ಮಂಡ್ಯದಲ್ಲಿ ‘ಐ ಲವ್ ಆರ್‌ಎಸ್‌ಎಸ್‌’ ಪೋಸ್ಟರ್ ಅಭಿಯಾನ

| Published : Oct 15 2025, 02:06 AM IST

ಸಾರಾಂಶ

ಆರ್‌ಎಸ್‌ಎಸ್‌ ಚಟುವಟಿಕೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಂಡ್ಯ ನಗರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ‘ಐ ಲವ್ ಆರ್‌ಎಸ್‌ಎಸ್’ ಪೋಸ್ಟರ್ ಅಭಿಯಾನ.

ಕನ್ನಡಪ್ರಭ ವಾರ್ತೆ ಮಂಡ್ಯ

ಆರ್‌ಎಸ್‌ಎಸ್‌ ಚಟುವಟಿಕೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನಗರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ‘ಐ ಲವ್ ಆರ್‌ಎಸ್‌ಎಸ್’ ಪೋಸ್ಟರ್ ಅಭಿಯಾನ ನಡೆಸಿದರು.

ನಗರದ ಪ್ರಧಾನ ಅಂಚೆ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೋಸ್ಟರ್‌ಗಳನ್ನು ಅಂಗಡಿ ಮುಂಗಟ್ಟುಗಳ ಮುಂದೆ, ವಾಹನಗಳಿಗೆ ಅಂಟಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಗತ್ತಿನ ದೊಡ್ಡ ದೇಶಭಕ್ತ ಸಂಘಟನೆಯಾದ ಆರಸ್‌ಎಸ್‌ಎಸ್‌ ಸುಮಾರು 80 ಸಾವಿರ ಶಾಖೆಗಳು, ಕೋಟ್ಯಂತರ ಸ್ವಯಂ ಸೇವಕರನ್ನು ಹೊಂದಿದೆ. ಆರ್‌ಎಸ್‌ಎಸ್ ಇಲ್ಲದಿದ್ದರೆ ನೆರೆಯ ಶ್ರೀಲಂಕಾ, ಬಾಂಗ್ಲಾ ಹಾಗೂ ನೇಪಾಳ ದೇಶಗಳಲ್ಲಿ ಆದ ಗಲಭೆಗಳು ನಡೆಯುತ್ತಿದ್ದವು ಎಂದು ಕಿಡಿಕಾರಿದರು.

ಭಾರತವನ್ನು ಮತ್ತೊಮ್ಮೆ ವಿಭಜನೆ ಮಾಡಲು ಬಾಹ್ಯ ಶಕ್ತಿಗಳು ‘ಘಜ್ವಾ ಏ ಹಿಂದ್’ ಹೆಸರಿನಲ್ಲಿ ಜಾಗತಿಕ ಮಟ್ಟದಲ್ಲಿ ಪಿತೂರಿ ನಡೆಯುತ್ತಿದೆ. ಬಾಂಗ್ಲಾ ದೇಶದ ಯುನಿವರ್ಸಿಟಿಗಳಲ್ಲಿ ಈ ಬಗ್ಗೆ ಹತ್ತಾರು ವರ್ಷದಿಂದ ಸಂಶೋಧನೆ ನಡೆಯುತ್ತಿದೆ. 2050ರ ವೇಳೆಗೆ ಮತ್ತೊಮ್ಮೆ ಭಾರತವನ್ನು ಧರ್ಮದ ಹೆಸರಿನಲ್ಲಿ ಭಾಗ ಮಾಡುವ ಪಿತೂರಿ ನಡೆಯುತ್ತಿದೆ. ಅದಕ್ಕೆ ಇಂದು ತಡೆಗೋಡೆಯಾಗಿ ನಿಂತಿರುವುದು ಆರ್‌ಎಸ್‌ಎಸ್ ಸಂಘಟನೆ ಎಂದರು.

ದೇಶದಲ್ಲಿ ಭೂಕಂಪ, ಸುನಾಮಿ, ಪ್ರವಾಹಗಳಾದ ಎಲ್ಲರಿಗಿಂತ ಮೊದಲು ನೆರವಿಗೆ ನಿಲ್ಲುವುದೇ ಸ್ವಯಂ ಸೇವಕ ಸಂಘ. ಇಂತಹ ಸಂಘಟನೆ ಬಗ್ಗೆ ಲಘುವಾಗಿ ಮಾತನಾಡಿರುವ ಪ್ರಿಯಾಂಕ್‌ ಖರ್ಗೆ ಈ ದೇಶದ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ನೆಹರು, ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ಆರ್‌ಎಸ್‌ಎಸ್ ಸಂಘಟನೆ ನಿಷೇಧ ಮಾಡುವ ವ್ಯರ್ಥ ಪ್ರಯತ್ನ ಮಾಡಿತ್ತು. ನಿಷೇಧದ ಬಗ್ಗೆ ನ್ಯಾಯಾಲಯ ಕೂಡ ಕಾಂಗ್ರೆಸ್‌ಗೆ ಕಪಾಳ ಮೋಕ್ಷ ಮಾಡಿದೆ. ಇದನ್ನು ಮರೆತ ಪ್ರಿಯಾಂಕ್‌ ಖರ್ಗೆ ತಮ್ಮ ನಾಲಿಗೆ ಹರಿ ಬಿಟ್ಟಿರುವುದು ನಗೆ ಪಾಟಲಿನ ವಿಚಾರವಾಗಿದೆ ಎಂದರು.

ರಾಜ್ಯದಲ್ಲಿ ಹಲವು ಮೂಲ ಸಮಸ್ಯೆಗಳಿವೆ. ಮಳೆ ಹಾನಿಯಿಂದ ರೈತರು, ಜನಸಾಮಾನ್ಯರು ಪರದಾಡುತ್ತಿದ್ದಾರೆ. ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಸೌಲಭ್ಯಗಳ ಮರಿಚೀಕೆಯಾಗಿದೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ. ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದರು.

ಸ್ವತಃ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುವ ಕಲುಬುರ್ಗಿ ಜಿಲ್ಲೆಯಲ್ಲೇ ಕನಿಷ್ಠ ಮೂಲ ಸೌಲಭ್ಯಗಳಿಲ್ಲ. ಬಸ್ ನಿಲ್ದಾಣವಿಲ್ಲದೆ ಜನರು ಬಸ್‌ ಬಂದಾಗಲೆಲ್ಲಾ ಅದರ ಹಿಂದೆ ಓಡಿಹೋಗಿ ಬಸ್ಸನ್ನೇರುವಂತಹ ವಾತಾವರಣ ಇದೆ. ಇಂತಹ ಸಮಸ್ಯೆ ಬಗೆಹರಿಸುವ ಬದಲು ಆರ್‌ಎಸ್ಎಸ್‌ ನಿಷೇಧದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮುಖಂಡರಾದ ಹೊಸಹಳ್ಳಿ ಶಿವು, ನಾಗಣ್ಣ ಮಲ್ಲಪ್ಪ, ಶಿವಕುಮಾರ್ ಆರಾಧ್ಯ, ಶಿವಲಿಂಗಯ್ಯ, ಗೊರವಲೆ ಶಿವಣ್ಣ, ಆನಂದ, ನಂದೀಶ್‌, ಚನ್ನೇಗೌಡ, ಚಿಕ್ಕೇಗೌಡ ಸುರೇಶ್‌, ಮಹದೇವಸ್ವಾಮಿ, ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದರು.