ಬಣ್ಣದಲ್ಲಿ ಮಿಂದೆದ್ದ ಜಿಲ್ಲೆಯ ಜನ

| Published : Mar 26 2024, 01:05 AM IST

ಸಾರಾಂಶ

ಹೋಳಿ ಹಬ್ಬದ ಸಂಭ್ರಮ ಬಾಗಲಕೋಟೆ ಜಿಲ್ಲೆಯಾದ್ಯಂತ ಸೋಮವಾರ ಸಂಭ್ರಮದಿಂದ ಜರುಗಿತು. ಜಿಲ್ಲೆಯ ವಿವಿಧೆಡೆ ಯುವಕರು, ಯುವತಿಯರು, ಹಿರಿಯರು, ಕಿರಿಯರು ಜಾತಿ-ಮತ ಮೀರಿ ರಂಗಿನಾಟದಲ್ಲಿ ಮಿಂದೆದ್ದರು. ನಗರ ಹಾಗೂ ಗ್ರಾಮೀಣ ಪ್ರದೇಶಗಳೂ ಹೋಳಿಯ ನಾನಾ ಬಣ್ಣಗಳಲ್ಲಿ ಕಂಗೊಳಿಸಿದವು. ಜಾತಿ, ಮತ, ಧರ್ಮ, ಅಂತಸ್ತುಗಳ ಭೇದವನ್ನೇ ಮರೆತು ಜನ ಸಾಮರಸ್ಯ, ಸೌಹಾರ್ದದದ ಹಬ್ಬ ಆಚರಿಸಿದರು.

ಹೋಳಿ ಹಬ್ಬದ ಸಂಭ್ರಮ ಬಾಗಲಕೋಟೆ ಜಿಲ್ಲೆಯಾದ್ಯಂತ ಸೋಮವಾರ ಸಂಭ್ರಮದಿಂದ ಜರುಗಿತು. ಜಿಲ್ಲೆಯ ವಿವಿಧೆಡೆ ಯುವಕರು, ಯುವತಿಯರು, ಹಿರಿಯರು, ಕಿರಿಯರು ಜಾತಿ-ಮತ ಮೀರಿ ರಂಗಿನಾಟದಲ್ಲಿ ಮಿಂದೆದ್ದರು. ನಗರ ಹಾಗೂ ಗ್ರಾಮೀಣ ಪ್ರದೇಶಗಳೂ ಹೋಳಿಯ ನಾನಾ ಬಣ್ಣಗಳಲ್ಲಿ ಕಂಗೊಳಿಸಿದವು. ಜಾತಿ, ಮತ, ಧರ್ಮ, ಅಂತಸ್ತುಗಳ ಭೇದವನ್ನೇ ಮರೆತು ಜನ ಸಾಮರಸ್ಯ, ಸೌಹಾರ್ದದದ ಹಬ್ಬ ಆಚರಿಸಿದರು. ಕನ್ನಡಪ್ರಭ ವಾರ್ತೆ ಬಾಗಲಕೋಟೆ ಸಾಂಸ್ಕೃತಿಕ ವೈಭವ, ಭಾವೈಕ್ಯತೆಯ ಸಮ್ಮಿಲನ ಮೈಗೂಡಿಸಿಕೊಂಡಿರುವ ಬಾಗಲಕೋಟೆಯ ಹೋಳಿ ಹಬ್ಬದ ಮೊದಲ ದಿನದ ಬಣ್ಣದೋಕುಳಿ ಸಂಭ್ರಮದಿಂದ ನಡೆಯಿತು. ಬಣ್ಣದಾಟದ ಸಂಭ್ರಮಕ್ಕೆ ನಗರದ ಜನತೆ ಉತ್ತಮ ಸಹಕಾರ ನೀಡಿದರು. ಯುವಕರು, ಯುವತಿಯರು, ಹಿರಿಯರು, ಕಿರಿಯರು ಬಣ್ಣದಾಟದಲ್ಲಿ ಪಾಲ್ಗೊಳ್ಳುವ ಮೂಲಕ ಹೋಳಿ ಹಬ್ಬದ ರಂಗಿನಾಟಕ್ಕೆ ಕಳೆ ತಂದರು.

ಐತಿಹಾಸಿಕ ಬಾಗಲಕೋಟೆಯ ಹೋಳಿ ಬಣ್ಣದಾಟಕ್ಕೆ ಈ ಬಾರಿ ರಂಗು ಬಂದಿದ್ದು, ಪರಂಪರೆಯ ಬಾಗಲಕೋಟೆಯ ಹೋಳಿ ಆಚರಣೆಯ ಪ್ರಮುಖ ಅಂಗವೆ ಬಣ್ಣದಾಟವಾಗಿದೆ. ಸಾವಿರಾರು ಯುವಕ, ಯುವತಿಯರು ಓಕುಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು.

