ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಜೂ.18ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಿಡದಿಯ ವಂಡರ್ ಲಾ ರೆಸಾರ್ಟ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಜೂ.18ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಿಡದಿಯ ವಂಡರ್ ಲಾ ರೆಸಾರ್ಟ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.ವಿಧಾನಸಭೆಯಿಂದ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದೂ ಅಭ್ಯರ್ಥಿಗಳನ್ನು ಶತಾಯಗತಾಯ ಗೆಲ್ಲಿಸಿಕೊಳ್ಳಲು ಸಭೆಯಲ್ಲಿ ಕಾಂಗ್ರೆಸ್ ರಣತಂತ್ರ ರೂಪಿಸಲಿದೆ.
ಇದಕ್ಕಾಗಿ ಚುನಾವಣೆ ದಿನಾಂಕವಾದ ಜೂ.18ರವರೆಗೆ ಶಾಸಕರು ರೆಸಾರ್ಟ್‌ನಲ್ಲೇ ಉಳಿದುಕೊಳ್ಳಲಿದ್ದು, ಮತದಾನದ ದಿನ ಶಾಸಕರು ನೇರವಾಗಿ ರೆಸಾರ್ಟ್‌ನಿಂದ ಬಂದು ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ ಎಂದು ತಿಳಿದುಬಂದಿದೆ.ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಆದ ಬಳಿಕ ನಡೆಯುತ್ತಿರುವ ಮೊದಲ ಶಾಸಕಾಂಗ ಪಕ್ಷದ ಸಭೆ ಇದಾಗಿದ್ದು, ಸಂಜೆ 6.30 ಗಂಟೆಗೆ ಸಭೆ ಆರಂಭವಾಗಲಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ 5ನೇ ಅಭ್ಯರ್ಥಿಗೆ ಮತಗಳ ಕೊರತೆಯಿದೆ. ಆದರೂ 5ನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದ್ದು, ಡಿ.ಕೆ. ಶಿವಕುಮಾರ್ ಅವರು ಸಿಎಂ ಆದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಲು ಲೆಕ್ಕಾಚಾರದ ಹೆಜ್ಜೆ ಇಡಲಿದ್ದಾರೆ ಎಂದು ತಿಳಿದುಬಂದಿದೆ.ಐದು ಅಭ್ಯರ್ಥಿಗಳ ಗೆಲುವು?ಪ್ರಸ್ತುತ ವಿಧಾನಸಭೆಯ ಸಂಖ್ಯಾಬಲ 222 ಇದ್ದು, ವಿಧಾನಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವುದರಿಂದ ಪ್ರತಿ ಅಭ್ಯರ್ಥಿ ಗೆಲ್ಲಲು 28 ಶಾಸಕರ ಮತಗಳು ಅಗತ್ಯ.
ಪ್ರಸ್ತುತ ಕಾಂಗ್ರೆಸ್ ಬಳಿ ವಿಧಾನಸಭೆ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮತ ಸೇರಿದಂತೆ 135 ಮತಗಳು ಇವೆ. ಜತೆಗೆ ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್, ಕೆ.ಎಚ್. ಪುಟ್ಟಸ್ವಾಮಿಗೌಡ ಅವರ ಬೆಂಬಲ ಸೇರಿ 138 ಮತಗಳು ಇವೆ.ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿರುವ 5 ಅಭ್ಯರ್ಥಿಗಳೂ ಗೆಲ್ಲಬೇಕಾದರೆ 140 ಮತ ಬೇಕು. ಕಾಂಗ್ರೆಸ್ ಬಳಿ ಪ್ರಸ್ತುತ ಇರುವ 138 ಸ್ಥಾನಗಳ ಜತೆಗೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್ ಕಾಂಗ್ರೆಸ್‌ಗೆ ಮತ ಹಾಕುವ ಸಾಧ್ಯತೆಯಿದೆ. ಹೀಗಾದರೆ, ಕಾಂಗ್ರೆಸ್‌ನ 5ನೇ ಅಭ್ಯರ್ಥಿಯೂ ನಿರಾಯಾಸವಾಗಿ ಗೆಲುವು ಸಾಧಿಸಬಹುದು.ಆದರೆ, ಪರಿಷತ್‌ಗೆ ಗೌಪ್ಯ ಮತದಾನ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮೊದಲ ನಾಲ್ಕು ಅಭ್ಯರ್ಥಿಗಳಿಗೆ ಪ್ರತಿ ಅಭ್ಯರ್ಥಿಗೆ 28 ಮತಗಳ ಜತೆಗೆ ಹೆಚ್ಚುವರಿಯಾಗಿ ಒಂದು ಮತ ಹಾಕಿಸಲುದ್ದೇಶಿಸಲಾಗಿದೆ. ಉಳಿದ ಮತಗಳ ಜತೆಗೆ ಎರಡನೇ ಪ್ರಾಶಸ್ತ್ಯ ಮತಗಳನ್ನು 5ನೇ ಅಭ್ಯರ್ಥಿಗೆ ಚಲಾವಣೆ ಮಾಡಿ ಐದೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಉದ್ದೇಶದಲ್ಲಿ ಕಾಂಗ್ರೆಸ್ ಇದೆ ಎಂದು ಮೂಲಗಳು ತಿಳಿಸಿವೆ.ಯಾರ ಮತ ಯಾರಿಗೆ? ರೆಸಾರ್ಟ್‌ನಲ್ಲಿ ನಿರ್ದೇಶನ
ಗೆಲುವಿನ ಲೆಕ್ಕಾಚಾರ ಪಕ್ಕಾ ಮಾಡಿಕೊಳ್ಳಲು ರೆಸಾರ್ಟ್‌ನಲ್ಲಿ ಚರ್ಚೆ ನಡೆಯಲಿದೆ.ಇದಕ್ಕಾಗಿ ಐದು ಅಭ್ಯರ್ಥಿಗಳ ಪರವಾಗಿಯೂ ಪ್ರತ್ಯೇಕವಾಗಿ ಏಜೆಂಟ್ ನೇಮಕ ಮಾಡಿ ಯಾವ ಶಾಸಕರು ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂಬ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗುತ್ತದೆ. ಜತೆಗೆ ಯಾವ ಅಭ್ಯರ್ಥಿಗೆ ಎಷ್ಟು ಹೆಚ್ಚುವರಿ ಮತ ಹಾಕಬೇಕು? ಆ ಮತ ಯಾರದ್ದಾಗಿರಬೇಕು ಎಂಬ ಬಗ್ಗೆ ನಿರ್ದೇಶನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.