ಫುಟ್‌ಪಾತ್‌ ಅತಿಕ್ರಮಣ ಮಾಡದಂತೆ ಎಚ್ಚರಿಕೆ

| Published : Jan 03 2025, 12:32 AM IST

ಸಾರಾಂಶ

ಪಾದಚಾರಿ ಮಾರ್ಗಗಳನ್ನು ಸಂಪೂರ್ಣವಾಗಿ ಅಕ್ರಮಿಸಿಕೊಂಡಿರುವುದಲ್ಲದೆ ವಾಹನಗಳಲ್ಲಿ ತಿಂಡಿ ಪದಾರ್ಥಗಳನ್ನು ಇಟ್ಟುಕೊಂಡು ಸಂಪೂರ್ಣವಾಗಿ ಪಾದಚಾರಿ ರಸ್ತೆ ಹೋಟೆಲ್ ವ್ಯಾಪಾರಿಗಳು ವಹಿವಾಟು ಮಾಡುತ್ತಿರುವುದರಿಂದ ಪಾದಚಾರಿಗಳು ಒಂದೆಡೆ ನಡು ರಸ್ತೆಯಲ್ಲೇ ಒಡಾಟ ಮಾಡಬೇಕಾದ ಅನಿವಾರ್ಯ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹೋಟೆಲ್ ಗಳಾಗಿ ಮಾರ್ಪಟ್ಟ ಫುಟ್‌ಪಾತ್ ಶಿರ್ಷಿಕೆಯಡಿ ಡಿಸೆಂಬರ್ 30 ರಂದು ‘ಕನ್ನಡಪ್ರಭ್ರ’ ಪ್ರಕಟಿಸಿದ ಸುದ್ದಿಗೆ ಎಚ್ಚೆತ್ತ ಚಿಕ್ಕಬಳ್ಳಾಪುರ ನಗರಸಭೆಯು ಗುರುವಾರ ಅಧ್ಯಕ್ಷ, ಉಪಾಧ್ಯಕ್ಷ , ನಗರಸಭೆ ಸದಸ್ಯ,ಅಧಿಕಾರಿಗಳು ರಸ್ತೆಬದಿ ವ್ಯಾಪಾರಸ್ಥರ ಸಭೆ ಕರೆದು ಪಾದಚಾರಿಗಳ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಫುಟ್‌ಪಾತ್ ಬಿಟ್ಟು ವ್ಯಾಪಾರ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದರು.

ಈವೇಳೆ ನಗರಸಭಾಧ್ಯಕ್ಷ ಎ.ಗಜೇಂದ್ರ ಮಾತನಾಡಿ, ನಗರದ ಬಿಬಿ ರಸ್ತೆಯ ಪಾದಚಾರಿಗಳ ರಸ್ತೆಯನ್ನು ವ್ಯಾಪಾರಸ್ಥರು ತಳ್ಳುಗಾಡಿಗಳಲ್ಲಿ ತಿಂಡಿ ಇಟ್ಟುಕೊಂಡು ಒತ್ತುವರಿ ಮಾಡಿಕೊಂಡಿರುವುದರಿಂದ ಜನತೆ ರಸ್ತೆಯಲ್ಲಿ ಸಂಚರಿಸುವಂತಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಬೆಸ್ಕಾಂ ನಿಂದ ರೈಲ್ವೆ ನಿಲ್ದಾಣ ರಸ್ತೆವರೆಗಿನ ಎರಡು ಬದಿಯಲ್ಲಿ ದಿನ ಬೆಳಗಾದರೆ ಸಾವಿರಾರು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಂಚಾರ ಮಾಡುವುದರ ಜತೆಗೆ ವಾಹನ ದಟ್ಟಣೆ ಹೆಚ್ಚಾಗುತ್ತಲೇ ಇರುತ್ತದೆ ಎಂದರು.

ಜನರಿಗೆ, ವಾಹನ ಸಂಚಾರಕ್ಕೆ ಅಡ್ಡಿ

ಈ ಭಾಗದಲ್ಲಿನ ಪಾದಚಾರಿ ಮಾರ್ಗಗಳನ್ನು ಸಂಪೂರ್ಣವಾಗಿ ಅಕ್ರಮಿಸಿಕೊಂಡಿರುವುದಲ್ಲದೆ ವಾಹನಗಳಲ್ಲಿ ತಿಂಡಿ ಪದಾರ್ಥಗಳನ್ನು ಇಟ್ಟುಕೊಂಡು ಸಂಪೂರ್ಣವಾಗಿ ಪಾದಚಾರಿ ರಸ್ತೆ ಹೋಟೆಲ್ ವ್ಯಾಪಾರಿಗಳು ವಹಿವಾಟು ಮಾಡುತ್ತಿರುವುದರಿಂದ ಪಾದಚಾರಿಗಳು ಒಂದೆಡೆ ನಡು ರಸ್ತೆಯಲ್ಲೇ ಒಡಾಟ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಎಲ್ಲರೂ ಹೊಟ್ಟೆ ಪಾಡಿಗಾಗಿ(ಜೀವನ ನಿರ್ವಹಣೆ) ಪುಟ್ ಪಾತ್ ನಲ್ಲಿ ವ್ಯಾಪಾರ ಮಾಡುತ್ತಿರುವುದು. ನಿಮಗೆ ನಾವು ಯಾವುದೇ ತೊಂದರೆ ನೀಡುತ್ತಿಲ್ಲ ಎಂದರು.

