ರುಚಿ, ಶುಚಿ ಇಲ್ಲದ ಇಂದಿರಾ ಕ್ಯಾಂಟೀನ್ ಸ್ಥಿತಿ ಅಧ್ವಾನ

| Published : Jul 06 2025, 01:48 AM IST

ಸಾರಾಂಶ

ಬಡವರ ಹಸಿವು ನೀಗಿಸಲು ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲಾಗಿದೆ. ಆದರೆ, ದುಡಿಯುವ ವರ್ಗದ ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವ ಇಂದಿರಾ ಕ್ಯಾಂಟೀನ್‌ನಲ್ಲಿ ನಿರ್ವಹಣೆ ಜವಾಬ್ದಾರಿ ಹೊತ್ತ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಲಾಭದಾಸೆ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಕಳಂಕ ತರುವಂತಿದೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸುವಂತೆ ಹಾಗೂ ಅಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಬಿ.ಹೆಚ್. ರಸ್ತೆ ಇಂಡಿಯನ್‌ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರು, ಕೂಲಿ ಕಾರ್ಮಿಕರು, ಹಮಾಲಿಗಳು, ಅಸಂಘಟಿತ ವಲಯದ ಕಾರ್ಮಿಕರು, ಬೀದಿಬದಿಯ ವ್ಯಾಪಾರಿಗಳು ಸೇರಿದಂತೆ ಇನ್ನಿತರ ವರ್ಗಗಳ ಬಡವರ ಅನುಕೂಲಕ್ಕೆ ಸರ್ಕಾರ ಆರಂಭಿಸಿದ ಇಂದಿರಾ ಕ್ಯಾಂಟೀನ್‌ ವರ್ಷದಿಂದ ವರ್ಷಕ್ಕೆ ಕಳಪೆಯಾಗುತ್ತಿದೆ. ಕ್ಯಾಂಟೀನ್‌ ನಿರ್ವಹಣೆ ವೈಫಲ್ಯ

ಬಡವರ ಹಸಿವು ನೀಗಿಸಲು ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲಾಗಿದೆ. ಆದರೆ, ದುಡಿಯುವ ವರ್ಗದ ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವ ಇಂದಿರಾ ಕ್ಯಾಂಟೀನ್‌ನಲ್ಲಿ ನಿರ್ವಹಣೆ ಜವಾಬ್ದಾರಿ ಹೊತ್ತ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಲಾಭದಾಸೆ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಕಳಂಕ ತರುವಂತಿದೆ.ಈ ಕ್ಯಾಂಟೀನ್ ಇರುವು ಜಾಗದಲ್ಲಿ ಸ್ವಚ್ಛತೆ ಎಂಬುದು ಮರೀಚಿ ಕೆಯಾಗಿದೆ. ಕುಡಿಯುವ ನೀರಿನ ತೊಟ್ಟಿಯಲ್ಲಿ ಕಸ ಕಡ್ಡಿ ಬಿದ್ದು, ಕಪ್ಪೆ, ಹುಳಗಳು ಸತ್ತು ಬಿದ್ದಿದ್ದು, ಇದೇ ನೀರನ್ನು ವಿದ್ಯಾರ್ಥಿಗಳು ಮತ್ತು ಗ್ರಾಹಕರು ಕುಡಿಯಬೇಕಾಗಿದೆ. ನಗರದ ಬಿ.ಎಚ್‌. ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿರುವ ಫ್ರಿಡ್ಜ್‌ ಕೆಟ್ಟು ಹಲವು ತಿಂಗಳೇ ಆಗಿದೆ. ಆದರೆ, ಅದನ್ನು ಈವರೆಗೆ ದುರಸ್ತಿಗೊಳಿಸುವ ಗೋಜಿಗೆ ಅಧಿಕಾರಿಗಳು ಅಥವಾ ಗುತ್ತಿಗೆದಾರರು ಹೋಗಿಲ್ಲ. ಫ್ರಿಡ್ಜ್‌ನಲ್ಲಿ ತರಕಾರಿಗಳನ್ನು ಇಡುವ ಬದಲಿಗೆ ಖಾಲಿ ಚೀಲಗಳನ್ನು ಇಡಲಾಗಿದೆ.ಮೊದಲು ಬಂದವರಿಗಷ್ಟೇ ಊಟ

ನೀರು ಶುದ್ಧೀಕರಣ ಯಂತ್ರ ಕೆಟ್ಟಿದೆ. ತೂಕ ಮಾಡುವ ಯಂತ್ರವನ್ನು ಮೂಲೆಗೆ ಬಿಸಾಡಲಾಗಿದೆ. ಹೀಗಾಗಿ, ಸರ್ಕಾರವು ಊಟದ ಮೆನುವಿನಲ್ಲಿ ನಿಗದಿಪಡಿಸಿರುವ ಪ್ರಮಾಣವನ್ನು ಸರಿಯಾಗಿ ನೀಡದೆ, ಅಂದಾಜಿನ ಪ್ರಕಾರ ಬೇಕಾಬಿಟ್ಟಿಯಾಗಿ ಲೆಕ್ಕ ನೀಡಲಾಗುತ್ತಿದೆ. ಅಡುಗೆ ಮಾಡುವ ದೊಡ್ಡ ಪಾತ್ರೆಗಳು ಧೂಳು ತಿನ್ನುತ್ತಿದ್ದು, ಸಣ್ಣ ಪಾತ್ರೆಗಳಲ್ಲಿ ಆಹಾರವನ್ನು ತಯಾರಿಸಿ, ಗ್ರಾಹಕರಿಗೆ ವಿತರಿಸಲಾಗುತ್ತಿದೆ. ಇದರಿಂದಾಗಿ ಬಿ.ಎಚ್. ರಸ್ತೆ-ಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಮೊದಲು ಬಂದವರಿಗೆ ಊಟ. ನಂತರ ಬಂದವರಿಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತಾಗಿದೆ.ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಈ ಯೋಜನೆ ದಾರಿ ತಪ್ಪಿದ್ದು, ಈ ಅವ್ಯವಸ್ಥೆಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕು ಹಾಗೂ ಗುತ್ತಿಗೆದಾರರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.

ರುಚಿ, ಶುಚಿ ಎರಡೂ ಇಲ್ಲ

ಇದೇ ಕ್ಯಾಂಟೀನ್‌ ನಂಬಿಕೊಂಡಿರುವ ಕೂಲಿಕಾರ್ಮಿಕ ಗಂಗಪ್ಪ ಪ್ರತಿಕ್ರಿಯೆ ನೀಡಿದ್ದು, ಇತ್ತೀಚೆಗೆ ಗ್ರಾಹಕರಿಗೆ ವಿತರಣೆ ಮಾಡಲಾಗುತ್ತಿರುವ ತಿಂಡಿ ಮತ್ತು ಊಟದಲ್ಲಿ ಸ್ವಲ್ಪವೂ ಗುಣಮಟ್ಟವಿಲ್ಲ. ರುಚಿ ಮತ್ತು ಶುಚಿತ್ವವಂತೂ ಮರೀಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.