ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ ತರಲು ಜಂಟಿ ಸಮಿತಿ ರಚಿಸಿದ ಬಳಿಕ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಭೂಮಿ ಕಬಳಿಕೆ ಆರಂಭವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.ವಕ್ಫ್ ದಬ್ಬಾಳಿಕೆ ವಿರುದ್ಧ ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಜೊತೆ ಪಾಲ್ಗೊಂಡ.ಬಳಿಕ ತಮ್ಮ ಗೃಹಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜಂಟಿ ಸದನ ಸಮಿತಿ ರಚಿಸಿದ್ದು, ಈ ಮೂಲಕ ವಕ್ಫ್ ಮಸೂದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದರು.
ಡಿಸೆಂಬರ್‌ನಲ್ಲಿ ಮಸೂದೆಈ ಸಮಿತಿ ರಚಿಸಿದಾಗಿನಿಂದಲೇ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ದೇವಸ್ಥಾನದ ಜಾಗ, ರೈತರ ಜಮೀನುಗಳನ್ನು ದುರುದ್ದೇಶದಿಂದ ಕಾನೂನು ಬಾಹಿರವಾಗಿ ವಕ್ಫ್ ಮೂಲಕ ಭೂಮಿ ಕಬಳಿಸಲಾಗುತ್ತಿದೆ. ಇದು ಬಿಜೆಪಿ ಸರ್ಕಾರವಿದ್ದಾಗ ಆಗಿರಲಿಲ್ಲ. ಕಳೆದ ಒಂದು ತಿಂಗಳಿಂದ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಡಿಸೆಂಬರ್‌ನಲ್ಲಿ ವಕ್ಫ್ ಮಸೂದೆಗೆ ಖಂಡಿತ ತಿದ್ದುಪಡಿ ತರಲಿದೆ. ಇದು ನ್ಯಾಯಸಮ್ಮತವಾಗಿರಲಿದೆ ಎಂದರು.ಮುಸ್ಲಿಮರು ಮಾತ್ರವಲ್ಲದೆ, ಸಿಖ್, ಜೈನ ಮೊದಲಾದ ಸಮುದಾಯಗಳ ಧಾರ್ಮಿಕ ಮಂಡಳಿಗಳು ಕೂಡ ಇದೆ. ಆದರೆ ಮುಸ್ಲಿಮರಿಗೆ ಸಂಬಂಧಿಸಿದ ವಕ್ಫ್ ಗೆ ಮಾತ್ರ ವಿಶೇಷ ಸ್ಥಾನಮಾನವಿದೆ. ಕಾಂಗ್ರೆಸ್ ನಾಯಕರು ಮಾತೆತ್ತಿದರೆ ಸಮಾನತೆ ಎಂದು ಹೇಳುತ್ತಾರೆ. ಎಲ್ಲರನ್ನೂ ಸಮಾನರೆಂದು ಪರಿಗಣಿಸಲಿ ಎಂದರು.
