ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಶವಸಂಸ್ಕಾರಕ್ಕೆ ಜಮೀನಿನ ಮಾಲೀಕ ವಿರೋಧಿಸಿದ್ದರಿಂದ, ಗ್ರಾಮದ ಮಹಿಳೆಯರೇ ಮುನ್ನುಗ್ಗಿ ಅಂತ್ಯಸಂಸ್ಕಾರ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಕಾವಳೇವಾಡಿ ಗ್ರಾಮದಲ್ಲಿ ಶನಿವಾರ ನಡೆದಿದೆ.ಕಾವಳೇವಾಡಿ ಗ್ರಾಮದ ತುಕಾರಾಮ್ ಮೋರ ಅನಾರೋಗ್ಯದಿಂದ ಶುಕ್ರವಾರ ತಡರಾತ್ರಿ ನಿಧನ ಹೊಂದಿದ್ದರು. ಶನಿವಾರ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಜಮೀನಿನ ಬಳಿ ಚಿತೆ ಸಿದ್ಧಗೊಳಿಸಿದ್ದರು. ಇನ್ನೇನು ಅಂತ್ಯಸಂಸ್ಕಾರ ಮಾಡಬೇಕು ಎನ್ನುವಷ್ಟರಲ್ಲಿ ಜಮೀನು ಮಾಲೀಕ ವೊಮನಿ ಗಾವಡೆ ನ್ಯಾಯಾಲಯದ ಆದೇಶ ಪ್ರತಿ ಕೈಯಲ್ಲಿ ಹಿಡಿದು ಅಂತ್ಯಸಂಸ್ಕಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ನನ್ನ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಬೇಡಿ ಎಂದು ಕೋರ್ಟ್ ಆದೇಶ ತೋರಿಸಿದ್ದಾನೆ.
ಆದರೆ, ಈ ಹಿಂದಿನಿಂದಲೂ ಇದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಆದ್ದರಿಂದ ಇಲ್ಲೇ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ವಿವಾದಿತ ಜಾಗದಲ್ಲಿ ಮೃತದೇಹ ಇಟ್ಟು ಗ್ರಾಮಸ್ಥರು ಸುಮಾರು ಮೂರು ಗಂಟೆಗಳ ಕಾಲ ಧರಣಿ ನಡೆಸಿದರು.ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು, ಜಮೀನು ಮಾಲೀಕನ ಮನವೊಲಿಸುವ ಪ್ರಯತ್ನ ನಡೆಸಿದರು. ಇದಕ್ಕೆ ಮಣಿಯದ ಮಾಲೀಕ ಕೆಲ ದಿನಗಳ ಹಿಂದೆ ಕೋರ್ಟ್‌ನಲ್ಲಿ ತಮ್ಮ ಪರ ಆದೇಶ ಬಂದಿದೆ. ಆದ್ದರಿಂದ ಇನ್ಮುಂದೆ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾನೆ. ಈ ವೇಳೆ ಜಮೀನು ಮಾಲೀಕ, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಹತೋಟಿ ಮೀರುತ್ತಿದ್ದ ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಡಬೇಕಾಯಿತು.
ಸ್ಥಳದಲ್ಲಿ ಯಾವುದೇ ರೀತಿಯ ರಾಜಿ - ಪಂಚಾಯಿತಿ ಆಗದ ಹಿನ್ನೆಲೆ ಬೇಸತ್ತ ಮಹಿಳೆಯರು, ತಾವೇ ಶವ ತಂದು ಚಿತೆಯ ಮೇಲಿಟ್ಟು, ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ ನೆರವೇರಿಸಿದರು.