ಕಾರ್ಕಳ ಹೆಬ್ರಿ ವ್ಯಾಪ್ತಿಯಲ್ಲಿರುವ ಸುಮಾರು 40ಕ್ಕೂ ಹೆಚ್ಚು ವರ್ಷಗಳ ಹಳೆಯ ಎಂಟು ಪ್ರಮುಖ ಸೇತುವೆಗಳ ದುರಸ್ತಿ ಹಾಗೂ ಬಲಪಡಿಸುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು 6 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.
ರಾಂ ಅಜೆಕಾರು ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಹೆಬ್ರಿ ವ್ಯಾಪ್ತಿಯಲ್ಲಿರುವ ಸುಮಾರು 40ಕ್ಕೂ ಹೆಚ್ಚು ವರ್ಷಗಳ ಹಳೆಯ ಎಂಟು ಪ್ರಮುಖ ಸೇತುವೆಗಳ ದುರಸ್ತಿ ಹಾಗೂ ಬಲಪಡಿಸುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು 6 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.ತಾಲೂಕಿನ ಹಲವಾರು ಪ್ರಮುಖ ಸೇತುವೆಗಳು ನಲವತ್ತಕ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು, ಕಾಲಕ್ರಮೇಣ ಅವುಗಳ ಸ್ಥಿತಿ ಹದಗೆಟ್ಟಿವೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಭಾಗದಲ್ಲಿರುವ ಕಲ್ಕಾರ್ ಸೇತುವೆ ಸೇರಿದಂತೆ ಕೆರುವಾಶೆ ಮುಡಾರು ರಸ್ತೆ ಸೇತುವೆ, ಹೆಬ್ರಿ ಕುಚ್ಚೂರು ನಡುವೆ ಸೀತನದಿ ಮೇಲೆ ನಿರ್ಮಿತ ಸೇತುವೆ ಹಾಗೂ ನಾರಾವಿ ಮಾಪಲ ಸೇತುವೆಗಳು ಪ್ರಮುಖವಾಗಿ ದುರಸ್ತಿಗೆ ಒಳಪಡಲಿವೆ.
ಈ ಸೇತುವೆಗಳ ಕೆಳ ಭಾಗದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಕೆಲವು ಆಧಾರಸ್ತಂಭಗಳ ಭಾಗಗಳು ಹಾನಿಗೊಳಗಾಗಿರುವುದು ಆತಂಕಕ್ಕೆ ಕಾರಣವಾಗಿತ್ತು.ಕರಾವಳಿ ಭಾಗಗಳಲ್ಲಿ ಭಾರಿ ವರ್ಷಧಾರೆ ಪರಿಣಾಮ ಹಾಗೂ ವಾಹನ ಸಂಚಾರದ ಏರಿಕೆಯಿಂದ ಸೇತುವೆಗಳ ಮೇಲೆ ಒತ್ತಡ ಹೆಚ್ಚಾಗಿದೆ. ಇದರಿಂದ ಸೇತುವೆಗಳ ಬಲ ಕುಂದುವ ಸಾಧ್ಯತೆ ಎದುರಾಗಿದ್ದು, ಸಾರ್ವಜನಿಕರ ಸಂಚಾರಕ್ಕೂ ಅಪಾಯ ಎದುರಿಸುತ್ತಿತ್ತು. ಈ ಹಿನ್ನೆಲೆ ಸರ್ಕಾರ ತುರ್ತು ಕ್ರಮವಾಗಿ ಅನುದಾನ ಬಿಡುಗಡೆ ಮಾಡಿದ್ದು, ಸೇತುವೆಗಳ ಬಲಪಡಿಸುವುದು, ಹಾನಿಗೊಳಗಾದ ಭಾಗಗಳ ಮರುನಿರ್ಮಾಣ, ಮೇಲ್ಮೈ ಸುಧಾರಣೆ ಹಾಗೂ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ತಾಂತ್ರಿಕ ತಜ್ಞರ ವರದಿ ಆಧಾರದ ಮೇಲೆ ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಕಾರ್ಕಳ ಹೆಬ್ರಿ ತಾಲೂಕುಗಳ ಒಟ್ಟು 8 ಸೇತುವೆಗಳ ದುರಸ್ತಿ ಹಾಗೂ ಬಲಪಡಿಸುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು 6 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. -ಸೋಮಶೇಖರ್, ಲೋಕೋಪಯೋಗಿ ಇಲಾಖೆ ಕಾರ್ಕಳ ತಾಲೂಕು ಮುಖ್ಯ ಅಭಿಯಂತರರು