ಪಿಟಿಐ ಕಲ್ಲಿಕೋಟೆ

ಮಾನವ ಪ್ರಕೃತಿಯ ಕೂಸೇ ಆದರೂ ಕಾಡಲ್ಲಿ ಕಳೆದುಹೋದರೆ ಭಯ ಕಾಡದೇ ಇರದು. ಆದರೆ ಕೊಡಗು ಜಿಲ್ಲೆಯ ಕಾನನವೊಂದಕ್ಕೆ ಚಾರಣಕ್ಕೆಂದು ಬಂದಿದ್ದ ಕೇರಳದ ಟೆಕ್ಕಿ ಯುವತಿಯೊಬ್ಬರು ಜತೆಗಾರರಿಂದ ಬೇರ್ಪಟ್ಟರೂ, 4 ದಿನ ಒಬ್ಬಂಟಿಯಾಗಿ ಅನ್ನಾಹಾರ, ಮೊಬೈಲ್‌ ಇಲ್ಲದೆ ನಿರ್ಭೀತಿಯಿಂದ ಇದ್ದರು. ಈ ಭಯಾನಕ ಅನುಭವವನ್ನು ಅದ್ಭುತವೆಂದು ವರ್ಣಿಸಿರುವ ಈ ಗಟ್ಟಿಗಿತ್ತಿ, ಮತ್ತೆ ಟ್ರೆಕಿಂಗ್‌ಗೆ ಬರುವುದಾಗಿ ಹೇಳಿದ್ದಾರೆ.

ಭಾನುವಾರ ರಾತ್ರಿ ಸ್ಥಳೀಯರಿಂದ ರಕ್ಷಿಸಲ್ಪಟ್ಟ ಜಿ.ಎಸ್‌. ಶರಣ್ಯಾ (36) ಎಂಬ ಟೆಕ್ಕಿ ತಮ್ಮ ಊರಾದ ಕೇರಳದ ನಾಡಪುರಂ ತಲುಪಿದ್ದು, ಕೊಡಗಿನ ತಡಿಯಂಡಮೋಳ್‌ ಕಾಡಲ್ಲಿ ದಾರಿ ತಪ್ಪಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

‘12 ಜನರ ತಂಡದಲ್ಲಿದ್ದ ನಾನು ಬೇಗಬೇಗ ನಡೆಯುತ್ತಿದ್ದ ಕಾರಣ ಅವರಿಂದ ಬೇರ್ಪಟ್ಟೆ. ಬಳಿಕ ಅವರೆಲ್ಲಾ ಬಂಡೆಗಳ ಮೇಲೆ ಕುಳಿತು ಸುಧಾರಿಸಿಕೊಳ್ಳುತ್ತಿದ್ದುದನ್ನು ನೋಡಿ ಅವರು ಸಿಗಬಹುದು ಎಂದುಕೊಂಡೆ. ಆದರೆ ನಂತರ ಅವರು ಸಿಗಲೇ ಇಲ್ಲ. ನಾನು ದಾರಿ ತಪ್ಪಿದ್ದೆ. ಹೆಜ್ಜೆಗುರುತುಗಳನ್ನು ಅನುಸರಿಸಿ ಹೋದವಳು ಕಾಡನ್ನು ಪ್ರವೇಶಿಸಿದ್ದೆ. ನಾನಿದ್ದ ಹೋಂಸ್ಟೇಯವರಿಗೆ ದಾರಿ ತಪ್ಪಿರುವ ಬಗ್ಗೆ ಹೇಳಬೇಕು ಎನ್ನುವಷ್ಟರಲ್ಲಿ ಮೊಬೈಲ್‌ ಸ್ವಿಚ್‌ ಆಫ್‌ ಆಯಿತು’ ಎಂದು ತಾವು ಒಬ್ಬಂಟಿಯಾಗಿದ್ದನ್ನು ವಿವರಿಸಿದರು.

ಮುಂದುವರೆದು, ‘ಬಂಡೆಗಳು ಸುರಕ್ಷಿತವಾಗಿ ಕಂಡವಾದ್ದರಿಂದ ಅವುಗಳ ಮೇಲೆ ಹತ್ತಿದೆ. ಊಟ ತಂದಿರಲಿಲ್ಲ. 500 ಎಂ.ಎಲ್‌. ಬಾಟಲಿ ನೀರು ಖಾಲಿಯಾಗಿದ್ದರಿಂದ ಹರಿಯುತ್ತಿದ್ದ ತೊರೆಯ ನೀರು ಕುಡಿಯತೊಡಗಿದೆ. ತೊರೆಯಲ್ಲಿ ಸಾಕಷ್ಟು ನೀರಿತ್ತು. ಇದು ನನಗೆ ಸಮಾಧಾನ ತಂದಿತು. ದಿನಕ್ಕೆ 3 ಲೀ. ನೀರು ಸೇವಿಸುತ್ತಿದ್ದೆ. ಹಸಿವಾಗುತ್ತಿರಲಿಲ್ಲ. ಆಗಾಗ ಆನೆಗಳ ಹಿಂಡು ಕಾಣಿಸುತ್ತಿತ್ತು. ಆದರೂ ಭಯವಾಗಲಿಲ್ಲ. ಸಂಜೆಯಾಗುತ್ತಿದ್ದಂತೆ ಮಿಂಚುಹುಳಗಳು ಕಾಡನ್ನು ಆವರಿಸಿಕೊಳ್ಳುತ್ತಿದ್ದವು. ಜತೆಗೆ ಬೆಳದಿಂಗಳು ಸೂಸುತ್ತಿದ್ದ ಆಗಸದಲ್ಲಿ ತಾರೆಗಳು ಮಿನುಗುತ್ತಿದ್ದವು. ಹೀಗಾಗಿ ರಾತ್ರಿ ಭಯ ಎನ್ನಿಸಲಿಲ್ಲ. ಸುತ್ತ ಕೀಟಗಳು ಕಿರುಚುವ ಸದ್ದು ಕೇಳುತ್ತಿತ್ತು’ ಎಂದು ಕಾಡಿನ ಸೊಬಗನ್ನು ಶರಣ್ಯಾ ಬಣ್ಣಿಸಿದ್ದಾರೆ.ತನಗಾಗಿ ಶೋಧಕಾರ್ಯ ಆರಂಭವಾಗಿದ್ದರೆ ಎಂದು ಭಾವಿಸಿ, ಅದಕ್ಕೆಂದು ಆಕಾಶದಲ್ಲಿ ಹಾರುವ ಡ್ರೋನ್‌ಗಳಿಗೆ ಕಾಣಿಸುವಂತೆ ತೆರೆದ ಪ್ರದೇಶಗಳಲ್ಲಿ ಚಲಿಸುತ್ತಿದ್ದರು. ಅವರು ಕೊನೆಗೆ ಸ್ಥಳೀಯರ ಕಣ್ಣಿಗೆ ಬಿದ್ದು ಅಲ್ಲಿಂದ ರಕ್ಷಿಸಲ್ಪಟ್ಟರು. ಇಷ್ಟಾದರೂ ಕಂಗೆಡದ ಆಕೆ, ‘ಚಾರಣ ನನಗಿಷ್ಟ’ ಎನ್ನುತ್ತಾರೆ.