ಆಸ್ಪತ್ರೆಗಳಲ್ಲಿ ಔಷಧ ಕೊರತೆರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 250 ಬಗೆಯ ಔಷಧಿಗಳ ಕೊರತೆ ಉಂಟಾಗಿದೆ. ಹಾಗಾದರೆ ಕಾಂಗ್ರೆಸ್ ಅವಧಿಯಲ್ಲಿ ಕೋವಿಡ್ ಬಂದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ನಾನು ಆಲೋಚಿಸುತ್ತಿದ್ದೆನೆ. ಕೋವಿಡ್ ತನಿಖೆಯ ಹೆಸರಲ್ಲಿ ರೂಪಿಸಿದ ವರದಿಯ ಒಂದೊಂದೇ ಅಂಶಗಳನ್ನು ಸೋರಿಕೆ ಮಾಡಲಾಗುತ್ತಿದೆ. ಕಾನೂನು ಪ್ರಕಾರ ಈ ವರದಿಯನ್ನು ಸದನದಲ್ಲಿ ಮಂಡಿಸಬೇಕಾಗಿತ್ತು. ಆದರೆ ಕಾನೂನು ಬಾಹಿರವಾಗಿ ಮುಖ್ಯಮಂತ್ರಿ ಕಚೇರಿಯಿಂದ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಲಾಗುತ್ತಿದೆ ಎಂದು ದೂರಿದರು.ವಕ್ಫ್ ತಿಮಿಂಗಲ ಇದ್ದಂತೆ
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ವಕ್ಫ್ ಬೋರ್ಡ್ ತಿಮಿಂಗಲ ಇದ್ದಂತೆ.ತಿಮಿಂಗಲ ಅಂದರೆ ನುಂಗಿ ಹಾಕೋದು ಅಂತ ಅರ್ಥ,ವಕ್ಫ್ ಬೋರ್ಡ್ ಎಲ್ಲ ಆಸ್ತಿಗಳನ್ನು ನುಂಗುತ್ತಿದೆ. ಏಕೆಂದರೆ ಕಾಂಗ್ರೆಸ್ ಸರ್ಕಾರ ವಕ್ಫ್ ಬೋರ್ಡ್ ಗೆ ನ್ಯಾಯಾಂಗ ಅಧಿಕಾರ ನೀಡಿದೆ. ಮುಸ್ಲಿಮರು ಆಕಾಶದಿಂದ ಬಂದವರೇ ಎಂದು ಪ್ರಶ್ನಿಸಿದರು..ಸಚಿವ ಜಮೀರ್ ಅಹ್ಮದ್ ಮಣ್ಣಿನ ಮಗ, ಮಾಜಿ ಪ್ರಧಾನಿ, ವಕ್ಕಲಿಗ ನಾಯಕ ಹೆಚ್.ಡಿ.ದೇವೇ ಗೌಡರ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ.ಅವರ ಕುಟುಂಭವನ್ನು ಕೊಂಡು ಕೊಳ್ಳುತ್ತೇನೆ ಎಂದು ಹೇಳಿ ವಕ್ಕಲಿಗರಿಗೆ ಅಪಮಾನ ಮಾಡಿದ್ದಾರೆ. ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕರಿಯ ಅಂತ ಕರೆಯುತ್ತಾರೆ. ಇವರಿಗೆ ದುರಹಂಕಾರ ಮಿತಿಮೀರಿದೆ ಮತ್ತು ಇದು ಕಾಂಗ್ರೆಸ ನ ದುರಹಂಕಾರದ ಪರಮಾವಧಿಯಾಗಿದೆ ಎಂದು ಆಕ್ರೋಷ ವ್ಯೆಕ್ತ ಪಡಿಸಿದರು.ಗ್ಯಾರಂಟಿಗಳ ಹೆಸರೇಳಿ ಅಧಿಕಾರಕ್ಕೆ ಬಂದಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರಂಟಿಗಳನ್ನು ಕೊಡಲಾಗದೇ ರಾಜ್ಯದಲ್ಲಿ 14 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ತೆಗೆದುಹಾಕುವ ಸಂಚು ಮಾಡುತ್ತಿದ್ದಾರೆ. ಬಡವರ ರೇಷನ್ ಕಾರ್ಡ್ ಗಳು ರದ್ದಾಗುತ್ತಿವೆ.ಇದರಿಂದ ಬಡವದ ರಕ್ತವನ್ನು ಹೀರುವ ಸರ್ಕಾರ ಆಗಿದೆ. ಕೂಡಲೇ ರೇಷನ್ ಕಾರ್ಡ್ ರದ್ದು ಮಾಡುವುದನ್ನ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಮುನಿಸ್ವಾಮಿ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಎ. ಗಜೇಂದ್ರ, ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಕೃಷ್ಣಮೂರ್ತಿ, ಸುರೇಂದ್ರಗೌಡ, ಮತ್ತಿತರರು ಇದ್ದರು.