ಯಲ್ಲಮ್ಮನಗುಡ್ಡದಲ್ಲಿ ಅಕ್ರಮ ಸಾರಾಯಿ ಪೂರ್ಣ ಸ್ಥಗಿತ

| Published : Jan 25 2024, 02:08 AM IST

ಯಲ್ಲಮ್ಮನಗುಡ್ಡದಲ್ಲಿ ಅಕ್ರಮ ಸಾರಾಯಿ ಪೂರ್ಣ ಸ್ಥಗಿತ
Share this Article
  • FB
  • TW
  • Linkdin
  • Email

ಸಾರಾಂಶ

ಅಬಕಾರಿ ಇಲಾಖೆ ಅಧಿಕಾರಿಗಳು ಈಗಾಗಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹುಣ್ಣಿಮೆಗಳಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ಸಂಪೂರ್ಣ ಅಂತ್ಯ ಹಾಡಲಾಗಿದೆ

ಕನ್ನಡಪ್ರಭ ವಾರ್ತೆ ಸವದತ್ತಿ

ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಅಕ್ರಮ ಸಾರಾಯಿ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಶ್ರೀ ಕ್ಷೇತ್ರದಲ್ಲಿ ಸುವ್ಯವಸ್ಥಿತ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಪದಕಿಪುರಂ ಬಡಾವಣೆಯಲ್ಲಿರುವ ಶಾಸಕರ ನಿವಾಸದಲ್ಲಿ ಯಲ್ಲಮ್ಮನಗುಡ್ಡದಲ್ಲಿ ಬರುವ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಗಳಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆಗಳ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಬಕಾರಿ ಇಲಾಖೆ ಅಧಿಕಾರಿಗಳು ಈಗಾಗಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹುಣ್ಣಿಮೆಗಳಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ಸಂಪೂರ್ಣ ಅಂತ್ಯ ಹಾಡಲಾಗಿದೆ ಎಂದ ಅವರು, ಸಾರಾಯಿ ಮಾರಾಟ ಮತ್ತು ಕುಡಿತದಿಂದ ಕ್ಷೇತ್ರದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.

ಗುರುವಾರ ನಡೆಯಲಿರುವ ಹುಣ್ಣಿಮೆ ಸಂದರ್ಭದಲ್ಲಿ ಸುಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಅವರಿಗೆ ಎಲ್ಲ ರೀತಿಯ ಸೌಲಭ್ಯತೆಯನ್ನು ಕಲ್ಪಿಸುವಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದ ಅವರು, ಪವಿತ್ರ ಎಣ್ಣೆ ಹೊಂಡದಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸಲು ಪ್ರತ್ಯೇಕ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಅಲ್ಲಲ್ಲಿ ಲಗೇಜ್ ರೂಮ್‌ಗಳ ವ್ಯವಸ್ಥೆ ಮತ್ತು ಪಾದರಕ್ಷೆಗಳನ್ನು ಬಿಡುವ ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತಿದೆ ಎಂದರು.

ಕ್ಷೇತ್ರದ ಹೊರ ಆವರಣದ ಎಲ್ಲ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಕೇಂದ್ರೀಕೃತವಾಗಿರುವ ಮೈಕ್ ಸಿಸ್ಟಮ್ ಅಳವಡಿಸಿ ಭಕ್ತರಿಗೆ ಸೂಕ್ತವಾದ ಎಲ್ಲ ಮಾಹಿತಿಯನ್ನು ನೀಡುವಂತೆ ಕ್ರಮವಹಿಸಲಾಗಿದೆ. ದೇವಸ್ಥಾನದ ಆವರಣ, ಗರ್ಭಗುಡಿಯೊಳಗೆ ನಡೆಯುವ ಪೂಜಾ ಕಾರ್ಯಗಳನ್ನು ಸಾರ್ವಜನಿಕವಾಗಿ ವೀಕ್ಷಿಸಲು ಎರಡು ಎಲ್‌ಸಿಡಿ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಗೆ ಆಗಮಿಸಿರುವ ಭಕ್ತರಿಗೆ ದೇವಿಯ ಪೂಜಾ ವಿಧಾನದ ನೇರ ಪ್ರಸಾರ ನೋಡಲು ಅನುಕೂಲವಾಗಲಿದೆ ಎಂದು ಹೇಳಿದರು.

ಯಲ್ಲಮ್ಮನಗುಡ್ಡದಿಂದ ಉಗರಗೋಳಕ್ಕೆ ಹೋಗುವ ಬೈಪಾಸ್ ರಸ್ತೆಯನ್ನು ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿದ್ದು, ಶ್ರೀ ಕ್ಷೇತ್ರದಲ್ಲಿ ವಾಹನಗಳ ದಟ್ಟಣೆಯಾಗದಂತೆ ಈ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.