ನೀವು ನಿಮ್ಮ ವ್ಯಾಪಾರ ಸ್ಥಳದಲ್ಲಿ ಯಾವುದೇ ರೀತಿಯ ಫುಟ್‌ಪಾತ್ ಆಕ್ರಮಿಸಿಕೊಳ್ಳಬಾರದು ಮತ್ತು ನಿಮ್ಮ ಬಳಿ ಬರುವ ಗ್ರಾಹಕರು ಅಥವಾ ಬೇರೆಯಾರಾದರೂ ಪಾರ್ಕಿಂಗ್ ಸ್ಥಳ ಬಿಟ್ಟು ಎರಡನೇ ಲೇನ್ ಅಥವಾ ಪುಟ್ ಪಾತ್ ಮೇಲೆ ವಾಹನ ಪಾರ್ಕಿಂಗ್ ಮಾಡದಂತೆ ನೋಡಿಕೊಳ್ಳಬೇಕು. ಹಾಗೇನಾದರೂ ಮಾಡದೆ ಸಂಚಾರಕ್ಕೆ ಅಡಚಣೆಯಾದಲ್ಲಿ ನಿಮ್ಮ ಮೇಲೆ ಕಾನೂನು ರಿತ್ಯಾ ಕ್ರಮಕ್ಕೆ ಪೋಲಿಸರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಫುಡ್‌ ಸ್ಟ್ರೀಟ್‌ ನಿರ್ಮಾಣಕ್ಕೆ ಚಿಂತನೆ

ಉಪಾಧ್ಯಕ್ಷ ಜೆ.ನಾಗರಾಜ್ ಮಾತನಾಡಿ, ನಗರದಲ್ಲಿ ಫುಡ್ ಸ್ಟ್ರೀಟ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ. ನೀವು ನಿಮ್ಮ ವ್ಯಾಪಾರ ಸ್ಥಳದಲ್ಲಿ ಶುಚಿತ್ವ ಕಾಪಾಡಿಕೊಂಡು , ಗ್ರಾಹಕರಿಗೆ ಉತ್ತಮ ಗುಣ ಮಟ್ಟದ ಆಹಾರವನ್ನು ಸಾಮಾನ್ಯ ದರದಲ್ಲಿ ನೀಡ ಬೇಕು. ನಿಮ್ಮ ಹೋಟೆಲ್ ನಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳ ಬೇಕು. ಸಾರ್ವಜನಿಕರಿಂದ ದೂರುಗಳೇನಾದರೂ ಬಂದಲ್ಲಿ ನಿಮ್ಮ ವಿರುದ್ದ ಕ್ರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಆಹಾರ ಸಂರಕ್ಷಣಾಧಿಕಾರಿ ಜಿ.ಹರೀಶ್ ಮಾತನಾಡಿ, ಆಹಾರ ತಯಾರಿಸಿ ಮಾರಾಟ ಮಾಡುವ ಪ್ರತಿ ವ್ಯಾಪಾರಿಯೂ ಕಾನೂನು ಬದ್ದವಾಗಿ ಲೈಸೆನ್ಸ್ ಪಡೆಯಬೇಕು.ಅದಕ್ಕೆ ತಾವೇ ಆನ್ ಲೈನ್ ನಲ್ಲಿ ನೂರು ರೂಪಾಯಿಗಳನ್ನು ಪಾವತಿಸಿ ಚಲನ್ ಪಡೆದು ನಮ್ಮ ಕಚೇರಿಗೆ ನಿಮ್ಮ ಆದಾರ್ ಕಾರ್ಡ್ ಸಲ್ಲಿಸಿದಲ್ಲಿ ಲೈಸೆನ್ಸ್ ನೀಡಲಾಗುವುದು. ಎಫ್ ಎಫ್ಐಸಿ ನಿಯಮದಂತೆ ಆಹಾರ ವಸ್ತುಗಳನ್ನು ಬಳಸಬೇಕು. ಎಚ್ಚರಿಕೆಯಿಂದ ಗ್ರಾಹಕರ ಆರೋಗ್ಯ ಕಾಪಾಡ ಬೇಕೆಂದು ತಿಳಿಸಿದರು.

ರಾತ್ರಿ 11 ಗಂಟೆ ವರೆಗೆ ಅ‍ವಕಾಶ

ಇದೇ ವೇಳೆ ಸಂಚಾರಿ ಮತ್ತು ನಗರಠಾಣಾ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಗಳು ಮಾತನಾಡಿ,ರಾತ್ರಿ 11ರವರೆಗೆ ಮಾತ್ರ ನಿಮಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು, ನಿಮ್ಮಿಂದ ಪಾದಾಚಾರಿಗಳಿಗೆ,ವಾಹನ ಸಂಚಾರಕ್ಕೆ ತೊಂದರೆಯಾದಲ್ಲಿ ನೀವು ಶಿಕ್ಷಗೆ ಒಳಬೇಕಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಪೌರಾಯುಕ್ತ ಮನ್ಸೂರ್ ಆಲಿ, ನಗರಸಭಾಸದಸ್ಯರಾದ ಕಣಿತಹಳ್ಳಿ ವೆಂಕಟೇಶ್,ದೀಪಕ್, ರಸ್ತೆಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಸ್ಲಾಂ ಪಾಶ,ನಗರಸಭೆ ಪರಿಸರ ಅಭಿಯಂತರ ಉಮಾಶಂಕರ್, ನಗರಸಭೆ ಅಧಿಕಾರಿಗಳು,ಬಿಬಿ ರಸ್ತೆ ಬೀದಿ ಬದಿ ವ್ಯಾಪಾರಿಗಳು ಮತ್ತಿತರರು ಇದ್ದರು.