ಸಾರಾಂಶ
ಸಂಘದ ಅಧ್ಯಕ್ಷ ಮಹಾಂತರೆಡ್ಡಿ ಮಾಹಿತಿ । ಪ್ರಭಾತ್ ಕಲಾವಿದರಿಂದ ಸಾಂಸ್ಕೃತಿಕ ಸಂಜೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಳೆದ ಒಂದು ದಶಕದಿಂದ ಚಿತ್ರದುರ್ಗ ನೆಲದಲ್ಲಿ ಸಾಂಸ್ಕೃತಿಕ ಚಟುವಟಿಕೆ ಸ್ಥಗಿತಗೊಳಿಸಿದ್ದ ಪ್ರತಿಷ್ಠಿತ ದುರ್ಗದ ಸಿರಿ ಕಲಾ ಸಂಘ ಇದೀಗ ಮತ್ತೆ ಮರು ಎಂಟ್ರಿ ನೀಡಿದ್ದು ಮಾರ್ಚ್ 23ರಂದು ಕರುನಾಡು ವೈಭವ ಕಾರ್ಯಕ್ರಮ ಸಾದರ ಪಡಿಸಲು ಮುಂದಾಗಿದೆ. ಖ್ಯಾತ ಪ್ರಭಾತ್ ಕಲಾವಿದರು ಧರ್ಮಭೂಮಿ ನೃತ್ಯ ರೂಪಕ ನಡೆಸಿಕೊಡುವರು.ಕರುನಾಡ ವೈಭವಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಧ್ಯಕ್ಷ ಮಹಾಂತರೆಡ್ಡಿ, ಮಾ.23ರ ಸಂಜೆ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಕರುನಾಡ ವೈಭವ ತೆರೆದುಕೊಳ್ಳಲಿದೆ. 10 ಸಾವಿರ ಮಂದಿ ಸಾಂಸ್ಕೃತಿಕ ಪ್ರೇಮಿಗಳಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕುರುನಾಡ ವೈಭವದ ಜೊತೆಗೆ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ದುರ್ಗದ ಸಿರಿ ಕಲಾ ಸಂಘದಿಂದ 2004ರಲ್ಲಿ ಗಾಯಕ ಪಿ.ಬಿ.ಶ್ರೀನಿವಾಸ್‍ರನ್ನು ಕರೆಸಿದ್ದೆವು. ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಣ್ಯಂರವರನ್ನು ಇಲ್ಲಿಗೆ ಕರೆಸಲು ತಯಾರಿ ನಡೆಸಿದ್ದೆವು ಬರಲು ಅವರು ಕೂಡ ಒಪ್ಪಿಗೆ ನೀಡಿದ್ದರು. ಬರಲು ಆಗಲಿಲ್ಲ. 2007ರಲ್ಲಿ ಎಲ್.ಆರ್.ಈಶ್ವರಿಯನ್ನು ಕರೆಸಿ ಚಿತ್ರದುರ್ಗದ ಜನತೆಗೆ ಮನರಂಜನೆಯನ್ನು ನೀಡಿದ್ದೆವು. ಜಾನಪದ ಗಾಯಕ ಸಿ.ಅಶ್ವಥ್‍ರವರು ಕೂಡ ಬಂದು ಹೋಗಿದ್ದರು ಎಂದು ವಿವರಿಸಿದರು.ಈ ಬಾರಿ ಕಾರ್ಯಕ್ರಮಕ್ಕೆ ಸಂಭ್ರಮ ಹಾಗೂ ಕಾಳಜಿಯ ಸ್ಪರ್ಶ ನೀಡಲು ಉದ್ದೇಸಿಸಿ ಕಲಾವಿದರ ಗೌರವಿಸುವ ಕೆಲಸ ಕೂಡಾ ಮಾಡಲಾಗುತ್ತಿದೆ. ಜಿಲ್ಲೆಯ ಪ್ರತಿ ತಾಲೂಕಿನಿಂದ ಒಬ್ಬೊಬ್ಬ ಕಲಾವಿದರನ್ನು ಗುರುತಿಸಿ ಸನ್ಮಾನಿಸಿ ನಗದು ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.ಚಿತ್ರದುರ್ಗಕ್ಕೂ ನಟ ವಿಷ್ಟುವರ್ಧನ್ ಅವರಿಗೂ ನಂಟಿದೆ. ಅವರ ಮೊದಲ ಚಿತ್ರ ನಾಗರಹಾವು ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆದಿತ್ತು. ಹಾಗಾಗಿ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ನಟ ದೊಡ್ಡಣ್ಣ ಕಲಾವಿದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಮೈಸೂರು ಮಹಾರಾಜರನ್ನು ಆಹ್ವಾನಿಸಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಕೆ.ಸಿ.ವೀರೇಂದ್ರಪಪ್ಪಿ, ಟಿ.ರಘುಮೂರ್ತಿ, ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ರವಿಕಾಂತೆಗೌಡ, ಜಿಲ್ಲಾಧಿಕಾರಿ ಸೇರಿ
ಹಲವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಂದು ದುರ್ಗೋತ್ಸವ ನಡೆಸುವಂತೆ ಸಚಿವ ಸುಧಾಕರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.ದುರ್ಗದ ಸಿರಿಕಲಾ ಸಂಘದ ಗೌರವಾಧ್ಯಕ್ಷ ಹಾಗೂ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಚಿತ್ರದುರ್ಗದ ಜನರಿಗೆ ಸಾಂಸ್ಕೃತಿಕ ವೈಭವ ನೆನಪಿಸುವ ಹಾಗೂ ಮನೋರಂಜನೆ ದೃಷ್ಟಿಯಿಂದ ದುರ್ಗದ ಸಿರಿ ಕಲಾ ಸಂಘದಿಂದ ಕರುನಾಡ ವೈಭವ ಹಾಗೂ ಧರ್ಮಭೂಮಿ ನ್ಯತ್ಯ ರೂಪಕ ಹಮ್ಮಿಕೊಳ್ಳಲಾಗಿದೆ. 60 ರಿಂದ 70 ಉದ್ಯಮಿಗಳು ಇದಕ್ಕೆ ಕೈಜೋಡಿಸಿದ್ದಾರೆ. ಹಂಪಿ, ಕಿತ್ತೂರು ಉತ್ಸವದ ಮಾದರಿಯಲ್ಲಿ ಪ್ರತಿ ವರ್ಷವೂ ದುರ್ಗದಲ್ಲಿ ದುರ್ಗೋತ್ಸವ ಆಚರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಹಕಾರ ಪಡೆದು ಮುಖ್ಯಮಂತ್ರಿಗಳ ಬಳಿ ಹೋಗುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಲಾ ಸಂಘದ ಗೌರವಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಖಜಾಂಚಿ ಅನಂತೆರಡ್ಡಿ, ಐಶ್ವರ್ಯ ಅರುಣ್‍ಕುಮಾರ್, ಸೈಟ್‍ಬಾಬು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ನಿವೃತ್ತ ಡಿವೈಎಸ್ಪಿಗಳಾದ ಅಬ್ದುಲ್‍ರೆಹಮಾನ್, ಸೈಯದ್ ಇಸಾಖ್, ಎನ್.ಆರ್.ನಟರಾಜ್, ಪ್ರಕಾಶ್ ಬಾದರದಿನ್ನಿ, ಭವಾನಿ ಮಂಜು ಇದ್ದರು.