ಶ್ರೀ ಕ್ಷೇತ್ರದ 88 ಎಕರೆ ಹಾಗೂ 1097 ಎಕರೆ ಜಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಉನ್ನತ ಅಭಿವೃದ್ಧಿಯನ್ನು ಕೈಗೊಳ್ಳುವ ಗುರಿ ಹೊಂದಲಾಗಿದೆ. ಭಕ್ತರಿಗೆ ತೊಂದರೆಯಾಗಿರುವಂತ ಕ್ಯೂಲೈನ್ ವ್ಯವಸ್ಥೆಯನ್ನು ಜಾತ್ರೆ ಮುಗಿದ ನಂತರ ಸಂಪೂರ್ಣವಾಗಿ ಸರಿಪಡಿಸುವಂತ ಕಾರ್ಯವನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಾಳಿಯಲ್ಲಿ ಭಕ್ತರಿಗೆ ಗೋಪುರ ದರ್ಶನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.

ಜಾತ್ರೆಗೆ ಆಗಮಿಸುವ ರೈತರ ಜಾನುವಾರುಗಳಿಗೆ ಸೂಕ್ತ ಮೇವಿನ ವ್ಯವಸ್ಥೆ ಮತ್ತು ನೀರು ಹಾಗೂ ವೈದ್ಯಕೀಯ ಸೇವೆಯನ್ನು ಒದಗಿಸುವಂತ ಕ್ರಮ ಕೈಗೊಳ್ಳಲಾಗಿದೆ. ಭಕ್ತರಿಗೆ 302 ಕೊಠಡಿಗಳಲ್ಲಿ ಮತ್ತು 3 ಡಾರ್ಮೆಂಟರಿಗಳಲ್ಲಿ ವಸತಿ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು, ಭಕ್ತರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.

ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಶ್ರೀ ಕ್ಷೇತ್ರಕ್ಕೆ ಆಗಮಿಸುವ ಸರ್ಕಾರಿ ಮತ್ತು ಸರ್ಕಾರೇತರ ವಿಐಪಿ ಜನರ ದರ್ಶನಕ್ಕಾಗಿ ತಾಲೂಕು ಆಡಳಿತ ಅಧಿಕಾರಿಗಳು ಫೋನ್ ಮಾಡಿದಾಗ ಸರಿಯಾಗಿ ಸ್ಪಂದಿಸುವ ಮನೋಭಾವನೆಯು ಯಲ್ಲಮ್ಮ ದೇವಸ್ಥಾನದ ಸಿಬ್ಬಂದಿಯವರಿಂದ ಕಾಣುತ್ತಿಲ್ಲ ಎಂದರು. ಸಿಬ್ಬಂದಿಯವರ ಈ ದುರ್ವರ್ತನೆಯಿಂದ ಕ್ಷೇತ್ರದ ಹಾಗೂ ತಾಲೂಕು ಆಡಳಿತದ ಹೆಸರಿಗೆ ಚ್ಯುತಿ ಬರುತ್ತಿದೆ. ಕ್ಷೇತ್ರಕ್ಕೆ ಆಗಮಿಸಿದ ಗಣ್ಯರಿಗೆ ಮುಖಸ್ತುತಿಯಾಗುವಂತೆ ಸಿಬ್ಬಂದಿ ವರ್ತಿಸುತ್ತಿದ್ದು, ಅದಕ್ಕೆ ಕಡಿವಾಣ ಹಾಕಿ ಸಂಯಮತೆಯಿಂದ ವರ್ತಿಸಬೇಕೆಂದು ಸೂಚನೆ ನೀಡಿದರು.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್‌ಪಿಬಿ ಮಹೇಶ, ಪಿಐ ಧರ್ಮಾಕರ ಧರ್ಮಟ್ಟಿ, ಪಿಎಸ್‌ಐ ಆನಂದ ಕ್ಯಾರಕಟ್ಟಿ, ಅಬಕಾರಿ ಇನಸ್ಪೆಕ್ಟರ್ ಶ್ರೀಶೈಲ್ ಅಕ್ಕಿ, ಟಿಎಚ್‌ಒ ಡಾ.ಶ್ರೀಪಾದ ಸಬನಿಸ, ಮುಖ್ಯವೈದ್ಯಾಧಿಕಾರಿ ಡಾ.ಮಲ್ಲನಗೌಡರ ಉಪಸ್ಥಿತರಿದ್ದರು.