ಗಮನ ಸೆಳೆದ ರೇನ್‌ಡಾನ್ಸ್: ನವನಗರ ಹಾಗೂ ವಿದ್ಯಾಗಿರಿಯಲ್ಲಿ ಬಣ್ಣದಾಟ, ಬಣ್ಣದ ಬಂಡಿ ಹಾಗೂ ಬಣ್ಣದ ಬ್ಯಾರಲ್ ತುಂಬಿದ ಟ್ರ್ಯಾಕ್ಟರ್ಗಳಿಗೆ ಅವಕಾಶ ಕಲ್ಪಿಸಿದ್ದರಿಂದ ಸಹಜವಾಗಿ ಯುವ ಸಮೂಹ ಹೆಚ್ಚಾಗಿ ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು. ಮೂರು ದಿನಗಳ ಬಣ್ಣದಾಟದ ಸಂಭ್ರಮದಲ್ಲಿ ನಿರೀಕ್ಷೆ ಮೀರಿ ಜನತೆ ಪಾಲ್ಗೊಂಡಿದ್ದು ಬೆಳಿಗ್ಗೆಯಿಂದಲೇ ಹಲಗೆ ಸಪ್ಪಳ ಹಾಗೂ ಚಿನ್ನರ ಬಣ್ಣದಾಟ ಗಮನಸೆಳೆಯಿತು. ವಿದ್ಯಾಗಿರಿಯ ಪ್ರಮುಖ ಸ್ಥಳಗಳಲ್ಲಿ ಆಯೋಜಿಸಲಾಗಿದ್ದ ಬಣ್ಣದಾಟದಲ್ಲಿ ಸಾವಿರಾರು ಯುವಕ ಯುವತಿಯರು ರೇನ್‌ಡಾನ್ಸ್‌ನಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ವಿವಿಧ ಹಾಡುಗಳಿಗೆ ತಕ್ಕಂತೆ ಕುಣಿದ ಯುವಕ ಯುವತಿಯರು ಪರಸ್ಪರ ಬಣ್ಣ ಎರೆಚಾಡಿದರು.

ನಗರ ಹಾಗೂ ನವನಗರದ ಪ್ರಮುಖ ಬಡಾವಣೆಗಳಲ್ಲಿ ಬಣ್ಣದಾಟದಲ್ಲಿ ತೊಡಗಿದ್ದ ಯುವಕರು ಮಧ್ಯಾಹ್ನದ ಹೊತ್ತಿಗೆ ಹಳೆ ನಗರದ ಪ್ರಮುಖ ಬೀದಿಗಳಿಗೆ ತೆರಳಿ ಬಣ್ಣದ ಆಟಕ್ಕೆ ಮತ್ತಷ್ಟು ಮೆರಗು ನೀಡಿದರು. ಪ್ರಮುಖವಾಗಿ ಕಾಲೇಜು ರಸ್ತೆ, ಬಸವ ವೃತ್ತದಲ್ಲಿ ಟ್ರ್ಯಾಕ್ಟರಿನಲ್ಲಿ ತುಂಬಿದ ಬಣ್ಣ ಬ್ಯಾರಲುಗಳ ಮೂಲಕ ಪರಸ್ಪರ ಬಣ್ಣ ಎರೆಚಾಡಿ ಸಂಭ್ರಮಿಸಿದರು.

ಚಿನ್ನರು ಸಂಭ್ರಮ: ಬಾಗಲಕೋಟೆ ನಗರದಲ್ಲಿ ಚಿನ್ನರ ಕಲರವ ಜೊರಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಪುಟ್ಟ ಪೋರರು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸಿದ ದೃಶ್ಯಗಳು ಕಂಡು ಬಂದವು. ಲಾಠಿ ರುಚಿ: ಹೋಳಿ ಆಚರಣೆ ವೇಳೆ ದುರ್ವತನೆ ತೋರಿದ ಕೆಲ ಕಿಡಿಗೇಡಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಇಲ್ಲಿನ ಮಾಬುಸುಬಾನಿ ದರ್ಗಾ ಹತ್ತಿರ ಈ ಘಟನೆ ನಡೆಯಿತು. ಶಾಂತ ರೀತಿಯಿಂದ ನಡೆಯುತ್ತಿದ್ದ ಹಬ್ಬದಲ್ಲಿ ಕಿಡಿಗೇಡಿಗಳು ಕಿತಾಪತಿ ಮಾಡಲು ಮುಂದಾದರು. ಕೂಡಲೇ ಪೊಲೀಸರು ಲಠಿ ಬೀಸಿದರು.