ನಷ್ಟ ಚೇತರಿಕೆ ಬಳಿಕ ಹಾಲು ಖರೀದಿ ದರ ಹೆಚ್ಚಳ

| Published : Aug 28 2024, 01:01 AM IST

ಸಾರಾಂಶ

ಹಣಕಾಸಿನ ಕೊರತೆಯಿಂದ ಕೋಚಿಮುಲ್‌ ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಸದ್ಯದಲ್ಲೇ ಒಕ್ಕೂಟ ಆರ್ಥಿಕವಾಗಿ ಸಧೃಢವಾಗಿ ಒಕ್ಕೂಟದಿಂದ ಬರಬೇಕಾದ ಎಲ್ಲಾ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸುವುದರ ಜೊತೆಗೆ ಹಾಲಿನ ಬೆಲೆಯನ್ನೂ ಸಹ ಏರಿಸಲಾಗುತ್ತದೆ

ಕನ್ನಡಪ್ರಭವಾರ್ತೆ ಬಂಗಾರಪೇಟೆ

ಕೋಲಾರ ಒಕ್ಕೂಟವು ವಿವಿಧ ಕಾರಣಗಳಿಂದ ನಷ್ಟದಲ್ಲಿ ಇದ್ದು, ಆರ್ಥಿಕವಾಗಿ ಚೇತರಿಕೆ ಕಂಡ ಕೂಡಲೆ ರೈತರಿಗೆ ಹಾಲಿನ ದರವನ್ನು ಏರಿಕೆ ಮಾಡುವುದರ ಜೊತೆಗೆ ಮ್ಯಾಟ್, ಹಾಲು ಕರಿಯುವ ಯಂತ್ರಗಳು ಸೇರಿದಂತೆ ಇತರೆ ಸಾಧನಗಳನ್ನು ಪೂರೈಸಲಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು. ತಾಲೂಕಿನ ಬೂದಿಕೋಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟನೆ ಮಾಡಿ ಮಾತನಾಡಿ, ಡೆನ್ಮಾರ್ಕ್‌ನಿಂದ ಅಂದಿನ ರಾಣಿ ಉಡುಗೋರೆಯಾಗಿ ನೀಡಿದ ೧೦ ಹಸುಗಳ ಜೊತೆಗೆ ೧೦ ಹಸುಗಳನ್ನು ಖರೀದಿ ಮಾಡಿ ದೇಶಕ್ಕೆ ಎಚ್.ಎಫ್ ಹಸುಗಳನ್ನು ಕ್ಷೀರ ಕಾಂತಿಯ ಹರಿಕಾರ ಕೃಷ್ಣಪ್ಪ ಪರಿಚಯ ಮಾಡಿಸಿದರು ಅಂದಿನಿಂದ ಇಲ್ಲಿಯವರೆಗೂ ಹೈನುಗಾರಿಕೆಯನ್ನು ನಂಬಿದ ಜನ ನೆಮ್ಮದಿಯ ಜೀವನವನ್ನು ಸಾಗಿಸಲು ಸಹಕಾರಿಯಾಗಿದೆ ಎಂದರು.

ನಿತ್ಯ 2 ಲಕ್ಷ ಲೀ. ಹಾಲು ಉಳಿಕೆ

ನಿತ್ಯ ಒಕ್ಕೂಟಕ್ಕೆ ೧೨ ಲಕ್ಷ ಲೀಟರ್ ಹಾಲು ಪೂರೈಕೆ ಆಗುತ್ತಿದ್ದು, ೧೦ ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತನೆ ಮಾಡಲಾಗುತ್ತಿದ್ದು, ಪ್ರತಿ ಕೆಜಿ ಹಾಲಿನ ಪುಡಿ ತಯಾರಿಕೆಗೆ ೩೬ ರೂ ಖರ್ಚು ತಗಲುತ್ತಿದೆ ಆದರೆ ಮಾರುಕಟ್ಟೆಯಲ್ಲಿ ಹಾಲಿನ ಪುಡಿಗೆ ಕೇವಲ ೩೨ ರೂ ಬೆಲೆಗೆ ಮಾರಾಟವಾಗುತ್ತಿದೆ. ಜೊತೆಗೆ ನಿತ್ಯ ೨ ಲಕ್ಷ ಲೀಟರ್ ಹಾಲು ಉಳಿಕೆಯಾಗುತ್ತಿರುವ ಕಾರಣ ಒಕ್ಕೂಟಕ್ಕೆ ನಷ್ಟದ ಹೊಡೆತ ಉಂಟಾಗಿದೆ ಎಂದು ಹೇಳಿದರು.

ಈಗಾಗಲೇ ಹಾಲು ಉತ್ಪಾದಕರು ಹಾಲಿನ ಬೆಲೆಯನ್ನು ಏರಿಕೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇದರ ಬಗ್ಗೆ ರಾಜ್ಯದ ಯಾವುದೇ ಶಾಸಕರ ಸದನದಲ್ಲಿ ಒಮ್ಮೆಯೂ ಹಾಲಿನ ಬೆಲೆ ಏರಿಕೆ ಮಾಡುವಂತೆ ಪ್ರಸ್ತಾಪ ಮಾಡದಿರುವುದು ವಿಷಾದದ ಸಂಗತಿ. ಸುಮಾರು ೧೦೦ ಕೋಟಿಯಷ್ಟು ಹಣ ವಿವಿಧ ಕಡೆಯಿಂದ ಒಕ್ಕೂಟಕ್ಕೆ ಬರಬೇಕಾಗಿದ್ದು, ಹಣಕಾಸಿನ ಕೊರತೆಯಿಂದ ಕೆಲವು ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಸದ್ಯದಲ್ಲೇ ಒಕ್ಕೂಟ ಆರ್ಥಿಕವಾಗಿ ಸಧೃಢವಾಗಿ ಒಕ್ಕೂಟದಿಂದ ಬರಬೇಕಾದ ಎಲ್ಲಾ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸುವುದರ ಜೊತೆಗೆ ಹಾಲಿನ ಬೆಲೆಯನ್ನೂ ಸಹ ಏರಿಸಲಾಗುತ್ತದೆ ಎಂಬ ಭರವಸೆ ನೀಡಿದರುಮೂವರು ರೈತರಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ೩ ಜನ ಉತ್ಪಾದಕರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ವಿ.ಮಾರ್ಕಡೇಗೌಡ, ಸಂಘದ ಅಧ್ಯಕ್ಷ್ಷ ಮಂಜುನಾಥ, ಉಪಾಧ್ಯಕ್ಷ ನಾರಾಯಣಪ್ಪ, ಶಿಭಿರದ ಉಪ ವ್ಯವಸ್ಥಾಪಕ ಶಂಕರರೆಡ್ಡಿ, ವಿಸ್ತೀರ್ಣ ಅಧಿಕಾರಿಗಳಾದ ಭಾನುಪ್ರಕಾಶ್, ಕಿರಣ್ ಕುಮಾರ್, ಸಂಘದ ಕಾರ್ಯದರ್ಶಿ ಮುನಿರಾಜು, ಮುಂತಾದವರು ಹಾಜರಿದ್ದರು.