ಸಾರಾಂಶ
ಕನ್ನಡಪ್ರಭ ವಾರ್ತೆ, ಕೆ.ಆರ್.ಪೇಟೆ
ಕೆ.ಆರ್.ಪೇಟೆ ತಾಲೂಕಿನ ರಸ್ತೆಗಳಲ್ಲಿ ಮಂಡಿ ಉದ್ದ ಗುಂಡಿಗಳು ಬಿದ್ದಿವೆ. ನಮ್ಮ ತಾಲೂಕಿನಲ್ಲಿ ಹಲವು ಕೆರೆಗಳ ಏರಿ ಹೊಡೆದುಹೋಗಿವೆ. ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿಯೂ ಮಾತನಾಡಿದ್ದೆ. ಈ ಕುರಿತು ಸಚಿವ ಚಲುವರಾಯಸ್ವಾಮಿ ಅವರ ಗಮನಕ್ಕೂ ತಂದಿದ್ದೆ. ನಾನು ಜೆಡಿಎಸ್ ಶಾಸಕನಾಗಿದ್ದೇನೆ. ನಮ್ಮ ಕ್ಷೇತ್ರದ ಸಮಸ್ಯೆಗೂ ಸ್ಪಂದಿಸಿ. ನಮ್ಮ ತಾಲೂಕಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಶಾಸಕ ಎಚ್.ಟಿ.ಮಂಜು ಮನವಿ ಮಾಡಿದರು.ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಈ ಬಾರಿ ಒಳ್ಳೆಯ ಮಳೆ ಆಗಿದೆ. ಅದರಿಂದ ರಸ್ತೆಗಳು, ಸೇತುವೆಗಳು ಹಾಳಾಗಿವೆ. ಮಳೆಯಿಂದ ಸಾಕಷ್ಟು ಹಾನಿಯಾಗಿವೆ. ಏಕೆಂದರೆ, ಕಳೆದ ಐದು ವರ್ಷ ಯಾವುದೇ ಅಭಿವೃದ್ಧಿ ಮಾಡಿರಲಿಲ್ಲ. ಈ ಹಿಂದೆ ನಾವು ಮಾಡಿದ್ದೆಷ್ಟೋ ಅಷ್ಟೇ. ಆಗ ನೀನು ಶಾಸಕ ಆಗಿರಲಿಲ್ಲ. ಈಗ ಶಾಸಕ ಆಗಿದ್ದೀಯ, ಸಮಸ್ಯೆ ಹೇಳುತ್ತಿದ್ದೀಯಾ. ಮಾಡಿಕೊಡುತ್ತೇನೆ. ನಿಮ್ಮ ಎಲ್ಲಾ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಎಚ್.ಟಿ.ಮಂಜು, ಸ್ಥಳೀಯ ನಾಯಕರು ಹಾಗೂ ಜನರಿಗೆ ಸಿಎಂ ಭರವಸೆ ನೀಡಿದರು.
ತಾಲೂಕಿಗೆ ಅಗತ್ಯ ಅನುದಾನ ನೀಡುವಂತೆ ಸಿಎಂಗೆ ಶಾಸಕ ಎಚ್.ಟಿ.ಮಂಜು ಮನವಿಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಜನರ ಅವಶ್ಯಕತೆಗಳನ್ನು ನೀಗಿಸಿಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಮನವಿ ಮಾಡಿದರು.ಪಟ್ಟಣದಲ್ಲಿ ಕೆ.ಎನ್.ಕೆಂಗೇಗೌಡ ರೈತ ಭವನ ಉದ್ಘಾಟನೆ ನಂತರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ಜನತೆ ಪರವಾಗಿ ಸ್ವಾಗತಿಸಿದ ಶಾಸಕರು, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಿಎಂ ಮುಂದಿಟ್ಟರು.
