ಉಡುಪಿ: ಯೇಸು ಕ್ರಿಸ್ತರು ತನ್ನ ಶಿಷ್ಯರ ಜತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೈಸ್ತ ಧರ್ಮಸಭೆಯ ಉಗಮದ ನೆನಪನ್ನು ಸಾರುವ ಪವಿತ್ರ ಗುರುವಾರ (ಮೊಂಡಿ ಥರ್ಸ್ಡೆ)ಯನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತರು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಪ್ರಧಾನ ಧಾರ್ಮಿಕ ಕಾರ್ಯಕ್ರಮ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಜರಗಿತು. ಧರ್ಮಾಧ್ಯಕ್ಷರು 12 ಮಂದಿ ಪ್ರೆಷಿತರ ಪಾದಗಳನ್ನು ತೊಳೆಯುವ ಮೂಲಕ ಏಸುಕ್ರಿಸ್ತರು ಸಾರಿದ ದೀನತೆ ಹಾಗೂ ಪ್ರೀತಿಯ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಕ್ಯಾಥೆಡ್ರಲಿನ ಪ್ರಧಾನ ಧರ್ಮಗುರು ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ಪ್ರದೀಪ್ ಕಾರ್ಡೋಜಾ, ಧರ್ಮಪ್ರಾಂತ್ಯದ ಸಂಪದ ಸಂಸ್ಥೆಯ ನಿರ್ದೇಶಕ ರೆಜಿನಾಲ್ಡ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.

ಪವಿತ್ರ ಗುರುವಾರದ ಅಂಗವಾಗಿ ಚರ್ಚ್‌ಗಳಲ್ಲಿ ಪರಮ ಪ್ರಸಾದ ಸಂಸ್ಕಾರ, ಗುರು ದೀಕ್ಷೆಯ ಸಂಸ್ಕಾರ, ಸೇವೆಯ ಸಂಸ್ಕಾರದ ಸ್ಮರಣೆಯೊಂದಿಗೆ ವಿಶೇಷ ಪ್ರಾರ್ಥನೆ, ಬಲಿಪೂಜೆ, ಆರಾಧನೆಗಳು ಜರುಗಿದವು. ಪವಿತ್ರ ಗುರುವಾರದ ಬಳಿಕ ಶುಕ್ರವಾರದಂದು ಯೇಸು ಸ್ವಾಮಿಯನ್ನು ಶಿಲುಬೆಗೇರಿಸಿದ್ದು ಶುಕ್ರವಾರವನ್ನು ಕ್ರೈಸ್ತರು ಶುಭ ಶುಕ್ರವಾರವಾಗಿ ಆಚರಿಸಿ ಧ್ಯಾನ, ಉಪವಾಸ ಹಾಗೂ ಯೇಸುವಿನ ಶಿಲುಬೆಯ ಹಾದಿಯನ್ನು ನೆರವೇರಿಸುವ ಮೂಲಕ ಆಚರಿಸಲಿದ್ದಾರೆ.ತೊಟ್ಟಂ - ವೈಶಿಷ್ಟಪೂರ್ಣ ಆಚರಣೆ: ಮಲ್ಪೆ ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನದ ಗುರುವಾರವನ್ನು ವಿಶಿಷ್ಠವಾಗಿ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದಲ್ಲಿ ಪ್ರಸ್ತುತ ವರ್ಷವನ್ನು ಬಡವರ ವರ್ಷವಾಗಿ ಆಚರಿಸಲಾಗುತ್ತಿದ್ದು ತೊಟ್ಟಂ ಚರ್ಚ್ ವ್ಯಾಪ್ತಿಯ 12 ಮಂದಿ ವಿಶಿಷ್ಠ ವ್ಯಕ್ತಿಗಳನ್ನು ಗುರುತಿಸಿ ಅವರುಗಳ ಪಾದಗಳನ್ನು ಧರ್ಮಗುರು ಡೆನಿಸ್ ಡೆಸಾ ಅವರು ತೊಳೆದು ಯೇಸು ಸ್ವಾಮಿ ತೋರಿದ ಸರಳತೆಯ ಸಂದೇಶವನ್ನು ಸ್ಮರಿಸಿದರು.

ಈ ವೇಳೆ ಸ್ಥಳೀಯ ಕಾನ್ವೆಂಟಿನ ಸುಷ್ಮಾ, ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಲವೀನಾ ಫರ್ನಾಂಡಿಸ್, 20 ಆಯೋಗಗಳ ಸಂಚಾಲಕಿ ಶಾಂತಿ ಫರ್ನಾಂಡಿಸ್ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು