ಜಿ.ಶಂಕರ್ ಕಾಲೇಜಲ್ಲಿ ‘ಕಲಾ ಸಿರಿ’ ಪ್ರಾಯೋಗಿಕ ಮಾದರಿ ಪ್ರದರ್ಶನ

| Published : Apr 14 2024, 01:47 AM IST

ಜಿ.ಶಂಕರ್ ಕಾಲೇಜಲ್ಲಿ ‘ಕಲಾ ಸಿರಿ’ ಪ್ರಾಯೋಗಿಕ ಮಾದರಿ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜರಕಾಡಿನ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಐಕ್ಯೂಎಸಿ ಮತ್ತು ಮಾನವಿಕ ಸಂಘದ ಸಹಯೋಗದಲ್ಲಿ ಕಲಾ ಸಿರಿ - ೨೦೨೪ ಅಂತರ್ ವಿಭಾಗೀಯ ಮಟ್ಟದ ಪ್ರಾಯೋಗಿಕ ಮಾದರಿಗಳ ಪ್ರದರ್ಶನ ನಡೆಯಿತು. ಉದ್ಯಮಿ ಮತ್ತು ಪೇಪರ್ ಕೊಲಾಜ್ ಕಲಾವಿದ ಪ್ರಭಾಕರ ಕಿಣಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರಾಯೋಗಿಕ ಮಾದರಿಗಳು ಕೇವಲ ವಿಜ್ಞಾನ, ಗಣಕಯಂತ್ರ ಮತ್ತು ವಾಣಿಜ್ಯ ವಿಭಾಗಗಳಿಗೆ ಮಾತ್ರ ಸೀಮಿತವಾಗಿರದೆ, ಕಲಾ ಮತ್ತು ಭಾಷಾ ವಿಷಯಗಳಿಗೂ ಸಂಬಂಧಿಸಿದೆ. ಇಲ್ಲಿ ಸಮಾಜದಿಂದ ಪಡೆದುಕೊಳ್ಳುವ ಅನುಭವಗಳೇ ಪ್ರಾಯೋಗಿಕ ಮಾದರಿಗಳಾಗುತ್ತವೆ ಎಂದು ಉದ್ಯಮಿ ಮತ್ತು ಪೇಪರ್ ಕೊಲಾಜ್ ಕಲಾವಿದ ಪ್ರಭಾಕರ ಕಿಣಿ ಅಭಿಪ್ರಾಯಪಟ್ಟರು.

ಅವರು ನಗರದ ಅಜ್ಜರಕಾಡಿನ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಐಕ್ಯೂಎಸಿ ಮತ್ತು ಮಾನವಿಕ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ಕಲಾ ಸಿರಿ - ೨೦೨೪ ಅಂತರ್ ವಿಭಾಗೀಯ ಮಟ್ಟದ ಪ್ರಾಯೋಗಿಕ ಮಾದರಿಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವಿಕ ವಿಷಯಗಳನ್ನು ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿನ ಕೌಶಲ್ಯ, ಸೃಜನಶೀಲತೆ, ಪಾಲ್ಗೊಳುವಿಕೆ ಮತ್ತು ಅವರಿಗೊಂದು ವೇದಿಕೆಯನ್ನು ಕಲ್ಪಸಿಕೊಡಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಎಸ್. ಶೆಟ್ಟಿ ವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಸೋಜನ್ ಕೆ.ಜಿ., ಕಲಾನಿಕಾಯದ ಡೀನ್ ಪ್ರೊ. ನಿಕೇತನ, ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಡಾ. ವಾಣಿ ಆರ್. ಬಲ್ಲಾಳ್ ಉಪಸ್ಥಿತರಿದ್ದರು.

ಮಾನವಿಕ ಸಂಘದ ಸಂಚಾಲಕ ಡಾ. ಗುರುರಾಜ್ ಪ್ರಭು ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಅಥಿತಿಗಳನ್ನು ಸ್ವಾಗತಿಸಿದರು, ಚೈತ್ರಾ ಕೆ.ಸಿ. ಕಾರ್ಯಕ್ರಮವನ್ನು ನಿರೂಪಿಸಿ, ಗಾನವಿ ವಂದಿಸಿದರು.