ಸಾರಾಂಶ
ಒಂದು ಎಕ್ರೆ ಪ್ರದೇಶದಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಸಿ ತರಕಾರಿ ಬೆಳೆ
ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳ
ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಕೃಷಿ ಸಿರಿಯಲ್ಲಿ ತರಕಾರಿಗಳ ಪ್ರಪಂಚವೇ ತೆರೆದುಕೊಂಡಿದೆ.ಸುಮಾರು ಒಂದು ಎಕರೆ ಪ್ರದೇಶದಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಸಿ ತರಕಾರಿಗಳನ್ನು ಬೆಳೆಸಲಾಗಿದೆ. ತುಂತುರು ನೀರಾವರಿಗೆ ಉತ್ತೇಜನ ನೀಡಿ ರೈತರು ಹೆಚ್ಚಿನ ಆದಾಯವನ್ನು ಗಳಿಸಲು ಸಾಧ್ಯವೆಂದು ತೋರಿಸಿಕೊಡಲಾಗಿದೆ.ಶರತ್ ಕುಮಾರ್ ಹಾಗೂ ಚಂದ್ರಯ್ಯ ಆಚಾರ್ಯ ಅವರ ತಂಡ ಕೃಷಿಯನ್ನು ಮಾಡಿ ಸೈ ಎನಿಸಿದ್ದಾರೆ. ಸುಮಾರು ಮೂರು ತಿಂಗಳ ಕಠಿಣ ಪರಿಶ್ರಮ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿ ಹಸಿ ಮೆಣಸಿನಕಾಯಿ, ಬೆಂಡೆ, ಟೊಮೆಟೊ, ಕ್ಯಾಬೇಜ್, ಹಾಗಲಕಾಯಿ, ಅಲಸಂಡೆ, ಬದನೆ, ಕೊತ್ತಂಬರಿ ಸೊಪ್ಪು, ಮೂಲಂಗಿ, ಚೀನಿಕಾಯಿ, ಪಡವಲಕಾಯಿ, ಕುಂಬಳಕಾಯಿಯನ್ನು ಬೆಳೆಸಲಾಗಿದೆ.
ಆಕರ್ಷಕ ಫಲಪುಷ್ಪ ಪ್ರದರ್ಶನ:ವಿರಾಸತ್‌ನಲ್ಲಿ ಯಶೋವರ್ಮ ಸಂಕೀರ್ಣ ಸೇರಿದಂತೆ ರಸ್ತೆಗಳಲ್ಲಿ ಸುಮಾರು ಎರಡೂ ಲಕ್ಷಕ್ಕೂ ಅಧಿಕ ಹೆಚ್ಚು ಹೂ ಕುಂಡಗಳನ್ನಿಟ್ಟು ಅಲಂಕಾರ ಮಾಡಲಾಗಿದೆ. ಫಲಪುಷ್ಪ ಪ್ರದರ್ಶನ ಬಳಿಯಿರುವ ವೇದಿಕೆಯಲ್ಲಿ ಕನ್ನಡದ ಕವಿಗಳು, ದೈವದ ಮುಖವರ್ಣಿಕೆಗಳು, ಹೂವಿನ ಅಲಂಕೃತಗೊಂಡ ವಿವಿಧ ಪಕ್ಷಿಗಳಿವೆ.
ತುಳುನಾಡ ಮಹಾಪುರುಷರಾದ ಕೋಟಿ ಚೆನ್ನಯ್ಯರ ಮೂರ್ತಿಗಳು, ಬಸವಣ್ಣ, ಸಂಗೊಳ್ಳಿ ರಾಯಣ್ಣ, ತುಳಸಿ ಬೊಮ್ಮನಗೌಡ, ಸಾಲುಮರದ ತಿಮ್ಮಕ್ಕ, ಹಳ್ಳಿ ಮಹಿಳೆಯರ ಮುಖವರ್ಣಿಕೆಗಳು, ಅಂಬೇಡ್ಕರ್, ಜಿನಮೂರ್ತಿಗಳು, ಹಳೆಯ ಎತ್ತಿನ ಗಾಡಿಗಳನ್ನಿಡಲಾಗಿದೆ. ಒಟ್ಟಾರೆ ಆಳ್ವಾಸ್ ವಿರಾಸತ್‌ಗೆ ಕಲಾತ್ಮಕ ಟಚ್ ನೀಡಲಾಗಿದೆ.ಆಹಾರ ಮೇಳ, ಕೃಷಿ ಉತ್ಪನ್ನಗಳು ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಮಳಿಗೆಗಳಿವೆ. ಅವುಗಳಲ್ಲಿ ಕೃಷಿ ಆಧಾರಿತ ಅಡಕೆ ಸುಲಿಯುವ ಯಂತ್ರಗಳು, ಪಂಪ್‌ಗಳು, ಏಣಿಗಳು, ಪತ್ರಿಕೆಗಳು, ತರಕಾರಿ ಬೀಜಗಳು, ನರ್ಸರಿಗಳು, ಕಮ್ಮಾರಿಕೆ, ಅಡಕೆ ಮರ ಏರುವ ಯಂತ್ರ, ಆವೆ ಮಣ್ಣಿನಿಂದ ತಯಾರಿಸಿದ ಒಲೆಗಳು, ವಿವಿಧ ರಾಜ್ಯಗಳ ಖಾದಿ ಬಟ್ಟೆಗಳ ಮಳಿಗೆಗಳು ಸೇರಿವೆ.