ಕಳೆದ 2021-22 ರಲ್ಲಿ ಸುರಿದ ಬಾರಿ ಮಳೆಗೆ ಕ್ಷೇತ್ರದ ಸಂತೇಬಾಚಹಳ್ಳಿ ಹೋಬಳಿಯ ಸಂತೇಬಾಚಹಳ್ಳಿ, ನಾಗರಘಟ್ಟ, ಲೋಕನಹಳ್ಳಿ, ಮಾವಿನಕಟ್ಟೆ ಕೊಪ್ಪಲು, ಮಾಳಗೂರು ಮುಂತಾದ ಭಾಗದ ಕೆರೆ-ಕಟ್ಟೆಗಳು ಒಡೆದು ಹೋಗಿವೆ. ಇದರ ಜೊತೆಗೆ ಅತೀವೃಷ್ಟಿಯಿಂದ ಸೇತುವೆಗಳು, ರಸ್ತೆಗಳು ಹಾಳಾಗಿ ರೈತಾಪಿ ಜನರಿಗೆ ತೀವ್ರ ಸಮಸ್ಯೆಯಾಗಿದೆ ಎಂದರು.ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದೆ. ಆದರೆಸ ಕೆರೆಗಳು ಒಡೆದು ಹೋಗಿರುವುದರಿಂದ ಕೆರೆಗಳಲ್ಲಿ ನೀರಿಲ್ಲ. ಒಂದು ಕೆರೆ ಕಟ್ಟಬೇಕಾದರೆ ನೂರಾರು ಎಕರೆ ಭೂಮಿ ಮತ್ತು ಸಾವಿರಾರು ಕೋಟಿ ಹಣ ಬೇಕು. ನಾವು ಹೊಸ ಕೆರೆಗಳನ್ನು ಕಟ್ಟುವುದಿರಲಿ ನಮ್ಮ ಹಿರಿಯರು ಕಟ್ಟಿರುವ ಕೆರೆಗಳನ್ನಾದರೂ ಸರಿಪಡಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಒಡೆದು ಹೋಗಿರುವ ಕೆರೆಗಳು ಮತ್ತು ಹದಗೆಟ್ಟ ರಸ್ತೆಗಳು ಹಾಗೂ ಸೇತುವೆಗಳ ಬಗ್ಗೆ ರಾಜ್ಯ ವಿಧಾನ ಸಭೆಯಲ್ಲಿಯೂ ನಾನು ಪ್ರಸ್ತಾಪಿಸಿದ್ದೇನೆ. ತಾಲೂಕಿನ ಉದ್ದಗಲಕ್ಕೂ ಸಾರ್ವಜನಿಕ ರಸ್ತೆಗಳು ಮಂಡಿಯುದ್ದ ಗುಂಡಿ ಬಿದ್ದಿವೆ. ಕ್ಷೇತ್ರದ ಶಾಸಕನಾಗಿ ನಾನು ನನ್ನ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯ ಅನುದಾನ ನೀಡುವಂತೆ ಕೋರಿದರು.ನಾನು ಜೆಡಿಎಸ್ ಪಕ್ಷದ ಶಾಸಕನಾಗಿರಬಹುದು. ಆದರೆ, ರಾಜ್ಯದ ಮುಖ್ಯಮಂತ್ರಿಗಳಾದ ನೀವು ಸಮಾಜವಾದಿ ನೆಲೆಗಟ್ಟಿನಲ್ಲಿ ಕೆಲಸ ಮಾಡುವವರು. ಸಮಾಜಮುಖಿ ಚಿಂತಕರಾಗಿ ನನ್ನ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ನೀಡುವ ಭರವಸೆ ಇದೆ ಎಂದು ಶಾಸಕ ಎಚ್.ಟಿ.ಮಂಜು ಬಹಿರಂಗ ವೇದಿಕೆಯಲ್ಲಿಯೇ ಸಿಎಂಗೆ ಮನವಿ ಮಾಡಿದರು.