ಭಾರಿ ಮಳೆಗೆ ಕಟ್ಟೇಪುರ ಎಡದಂಡೆ ನಾಲೆ ಕುಸಿತ

| Published : Oct 24 2025, 01:00 AM IST

ಸಾರಾಂಶ

ಭಾರೀ ಮಳೆಗೆ ವಡವಾನಹೊಸಹಳ್ಳಿ ಬಳಿಯಿರುವ ಕಟ್ಟೇಪುರ ಎಡದಂಡೆ ನಾಲೆಯು ಕುಸಿದ ಪರಿಣಾಮ ನಾಲೆಯ ನೀರು ಕಾವೇರಿ ನದಿಗೆ ಸೇರುತ್ತಿದೆ. ನಾಲೆಯಲ್ಲಿ ಒಂದು ಹಸುವೂ ಸಹ ಸಿಲುಕಿಕೊಂಡು ಸಾವಿಗೀಡಾಗಿದೆ. ನಮ್ಮ ತಾಲೂಕಿನಲ್ಲಿ ಸುಮಾರು 30ರಿಂದ 35 ಕೆರೆಗಳು ಒಡೆದು ಹೋಗಿದ್ದು ಹಾಗೂ ಭಾರೀ ಮಳೆಯಿಂದಾಗಿ ತಾಲೂಕಿನಲ್ಲಿ ಬಹಳಷ್ಟು ಮನೆಗಳಿಗೆ ಹಾನಿಯಾಗಿದ್ದು ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನತೆ ಜಾಗೃತರಾಗಿರಬೇಕು ಎಂದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಭಾರೀ ಮಳೆಗೆ ವಡವಾನಹೊಸಹಳ್ಳಿ ಬಳಿಯಿರುವ ಕಟ್ಟೇಪುರ ಎಡದಂಡೆ ನಾಲೆಯು ಕುಸಿದ ಪರಿಣಾಮ ನಾಲೆಯ ನೀರು ಕಾವೇರಿ ನದಿಗೆ ಸೇರುತ್ತಿದೆ. ನಾಲೆಯಲ್ಲಿ ಒಂದು ಹಸುವೂ ಸಹ ಸಿಲುಕಿಕೊಂಡು ಸಾವಿಗೀಡಾಗಿದೆ.

ಈ ಹಿನ್ನೆಲೆಯಲ್ಲಿ ಶಾಸಕ ಎ. ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ 1973ರಲ್ಲಿ ಕಟ್ಟೇಪುರ ಎಡದಂಡೆ ನಾಲೆಯ 25ರಿಂದ 30 ಅಡಿ ಉದ್ದದ ಇಟ್ಟಿಗೆಯಲ್ಲಿ ಕಟ್ಟಿದ್ದ ತಡೆಗೋಡೆಯು ಕುಸಿದಿದೆ. ಶೀಘ್ರವಾಗಿ ನಾಲೆಯಲ್ಲಿ ನೀರು ಹರಿಯುವಂತೆ ಪೈಪನ್ನು ಅಳವಡಿಸಿ ನಾಲೆಯ ನೀರು ಪೋಲಾಗದೆ ಮುಂದಿನ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುವಂತೆ ಕೆಲಸ ನಿರ್ವಹಿಸಬೇಕು. ನಂತರದ ದಿನಗಳಲ್ಲಿ ಉತ್ತಮವಾದ ತಡೆಗೋಡೆಯನ್ನು ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ದುರಸ್ತಿ ಮಾಡುವ ಸಂದರ್ಭದಲ್ಲಿ ಸರಿಯಾಗಿ ತಡೆಗೋಡೆ ನಿರ್ಮಿಸದೇ ಇರುವುದರಿಂದ ಈ ರೀತಿಯಾಗಿದ್ದು ಇದರಲ್ಲಿ ಅಂದಿನ ಎಂಜಿನಿಯರ್‌ಗಳ ನ್ಯೂನತೆ ಎದ್ದು ಕಾಣುತ್ತಿದೆ, ಇದೇ ರೀತಿ ಹಾರಂಗಿ ನಾಲೆಯ 7ರಿಂದ 8 ಕಿರು ಸೇತುವೆ ಕಾಮಗಾರಿಗಳು ಸಹ ಇದುವರೆಗೂ ಆಗಿಲ್ಲ ಇದರ ಬಗ್ಗೆ ಸರ್ಕಾರದ ಗಮನಸೆಳೆದು ಶೀಘ್ರವಾಗಿ ಕಾಮಗಾರಿ ಮಾಡಿಸಲು ಕ್ರಮವಹಿಸುತ್ತೇನೆ. ನಮ್ಮ ತಾಲೂಕಿನಲ್ಲಿ ಸುಮಾರು 30ರಿಂದ 35 ಕೆರೆಗಳು ಒಡೆದು ಹೋಗಿದ್ದು ಹಾಗೂ ಭಾರೀ ಮಳೆಯಿಂದಾಗಿ ತಾಲೂಕಿನಲ್ಲಿ ಬಹಳಷ್ಟು ಮನೆಗಳಿಗೆ ಹಾನಿಯಾಗಿದ್ದು ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನತೆ ಜಾಗೃತರಾಗಿರಬೇಕು ಎಂದರು.

ಈ ಸಂದರ್ಭದಲ್ಲಿ ಹಾರಂಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಮಂಜುನಾಥ್, ಗೋಕುಲ್, ಸಹಾಯಕ ಎಂಜಿನಿಯರ್ ವೆಂಕಟೇಶ್ ಹಾಗೂ ಸ್ಥಳೀಯರು ಇದ್ದರು.