ಕುಮಟಳ್ಳಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

| Published : Feb 10 2024, 01:47 AM IST

ಸಾರಾಂಶ

ರೈತರ ಕನಸು ಸಾಕಾರಗೊಳ್ಳುವ ಸಂದರ್ಭದಲ್ಲಿ ಕೊಳಕು ರಾಜಕಾರಣ ತಂದು ಕಾಲೆಳೆಯುವ ಕೆಲಸ ಮಾಡಿ, ಯೋಜನೆಗೆ ಹಿನ್ನಡೆ ಮಾಡಿದರೆ ಹೋರಾಟ ಅನಿವಾರ್ಯ. ಇದು ರೈತರ ಕನಸು ಸಾಕಾರಗೊಳ್ಳುವ ಯೋಜನೆ. ಇದನ್ನು ನಮ್ಮ ಮನೆಯ ಹಬ್ಬದಂತೆ ಸಂಭ್ರಮಿಸೋಣ.

ಕನ್ನಡಪ್ರಭ ವಾರ್ತೆ ಅಥಣಿ

ರಾಜ್ಯ ಹಾಗೂ ಕೇಂದ್ರದಲ್ಲಿ ನಿಮ್ಮದೇ ಬಿಜೆಪಿ ಸರ್ಕಾರ ಇದ್ದಾಗ, ರಮೇಶ ಜಾರಕಿಹೊಳಿ ಅವರೇ ನೀರಾವರಿ ಸಚಿವರಿದ್ದಾಗಲೂ ಅಮ್ಮಾಜೇಶ್ವರಿ ಏತ ನೀರಾವರಿ ಕಾಮಗಾರಿ ಪ್ರಾರಂಭಿಸದೇ, 5 ವರ್ಷ ಕೇವಲ ರಾಜಕೀಯ ಮಾಡಿದವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಅಮೋಘ ಖೊಬ್ರಿ ಅವರು ಮಾಜಿ ಶಾಸಕ ಮಹೇಶ ಕುಮಟಳ್ಳಿ ವಿರುದ್ಧ ಗುಡುಗಿದರು.

ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಅಡಿಗಲ್ಲು ಸಮಾರಂಭದ ಪೂರ್ವಭಾವಿ ಸಭೆ ತಾಲೂಕಿನ ಕೊಟ್ಟಲಗಿ ಭಾಗದಲ್ಲಿ ಕಾಂಗ್ರೆಸ್ ಮುಖಂಡರಿಂದ ಜರುಗಿತು. ಈ ವೇಳೆ ಮಾತನಾಡಿದ ಅವರು, ಚುನಾವಣೆಯಲ್ಲಿ ಈ ಭಾಗದ ರೈತರಿಗೆ ನೀರಾವರಿ ಕಲ್ಪಿಸುವ ಭರವಸೆ ಮೇಲೆ ಆಯ್ಕೆಯಾಗಿ 5 ವರ್ಷ ಕಾಲಹರಣ ಮಾಡಿದಿರಿ. ಆದರೆ, ಕಳೆದ ಚುನಾವಣೆಯಲ್ಲಿ ನೀರಾವರಿ ಯೋಜನೆ ಘೋಷಣೆಯ ನಾಟಕ ಮಾಡಿದಕ್ಕಾಗಿ ಜನರು ನಿಮ್ಮನ್ನು ಸೋಲಿಸಿ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಂದ ನಿಗದಿಯಾಗುವ ದಿನಾಂಕದಂದು ಕೊಟ್ಟಲಗಿ ಗ್ರಾಮದಲ್ಲಿ ಚಾಲನೆ ದೊರೆಯಲಿರುವ ಅಮ್ಮಾಜೇಶ್ವರಿ ನೀರಾವರಿ ಯೋಜನೆಗೆ ಅಡಿಗಲ್ಲು ಕಾರ್ಯಕ್ರಮ ವಿಜೃಂಭಣೆಯಿಂದ ಮಾಡೋಣ. ಈ ಹಿಂದೆ ಅದೆಷ್ಟೋ ಜನ ಅಥಣಿ ಪೂರ್ವಭಾಗದ ನೀರಾವರಿಗಾಗಿ ಭೂಮಿ ಪೂಜೆಯ ನಾಟಕವಾಡಿದ್ದನ್ನು ನೋಡಿದ್ದೇವೆ. ನಾನೇ ಮಾಡಿದ್ದು ಅಂತ ಹೇಳಿಕೊಳ್ಳುವರರನ್ನು ಈಗಲೂ ನೋಡುತ್ತಲೇ ಇದ್ದೇವೆ. ಆದರೆ, ಸರ್ಕಾರದ ಮಟ್ಟದಲ್ಲಿ ಹೋರಾಡಿ ಅನುದಾನ ಬಿಡುಗಡೆಗೊಳಿಸಿ ಕರಿಮಸೂತಿ ನೀರಾವರಿ ಪೂರ್ಣಗೊಳಿಸಲು ಲಕ್ಷ್ಮಣ ಸವದಿಯವರೇ ಬರಬೇಕಾಯಿತು ಎಂದರು.

