ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಳೆದ 8-10 ವರ್ಷದಲ್ಲಿ ₹500 ಕೋಟಿಗೂ ಅಧಿಕ ಹವಾಲಾ ಹಗರಣ ಮಾಡಿರುವ ಬಗ್ಗೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ)ದಿಂದ ಸಮಗ್ರ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಹದಡಿ ರಸ್ತೆಯ ಮೂಲಕ ಆದಾಯ ತೆರಿಗೆ ಇಲಾಖೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಸಂಸದ ಸಿದ್ದೇಶ್ವರರನ್ನು ವಶಕ್ಕೆ ಪಡೆದು, ಮಂಪರು ಪರೀಕ್ಷೆಗೆ ಒಳಪಡಿಸಿ, ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ಘೋಷಣೆ ಕೂಗಿ, ಆದಾಯ ತೆರಿಗೆ ಇಲಾಖೆಗೆ ಮನವಿ ಅರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡರು, ಸಂಸದ ಸಿದ್ದೇಶ್ವರ ಅನೇಕ ವರ್ಷದಿಂದ ಹವಾಲ ವ್ಯವಹಾರ ನಡೆಸುತ್ತಿದ್ದಾರೆ. 30 ಪೈಸೆ ಕಮಿಷನ್‌ಗಾಗಿ ತನ್ನದೇ ಕಾರಿನಲ್ಲಿ ಹಣ ಸಾಗಿಸುತ್ತಿದ್ದೆಯೆಂಬುದಾಗಿ ಕಾರು ಚಾಲಕ ಸ್ವಾಮಿ ಮತ್ತು ಅನುಪಮಾ ಎಂಬವರು ಬೆಂಗಳೂರು ಉಪ್ಪಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನ್ನು ಇಲಾಖೆಗಳು ಗಂಭೀರವಾಗಿ ಪರಿಗಣಿಸಲಿ. ಹವಾಲಾ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ತಮಗೆ ಜೀವ ಬೆದರಿಕೆ ಇದೆ. ವಿಷ ಹಾಕಬಹುದೆಂದೆಲ್ಲಾ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಸಾಕಷ್ಟು ಅನುಮಾನಕ್ಕೂ ಆಸ್ಪದ ಮಾಡಿಕೊಟ್ಟಿದೆ ಎಂದು ಹೇಳಿದರು.ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಮಾಜಿ ಶಾಸಕ ಎಸ್.ರಾಮಪ್ಪ, ಕೆಪಿಸಿಸಿ ವಕ್ತಾರ ಡಿ.ಬಸವರಾಜ, ಮಾಜಿ ಮೇಯರ್ ಅನಿತಾಬಾಯಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್, ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ್, ಕೆ.ಚಮನ್ ಸಾಬ್, ಕೆ.ಜಿ.ಶಿವಕುಮಾರ, ಹರಿಹರ ರೇವಣಸಿದ್ದಪ್ಪ, ಎಲ್.ಎಂ.ಎಚ್.ಸಾಗರ್, ಎಸ್.ಮಲ್ಲಿಕಾರ್ಜುನ, ಕೋಳಿ ಇಬ್ರಾಹಿಂ, ಅಲ್ತಾಫ್ ಹುಸೇನ್, ಅಯೂಬ್ ಪೈಲ್ವಾನ್, ವಕೀಲ ಅನೀಸ್ ಪಾಷ, ಜಯಕುಮಾರ, ನಂಜಾನಾಯ್ಕ, ಅಲಿ ರಹಮತ್, ಶುಭ ಮಂಗಳ, ಸುನೀತಾ ಭೀಮಣ್ಣ, ದಾಕ್ಷಾಯಣಮ್ಮ, ಸುಷ್ಮಾ ಪಾಟೀಲ, ಕವಿತಾ ಚಂದ್ರಶೇಖರ, ರಾಜೇಶ್ವರಿ, ಎಚ್.ಜೆ.ಮೈನುದ್ದೀನ್, ಡಿ.ಎನ್.ಜಗದೀಶ, ಎಚ್.ಗುರುರಾಜ, ಇಬ್ರಾಹಿಂ ಖಲೀಲುಲ್ಲಾ, ಬಾಬುರಾವ್, ರವಿ ಇತರರು ಇದ್ದರು.
ದಾವಣಗೆರೆ ಜನರು ಹಾಲು ಕೊಡುವರು, ವಿಷ ನೀಡಲ್ಲಜೀವ ಬೆದರಿಕೆ ಸಂಸದರಿಗೆ ಯಾಕಿರುತ್ತದೆ? ದಾವಣಗೆರೆ ಜನರು ಹಾಲು ನೀಡುವ ಮನಸ್ಥಿತಿಯವರೇ ಹೊರತು, ವಿಷ ನೀಡುವವರಲ್ಲ. ದಾವಣಗೆರೆ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವ ಘೋಷಣೆ ಮಾಡುವ ಸಿದ್ದೇಶ್ವರ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆಂಬ ಬಗ್ಗೆ ಅಭಿವೃದ್ಧಿ ಕಾರ್ಡ್ ತೋರಿಸಲಿ, ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ವರದಿಯಾದಂತೆ ಹವಾಲ ಹಗರಣಕ್ಕೆ ಸಂಬಂಧಿಸಿದಂತೆ ಸಂಸದರ ವಶಕ್ಕೆ ಪಡೆದು, ತನಿಖೆಗೆ ಒಳಪಡಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಮುಖಂಡರು ಎಚ್ಚರಿಸಿದರು.ಬಿಜೆಪಿ ರಾಮನ ಹೆಸರಿನಲ್ಲಿ ರಾಜಕೀಯ
ಬಿಜೆಪಿಯವರು ಸಾಕಷ್ಟು ಹಗರಣ ಮಾಡಿದ್ದು, ಸುಮ್ಮನೆ ಡಿ.ಕೆ.ಶಿವಕುಮಾರ ಮೇಲೆ ಆರೋಪ ಮಾಡಿ, ಜೈಲಿಗೆ ಹಾಕಿಸಿದ್ದರು. ಸಂಸದ ಸಿದ್ದೇಶ್ವರ ಅವರದ್ದು ಹಗರಣಗಳಿವೆ. ಆದರೆ, ಅವು ಯಾರಿಗೂ ಗೊತ್ತಿಲ್ಲವೆಂದು ತಿಳಿದುಕೊಂಡಿದ್ದಾರಷ್ಟೇ. ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರಷ್ಟೇ ಹಿಂದುಗಳಲ್ಲ. ಕಾಂಗ್ರೆಸ್ಸಿನವರೂ ಹಿಂದುಗಳೇ ಎಂಬುದು ಮರೆಯಬಾರದು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ.ಎಸ್.ರಾಮಪ್ಪ, ಹರಿಹರ ಮಾಜಿ ಶಾಸಕ