೇ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿರುವ ದೃಶ್ಯಗಳು ಕಂಡುಬಂದವು.
ರಾತ್ರಿ ಶುರುವಾದ ಮಳೆ ಬೆಳಗ್ಗೆಯವರೆಗೆ ನಿರಂತರವಾಗಿ ಸುರಿಯಿತು. ನಾಲೆ ಕಿರಿದಾಗಿದ್ದ ಪರಿಣಾಮ ಪ್ರತಿ ಬಾರಿ ಮಳೆ ಬಂದಾಗಲೂ ನಾಲೆ ಉಕ್ಕಿ ಹರಿಯುವುದು ಸಾಮಾನ್ಯವಾಗಿದೆ. ಇತ್ತೀಚೆಗಷ್ಟೇ ಕಾಲುವೆ ಅಗಲೀಕರಣ ಮಾಡಲಾಗಿತ್ತಾದರೂ ಹೆಚ್ಚುವರಿ ನೀರು ಹರಿದುಬಂದ ಸಮಯದಲ್ಲಿ ಹರಿದುಹೋಗಲು ಬಿಟ್ಟಿದ್ದ ಕಾಲುವೆಯನ್ನು ಕಾಮಗಾರಿ ವೇಳೆ ಮುಚ್ಚಿದ್ದರು. ಇದರ ಪರಿಣಾಮ ಹೆಚ್ಚುವರಿ ನೀರೆಲ್ಲವೂ ಕೆಎಚ್‌ಬಿ ಕಾಲೋನಿಯ ಕಡೆಗೆ ನುಗ್ಗಿದ್ದರಿಂದ ಅರ್ಧದಷ್ಟು ಬಡಾವಣೆ ಜಲಾವೃತಗೊಂಡಿದೆ.ಜೆಎಸ್‌ಎಸ್ ಪಬ್ಲಿಕ್ ಶಾಲೆ ಜಲಾವೃತ:
ಕೆಎಚ್‌ಬಿ ಬಡಾವಣೆಯಲ್ಲಿರುವ ಜೆಎಸ್‌ಎಸ್ ಪಬ್ಲಿಕ್ ಶಾಲೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಶುಕ್ರವಾರ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು. ರಸ್ತೆಯಲ್ಲಿ ಮಂಡಿಯುದ್ದ ನೀರು ನಿಂತಿದ್ದರಿಂದ ಬಸ್‌ಗಳೂ ಶಾಲಾ ಆವರಣದಿಂದ ಹೊರಹೋಗುವುದಕ್ಕೆ ಸಾಧ್ಯವಾಗಲಿಲ್ಲ. ಕೆಎಚ್‌ಬಿ ಕಾಲೋನಿಯ ಜೋಡಿ ರಸ್ತೆ ಸಂಪೂರ್ಣ ಜಲಾವೃತಗೊಂಡು ವಾಹನಗಳು ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಬಡಾವಣೆಯ ಮನೆಯ ಜನರು ಕಾರು, ಸ್ಕೂಟರ್ ಸೇರಿದಂತೆ ಇನ್ನಿತರ ವಾಹನಗಳನ್ನು ಹೊರಕ್ಕೆ ತೆಗೆಯಲಾಗದೆ ದಿನನಿತ್ಯದ ಕೆಲಸಗಳಿಗೆ ತೆರಳುವುದಕ್ಕೂ ಸಾಧ್ಯವಾಗದೆ ತೀವ್ರ ಸಂಕಷ್ಟ ಎದುರಿಸಿದರು.ಬೀಡಿ ಕಾರ್ಮಿಕರ ಕಾಲೋನಿ ಬಚಾವ್:
ಪ್ರತಿ ಬಾರಿ ಮಳೆ ಬಂದಾಗಲೂ ಮೊದಲು ಜಲಾವೃತಗೊಳ್ಳುತ್ತಿದ್ದ ಕೆರೆಯಂಗಳದಲ್ಲಿರುವ ಬೀಡಿ ಕಾರ್ಮಿಕರ ಕಾಲೋನಿ ಈ ಬಾರಿ ನೀರಿನಿಂದ ಮುಳುಗಡೆಯಾಗುವುದರಿಂದ ಬಚಾವ್ ಆಗಿದೆ. ಶಾಸಕ ಪಿ.ರವಿಕುಮಾರ್ ಅವರು ೧೦ ಕೋಟಿ ರು. ಕಾಮಗಾರಿ ನಡೆಸಿ ತಡೆಗೋಡೆ ನಿರ್ಮಿಸಿಕೊಟ್ಟಿದ್ದಾರೆ. ಹೆಚ್ಚುವರಿಯಾಗಿ ಹರಿದುಬಂದ ನೀರು ಕಾಲುವೆ ಮೂಲಕ ಸರಾಗವಾಗಿ ಹರಿದುಹೋಗುತ್ತಿದೆ. ಇದರಿಂದ ಕಾಲೋನಿ ಕಡೆಗೆ ನೀರು ಹರಿಯದಿರುವ ಕಾರಣ ಜಲಾವೃತಗೊಳ್ಳುವುದರಿಂದ ಪಾರಾಗಿದೆ. ಇದರಿಂದ ಕಾಲೋನಿ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.ಕೆಸರುಗದ್ದೆಯಾದ ಕ್ರೀಡಾಂಗಣ:
ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೀರು ನಿಂತು ಕೆಸರುಗದ್ದೆಯಾಗಿ ರೂಪಾಂತರಗೊಂಡಿತ್ತು.