ಕಾಂಗ್ರೆಸ್ ಯುವ ಮುಖಂಡ ಶಿವು ಗುಡ್ಡಾಪೂರ ಮಾತನಾಡಿ, ಅಂದು ಮಹೇಶ ಕುಮಟಳ್ಳಿ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ರಮೇಶ ಜಾರಕಿಹೊಳಿ ಸಚಿವರಾಗಿದ್ದರು. ಅಂದು ಸಿದ್ದರಾಮಯ್ಯವರು ಮುಖ್ಯಮಂತ್ರಿಗಳಾಗಿದ್ದಾಗ ಈ ಭಾಗಕ್ಕೆ ಕೆರೆ ತುಂಬುವ ಯೋಜನೆ ಮಂಜೂರಾಗಿತ್ತು. ಈ ವೇಳೆ ಲಕ್ಷ್ಮಣ ಸವದಿ ಬಿಜೆಪಿ ಶಾಸಕರಾಗಿದ್ದರು. ಕೆರೆ ತುಂಬುವ ಯೋಜನೆ ಅಡಿಗಲ್ಲು ಸಮಾರಂಭ ಮಾಡಿದರೆ ಇದರ ಲಾಭ ಸವದಿ ಅವರಿಗೆ ಸಲ್ಲುತ್ತದೆ ಎಂದು ಭಾವಿಸಿ ಸಮಾರಂಭ ಮಾಡಲೇ ಇಲ್ಲ. ಇದಕ್ಕೆ ಅಡ್ಡಿ ಮಾಡಿದ್ದು ಮಹೇಶ ಕುಮಟಳ್ಳಿ. ಇದು ಸುಳ್ಳು ಅಂತಾದರೆ ಅಥಣಿ ಸಿದ್ದೇಶ್ವರ ದೇವಸ್ಥಾನ ಏರೋಣ ಬನ್ನಿ, ತಾಕತ್ತಿದ್ದರೆ ನಮ್ಮ ಸವಾಲಿಗೆ ಉತ್ತರಕೊಡಿ ಎಂದು ಸವಾಲು ಹಾಕಿದರು.

ನೀವು ಕಾಂಗ್ರೆಸ್ ಅಭ್ಯರ್ಥಿಯಾಗಿ ನೀರಾವರಿ ಯೋಜನೆಗಳ ಜಾರಿಯ ಭರವಸೆ ನೀಡಿ ಚುನಾವಣೆ ಗೆಲುವು ಸಾಧಿಸಿದಿರಿ. ನಂತರ ಬಿಜೆಪಿಗೆ ಸೇರಿ ಉಪ-ಚುನಾವಣೆಯಲ್ಲೂ ಗೆಲುವು ಪಡೆದಿರಿ. ಒಂದು ಸರ್ಕಾರ ಕೆಡವಿ ಇನ್ನೊಂದು ಸರ್ಕಾರ ರಚನೆ ಮಾಡಿದ್ದ ನಿಮಗೆ ಕೆರೆ ತುಂಬುವ ಯೋಜನೆ, ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಜಾರಿ ಮಾಡಿಸಿ ಹಳ್ಳಿಗೆ ನೀರು ಕೊಡಿಸುವುದು ಮುಖ್ಯವಾಗಿರಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಸಭೆಯಲ್ಲಿ ಕೊಟ್ಟಲಗಿ ಗ್ರಾಮದ ಸುತ್ತ ಮುತ್ತಲಿನ ಜನರು ಹಾಜರಿದ್ದರು.ಈ ತಿಂಗಳಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಅಡಿಗಲ್ಲು ಸಮಾರಂಭದ ಪೂರ್ವತಯಾರಿಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಹಿರಿಯ ನಾನಾಗೌಡಾ ಪಾಟೀಲ, ಗುರು ದಾಶ್ಯಾಳ, ಅಮೋಘ ಖೊಬ್ರಿ, ಶಿವು ತೇಲಿ, ರಘು ದೊಡ್ಡನಿಂಗಪ್ಪಗೋಳ, ಗುರು ಮುಗ್ಗನವರ, ವಿಶ್ವನಾಥ ಗಣಿ, ಅರವಿಂದ ಉಂಡೋಡಿ, ಕಾಶೀನಾಥ ಕುಂಬಾರಕರ, ಯಂಕಣ್ಣ ಅಸ್ಕಿ, ಶೇಖರ ವಳಸಂಗ, ಶ್ರೀಶೈಲ ಶೆಲ್ಲೆಪ್ಪಗೋಳ, ಗುರು ಕಾಮನ್ ಸೇರಿದಂತೆ ಅನೇಕರು ಇದ್ದರು.

----------ಕೋಟ್‌

ರೈತರ ಕನಸು ಸಾಕಾರಗೊಳ್ಳುವ ಸಂದರ್ಭದಲ್ಲಿ ಕೊಳಕು ರಾಜಕಾರಣ ತಂದು ಕಾಲೆಳೆಯುವ ಕೆಲಸ ಮಾಡಿ, ಯೋಜನೆಗೆ ಹಿನ್ನಡೆ ಮಾಡಿದರೆ ಹೋರಾಟ ಅನಿವಾರ್ಯ. ಇದು ರೈತರ ಕನಸು ಸಾಕಾರಗೊಳ್ಳುವ ಯೋಜನೆ. ಇದನ್ನು ನಮ್ಮ ಮನೆಯ ಹಬ್ಬದಂತೆ ಸಂಭ್ರಮಿಸೋಣ. ಈ ಭಾಗದ ಗ್ರಾಮಗಳ ಮನೆ ಮನೆಯಿಂದಲೂ ಇಡೀ ಕುಟುಂಬ ಸಮೇತ ಜನರು ಸೇರುವ ಮೂಲಕ ರಾಜಕೀಯ ವಿರೋಧಿಗಳಿಗೆ ತಕ್ಕ ಉತ್ತರ ಕೊಟ್ಟು ರೈತರ ಕನಸನ್ನು ನನಸಾಗಿಸೋಣ.

- ಅಮೋಘ ಖೊಬ್ರಿ. ಕಾಂಗ್ರೆಸ್ ಮುಖಂಡ ಅಥಣಿ.