ಸಾರಾಂಶ
ವಸತಿರಹಿತರಿಗೆ ತಕ್ಷಣಕ್ಕೆ ಅನುಕೂಲವಾಗುವಂತೆ ನಗರದಲ್ಲಿರುವ ಐದು ಕೇಂದ್ರಗಳ ವಿಳಾಸ, ದೂರವಾಣಿ ಸಂಖ್ಯೆ, ಲಭ್ಯವಿರುವ ವಸತಿ ಸೌಲಭ್ಯ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಚುರಪಡಿಸಬೇಕು
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿರುವ ಐದು ವಸತಿರಹಿತರ ಆಶ್ರಯ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಊಟ ಹಾಗೂ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಸಮರ್ಪಕವಾಗಿ ನಿರ್ವಹಿಸಬೇಕು. ಅಗತ್ಯವಿದ್ದವರಿಗೆ ಇದರ ಪ್ರಯೋಜನ ದೊರಕಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಡೇ ನಲ್ಮ್ ಯೋಜನೆಯ ವಸತಿರಹಿತರ ಆಶ್ರಯ ಕೇಂದ್ರಗಳ ನಗರ ಮಟ್ಟದ ಅಧಿಕಾರಯುಕ್ತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಸತಿರಹಿತರಿಗೆ ತಕ್ಷಣಕ್ಕೆ ಅನುಕೂಲವಾಗುವಂತೆ ನಗರದಲ್ಲಿರುವ ಐದು ಕೇಂದ್ರಗಳ ವಿಳಾಸ, ದೂರವಾಣಿ ಸಂಖ್ಯೆ, ಲಭ್ಯವಿರುವ ವಸತಿ ಸೌಲಭ್ಯ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಚುರಪಡಿಸಬೇಕು. ಇದರಿಂದ ವಸತಿರಹಿತರಿಗೆ ತುರ್ತಾಗಿ ವಸತಿ ಸೌಲಭ್ಯವನ್ನು ಒದಗಿಸಲು ಅನುಕೂಲವಾಗುತ್ತದೆ. ಐದು ಕೇಂದ್ರಗಳಲ್ಲಿರುವ ವಸತಿ ಸಾಮರ್ಥ್ಯ, ಆಯಾ ದಿನ ಆಶ್ರಯ ಪಡೆದಿರುವ ಜನರ ಮಾಹಿತಿಯ ರಿಜಿಸ್ಟರ್ ನಿರ್ವಹಿಸಬೇಕು. ಇದಲ್ಲದೇ ಪ್ರತಿ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಡೇ ನಲ್ಮ್ ಮಾರ್ಗಸೂಚಿ ಪ್ರಕಾರ ಊಟ ನೀಡಬೇಕು ಎಂದು ಅವರು ತಿಳಿಸಿದರು. ವಸತಿರಹಿತರನ್ನು ಕರೆತರಲು ಅನುಕೂಲವಾಗುವಂತೆ ಮಹಾನಗರ ಪಾಲಿಕೆ ಅಥವಾ ಸಿಎಸ್ ಆರ್ ಫಂಡ್ ನಲ್ಲಿ ವಾಹನ ಖರೀದಿಸಬಹುದು ಎಂದು ಹೇಳಿದರು.ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ: ಐದು ಕೇಂದ್ರಗಳ ಪೈಕಿ ಒಂದು ಸ್ವಂತ ಕಟ್ಟಡದಲ್ಲಿರುವುದರಿಂದ ಉಳಿದ ನಾಲ್ಕು ಕೇಂದ್ರಗಳಿಗೆ ಸ್ಥಳ ನಿಗದಿಪಡಿಸಿದರೆ ಡೇ ನಲ್ಮ್ ಅನುದಾನದಲ್ಲಿ ಸ್ವಂತ ಕಟ್ಟಡ ನಿರ್ಮಿಸಬಹುದು ಎಂದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಹೇಳಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಆದಷ್ಟು ಬೇಗನೇ ವಸತಿರಹಿತರ ಆಶ್ರಯ ಕೇಂದ್ರಗಳ ಸ್ವಂತ ಕಟ್ಟಡ ಹೊಂದಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಮಹಾನಗರ ಪಾಲಿಕೆಯ ಉಪ ಆಯುಕ್ತ ಉದಯಕುಮಾರ್ ತಳವಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.