ಬೆಳುವಾಯಿ ಕೆಸರ್ ಗದ್ದೆಯಲ್ಲಿರುವ ಸ್ಪೂರ್ತಿ ವಿಶೇಷ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದಲ್ಲಿ ಶನಿವಾರ ಕಲಾ ಸಂಭ್ರಮ- 2025 ಕಾರ್ಯಕ್ರಮ ಜರುಗಿತು.

ಮೂಡುಬಿದಿರೆ: ವಿಶೇಷ ಸಾಮರ್ಥ್ಯದ ಮಕ್ಕಳಲ್ಲಿ ಪ್ರತಿಭೆಗಳಿವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡವರಿದ್ದಾರೆ. ಆದ್ದರಿಂದ ಹೆತ್ತವರು ದೃತಿಗೆಡದೆ ಈ ಮಕ್ಕಳನ್ನು ಸಮರ್ಥವಾಗಿ ಬೆಳೆಸಬೇಕು. ಸ್ಪೂರ್ತಿಯಂತಹ ಸಂಸ್ಥೆಗಳು ವಿಶೇಷ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ಕ್ರೀಡೆ, ಆರೋಗ್ಯ, ತರಬೇತಿಗಳನ್ನು ನೀಡುವ ಮೂಲಕ ಸಮಾಜದ ಮುಂದೆ ತರುವಂತಹ ಕೆಲಸಗಳನ್ನು ಮಾಡುತ್ತಿರುವುದನ್ನು ನಾವು ಪ್ರೋತ್ಸಾಹಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಬೆಳುವಾಯಿ ಕೆಸರ್ ಗದ್ದೆಯಲ್ಲಿರುವ ಸ್ಪೂರ್ತಿ ವಿಶೇಷ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದಲ್ಲಿ ಶನಿವಾರ ಜರುಗಿದ ಕಲಾ ಸಂಭ್ರಮ- 2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಶೇಷ ಮಕ್ಕಳಿಗಾಗಿ ವಿಶಿಷ್ಟ ಯೋಜನೆಗಳನ್ನು ರೂಪಿಸುತ್ತಿರುವ ಸ್ಫೂರ್ತಿ ಶಾಲೆಯ ಅಭಿವೃದ್ಧಿ ಕಾರ್ಯದಲ್ಲಿ ಸರಕಾರದ ವತಿಯಿಂದ ಸಾಧ್ಯವಿರುವ ಎಲ್ಲ ಪ್ರೋತ್ಸಾಹ ನೀಡಲಾಗುವುದು ಎಂದರು. ಸ್ಫೂರ್ತಿರತ್ನ ಪ್ರಶಸ್ತಿ: ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಅವರಿಗೆ ಸ್ಫೂರ್ತಿರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರ್ಜುನ್ ಭಂಡಾರ್ ಕರ್ ಅವರನ್ನು ದಂಪತಿ ಸಹಿತ ಸನ್ಮಾನಿಸಲಾಯಿತು. ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಶಯನ್, ಸಹಳಾ ಮತ್ತು ರಂಜಿತ್ ಪ್ರಸಾದ್ , ವಿದ್ಯಾವರ್ಧಕ ಸಂಘದ ಹಿರಿಯರಾದ ವಸಂತ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲತಾ ಸುರೇಶ್ ಹಾಗೂ ಕಲೆ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಶಾಲೆಯ ಶಿಕ್ಷಕಿ ಸುಚಿತ್ರಾ ಅವರನ್ನು ಗೌರವಿಸಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಧನಂಜಯ ಮೂಡುಬಿದಿರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಗ್ರಾಮೀಣ ಪತ್ರಕರ್ತರಿಗೂ ಪ್ರಾತಿನಿಧ್ಯವಿರಬೇಕು. ರಾಜ್ಯೋತ್ಸವ ಪ್ರಶಸ್ತಿಯ ಗೌರವದ ಶೇ. 10ರಷ್ಟಾದರೂ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ದೊರೆಯುವಂತಾಗಬೇಕು ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಿ ಅಮರಶ್ರೀ ಶೆಟ್ಟಿ, ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಲೀಲಾಧರ ಬಿ. ಶೆಟ್ಟಿಗಾರ್, ಉದ್ಯಮಿಗಳಾದ ಅಬ್ದುಲ್ಲ ಪುತ್ತಿಗೆ, ಸಿ.ಎಚ್. ಅಬ್ದುಲ್ ಗಪೂರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಂಡಿಗ ರತ್ನಾಕರ ಶೆಟ್ಟಿ, ಸಂಚಾಲಕ ರಾಜೇಶ್ ಸುವರ್ಣ, ಹೆಲ್ಪಿಂಗ್ ಇಸ್ರೇಲ್ ತಂಡದ ಸುನಿಲ್ ಮೆಂಡೋನ್ಸಾ ಮತ್ತಿತರರು ಉಪಸ್ಥಿತರಿದ್ದರು.

ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್ ವರದಿ ವಾಚಿಸಿದರು. ಸಂಸ್ಥೆಯ ಪ್ರಮುಖರಾದ ಉಷಾಲತಾ ಸಹಕರಿಸಿದರು. ಸುಚಿತ್ರ ಪೂಜಾರಿ ಸನ್ಮಾನಿತರ ಪತ್ರ ವಾಚಿಸಿ ವಂದಿಸಿದರು.