‘ದಲಿತರ ಮೇಲೆ ಬೆಳಕು ಚೆಲ್ಲಿದ ಮೊದಲ ಸಾಹಿತಿ ಕಾರಂತರು’

| Published : Oct 12 2025, 01:02 AM IST

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಎಂಜಿಎಂ ಕಾಲೇಜಿನಲ್ಲಿಕಾರಂತ ಜನ್ಮ ದಿನಾಚರಣೆ ನಡೆಯಿತು.

ಡಾ. ಶಿವರಾಮ ಕಾರಂತ ಟ್ರಸ್ಟಿನ ಪ್ರಥಮ ಪ್ರಶಸ್ತಿ ಸ್ವೀಕರಿಸಿದ ಪ್ರೊ. ಬಿ.ಎ. ವಿವೇಕ ರೈ

ಕನ್ನಡಪ್ರಭ ವಾರ್ತೆ ಉಡುಪಿಈ ನೆಲದ ದಲಿತರ ಬದುಕು, ಬವಣೆಗಳ ಮೇಲೆ ತಮ್ಮ ಸಾಹಿತ್ಯದ ಮೂಲಕ ಬೆಳಕು ಚೆಲ್ಲಿದ ಕನ್ನಡದ ಮೊದಲ ಕಾದಂಬರಿಕಾರ ಡಾ.ಕೋಟ ಶಿವರಾಮ ಕಾರಂತ ಎಂದು ವಿಶ್ರಾಂತ ಉಪ‌ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.ಅವರು ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಇಲ್ಲಿನ ಎಂಜಿಎಂ ಕಾಲೇಜಿನಲ್ಲಿಕಾರಂತ ಜನ್ಮ ದಿನಾಚರಣೆ ಅಂಗವಾಗಿ ನೀಡಲಾದ ಚೊಚ್ಚಲ ಡಾ.ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿ‌ ಮಾತನಾಡಿದರು.ಕಾರಂತರು 40ರ ದಶಕದಲ್ಲಿ ದಲಿತ ಕೇರಿಗಳ ಮನೆ‌ಮನೆಗಳಿಗೆ ಸ್ವತಃ ಹೋಗಿ ಅವರ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿದ್ದರು. ಅದರ ಫಲವಾಗಿಯೇ ದಲಿತರ ಬದುಕಿನ ದುರಂತವನ್ನೇ ಅವರು ತಮ್ಮ ‘ಚೋಮನ ದುಡಿ’ ಕಾದಂಬರಿಯಲ್ಲಿ ಹೇಳಿದ್ದಾರೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರಂತರದು ಶತಮಾನಕ್ಕೆ ಸಾಕ್ಷಿಯಾಗಿ ನಿಲ್ಲುವ ವ್ಯಕ್ತಿತ್ವ. ಅವರಲ್ಲಿ ಪರಿಸರ ಪ್ರೇಮ, ಸಾಹಿತ್ಯ ಕೃಷಿ, ಯಕ್ಷಗಾನ ಕಲೆಯ ಅಭಿರುಚಿ, ಗಟ್ಟಿ ಧ್ವನಿಯ ಮೂಲಕ ಎಚ್ಚರಿಸುವ ಗಡಸುತನವಿದ್ದುದರಿಂದಲೇ ಅವರು ವೈಶಿಷ್ಟ್ಯರಾಗಿದ್ದಾರೆ. ಟೀಕೆಗಳಿಗೆ ಕುಗ್ಗದೆ, ಪ್ರಶಂಸೆಗಳಿಗೆ ಹಿಗ್ಗದೇ ತನ್ನತನವನ್ನೇ ನೆಚ್ಚಿಕೊಂಡಿದ್ದರಿಂದಲೇ ಅವರು ಶ್ರೇಷ್ಟರಾಗಿದ್ದರೆ ಎಂದರು.ಈ ಸಂದರ್ಭ ಲೇಖಕಿ ಡಾ.ರೇಖಾ ಬನ್ನಾಡಿ, ಜನಪದ ವಿದ್ವಾಂಸ ಪ್ರೊ.ಎಸ್.ಎ.ಕೃಷ್ಣಯ್ಯ ಹಾಗೂ ಯಕ್ಷಗಾನ‌ ಕಲಾವಿದ ಶೇಖ್ ಮಹಮ್ಮದ್ ಗೌಸ್ ಅವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು.ವಿಮರ್ಶಕ ಡಾ.ಎಸ್‌. ಆರ್.ವಿಜಯ ಶಂಕರ್ ವಿಶೇಷ ಉಪನ್ಯಾಸ ನೀಡಿದರು. ಕ.ಅ. ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಉಡುಪಿ ನ.ಅ.ಪ್ರಾ. ಅಧ್ಯಕ್ಷ ದಿನಕರ ಹೇರೂರು, ಮಂಗಳೂರು ವಿವಿ ಕಾರಂತ ಅಧ್ಯಯನ ಪೀಠದ ಪ್ರೊ.ನಾಗಪ್ಪ ಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಗ್ಯಾ.ಅ. ಸಮಿತಿ ಅಧ್ಯಕ್ಷ ರಮೇಶ ಕಾಂಚನ್, ಕಾರಂತ ಟ್ರಸ್ಟ್ ಸದಸ್ಯರಾದ ಸತೀಶ್ ಕೊಡವೂರು, ಸಂತೋಷ ನಾಯಕ್ ಪಟ್ಲ, ಬಿ.ಎಂ.ಶರೀಫ್ ಹೂಡೆ, ಡಾ.ಭಾರತಿ ಮರವಂತೆ, ಮಂಚಿ ರಮೇಶ್ ಮೊದಲಾದವರಿದ್ದರು. ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಪ್ರಸ್ತಾವನೆಗೈದರು. ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು.ಬಳಿಕ ನಿರ್ದಿಗಂತ ತಂಡದ ಪ್ರಸ್ತುತಿಯಲ್ಲಿ ಕಾರಂತರ ಕಾದಂಬರಿ ಆಧರಿತ ‘ಮೈಮನಗಳ ಸುಳಿಯಲ್ಲಿ’ ನಾಟಕ ಪ್ರದರ್ಶನಗೊಂಡಿತು.