ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ/ ಮಂಡ್ಯಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಹೆದ್ದಾರಿ ಪ್ರಾಧಿಕಾರ ಅಧಿಕಾರಗಳ ಜೊತೆ ಸಭೆ ನಡೆಸಿ ಒಂದೊಂದೇ ಸಮಸ್ಯೆ ಬಗೆಹರಿಸುತ್ತಿದ್ದೇವೆ. ಹನಕೆರೆ - ಗೌಡಗೆರೆ ಬಳಿ ಅಂಡರ್ ಪಾಸ್ ನಿರ್ಮಾಣ ಸೇರಿದಂತೆ ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಕೃಷಿ ಸಚಿವರು ಆದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದರು.
ರಾಮನಗರದ ಬಸವನಪುರ ಗ್ರಾಮದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮಂಡ್ಯ ಕ್ಷೇತ್ರ ಶಾಸಕ ಗಣಿಗ ರವಿಕುಮಾರ್ ಅವರನ್ನು ಭೇಟಿಯಾಗಿ ಮನವೊಲಿಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದರು.ಎಕ್ಸ್‌ಪ್ರೆಸ್ ವೇನಲ್ಲಿ ಅಂಡರ್ ಪಾಸ್ ಬಹಳ ಪ್ರಮುಖವಾದ ಸಮಸ್ಯೆಯಾಗಿದೆ. ಎನ್ ಎಚ್ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ಒಂದೊಂದೇ ಸಮಸ್ಯೆ ಬಗೆಹರಿಸುತ್ತಾ ಬಂದಿದ್ದೇವೆ.ಅಲ್ಲದೆ, ಮುಖ್ಯಮಂತ್ರಿಗಳು ಸಹ ಕೆಲವೊಂದು ಸಮಸ್ಯೆಗಳನ್ನು ಪಟ್ಟಿ ಮಾಡಿ ಕೇಂದ್ರ ಸಚಿವ ಗಡ್ಕರಿ ಅವರಿಗೂ ಸಲ್ಲಿಸಿದ್ದಾರೆ. ಅದರಲ್ಲಿ ಕೆಲವೊಂದು ಬಗೆಹರಿದಿದ್ದು, ಇನ್ನೂ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದರು.
ಹನಕೆರೆ ಬಳಿ ಅಂಡರ್ ಪಾಸ್ ನಿರ್ಮಾಣ ಆಗಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಶಾಸಕ ಗಣಿಗ ರವಿ ಸಹ ಎಲ್ಲಾ ಸಭೆಗಳಲ್ಲಿ ಒತ್ತಡ ತರುತ್ತಿದ್ದರು. ಆದರೀಗ ಎನ್ ಎಚ್ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ಕೂತಿದ್ದಾರೆ. ಇಂದಿನ ಎಲ್ಲಾ ಕಾರ್ಯಕ್ರಮ ಮೊಟಕುಗೊಳಿಸಿ ಇಲ್ಲಿಗೆ ಬಂದಿದ್ದೇವೆ. ನಾನೂ ಸಹ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ. ಕೊನೆ ಹಂತದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಾಪ ಅವರನ್ನು ಸಮರ್ಥರು ಅನ್ನಬೇಕಾ, ಬುದ್ದಿವಂತರು ಅನ್ನಬೇಕಾ ಗೊತ್ತಿಲ್ಲ. ಏನೋ ಒಂದು ಹೇಳಿದರೆ ಅವರು ಇನ್ನೇನೋ ಹೇಳುತ್ತಾರೆ.ಸಂಸದರಾಗಿ ಗಡ್ಕರಿ ಭೇಟಿ ಮಾಡಿದೆ ಅಂದರೆ ಬೇಡ ಅನ್ನೋದಕ್ಕೆ ಆಗುತ್ತಾ. ಕ್ರೆಡಿಟ್ ಯಾರಿಗೆ ಹೋಗುತ್ತದೆ ಅನ್ನುವುದಲ್ಲ, ಕೆಲಸ ಆಯಿತಾ ಎಂಬುದು ಮುಖ್ಯ ಎಂದು ವ್ಯಂಗ್ಯವಾಡಿದರು.
ಎಕ್ಸ್‌ಪ್ರೆಸ್ ವೇನಲ್ಲಿ ಪ್ರತಿನಿತ್ಯ 20-30 ಅಪಘಾತಗಳು ಸಂಭವಿಸುತ್ತಿದ್ದಾಗ ಅದನ್ನು ಏಕೆ ತಪ್ಪಿಸಲಿಲ್ಲ.ಉದ್ಘಾಟನೆ ಮಾಡುವುದಕ್ಕೂ ಮುಂಚೆ ಸರ್ವೀಸ್ ರಸ್ತೆಯನ್ನು ಏಕ ಪೂರ್ಣಗೊಳಿಸಲಿಲ್ಲ. ಇದೆಲ್ಲ ಯಾರ ತಪ್ಪು ನಮ್ಮದಾ ಅವರದಾ. ಜನರಿಗೆ ಒಳ್ಳೆಯದಾಗುವ ರೀತಿಯಲ್ಲಿ ಕೆಲಸ ಮಾಡಲಿ ಎಂದು ಚಲುವರಾಯಸ್ವಾಮಿ ಸಲಹೆ ನೀಡಿದರು.