ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
೨೦೨೫ ಜನವರಿಯಲ್ಲಿ ೭೩-೩ ಎಕರೆ ಜಾಗವನ್ನು ಮಾಜಿ ಶಾಸಕರೋರ್ವರು ಮತ್ತವರ ತಂಡದವರು ೯೭ ಮಂದಿಗೆ ಅಕ್ರಮವಾಗಿ ಖಾಯಂ ಸಾಗುವಳಿ ಚೀಟಿ ನೀಡಿ ಭೂ ಕಬಳಿಕೆ ಮಾಡಿ, ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕಾಗಿ ೨೫ ಎಕರೆ ಖರಾಬು ಜಾಗವನ್ನೂ ಕಬಳಿಸಿ ಅಕ್ರಮವಾಗಿ ಲೇಔಟ್ ಮಾಡುತ್ತಿದ್ದು, ಈ ಕಾಮಗಾರಿ ನಿಲ್ಲಬೇಕು. ಅಲ್ಲಿಯವರೆಗೂ ನಮ್ಮದು ನಿರಂತರ ಕಾನೂನು ಹೋರಾಟ ಇರುತ್ತದೆ. ಇಲ್ಲವಾದರೆ ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ವಕೀಲರಾದ ಎಂ.ಡಿ. ಗೋಪಾಲೇಗೌಡ ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಹಾಸನ ತಾಲೂಕಿನ ಕಸಬಾ ಹೋಬಳಿ ಚಿಕ್ಕಕೊಂಡಗುಳ ಗ್ರಾಮದ ಸರ್ವೆ ನಂಬರ್ ೭,೧೦,೨೫,೧೦೬,೧೦೭ ಮತ್ತು ೧೩೭ ರಲ್ಲಿದ್ದ ೭೩-೦೩ ಎಕರೆ ಸರ್ಕಾರಿ ಗೋಮಾಳ ಹಾಗೂ ೨೫ ಎಕರೆ ಆ ಖರಾಬ್ ಜಾಗವನ್ನು ರಾಜಕೀಯದವರು, ಪ್ರಭಾವಿಗಳು ಕಬಳಿಸಿ ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡುತ್ತಿದ್ದು, ನಮ್ಮ ದೂರಿನ ಜೊತೆಗೆ, ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಆದ ಹಿನ್ನೆಲೆಯಲ್ಲಿ ತನಿಖೆಗೆ ಉನ್ನತಮಟ್ಟದ ತನಿಖಾ ತಂಡ ರಚಿಸಲಾಗಿದೆ. ೨೦೧೮ರಿಂದ ಈವರೆಗೆ ಸರ್ಕಾರಿ ಮತ್ತು ಖರಾಬ್ ಜಾಗವನ್ನು ತಾವೇ ಸೃಷ್ಟಿಸಿದ ಸುಮಾರು ೯೭ ಮಂದಿ ಖಾಯಂ ಸಾಗುವಳಿ ಚೀಟಿ ನೀಡಿ ಕಬಳಿಸಿದ್ದಾರೆ ಎಂದು ದೂರಿದರು. ಇದರ ವಿರುದ್ಧ ಹಾಗೂ ಸರ್ಕಾರಿ ಭೂಮಿ ಉಳಿಸಲು ನಾನು ಮತ್ತು ನಮ್ಮ ವಕೀಲರ ತಂಡ ಹಲವು ವರ್ಷಗಳಿಂದಲೂ ಕಾನೂನು ಹೋರಾಟ ಮಾಡುತ್ತಿದ್ದೇವೆ. ಇದೇ ವಿಚಾರವನ್ನು ಹಾಸನ ಶಾಸಕರಾದ ಎಚ್.ಪಿ.ಸ್ವರೂಪ್ ಪ್ರಕಾಶ್ ಹಾಗೂ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಅವರು ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆದಿದ್ದರು. ಒಟ್ಟಾರೆ ಸುಮಾರು ೧೦೦ ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಜೆ.ವಿ. ಮಾಡಿಕೊಂಡು ಸರ್ಕಾರಕ್ಕೆ ಸಾವಿರಾರು ಕೋಟಿ ರು.ಗಳನ್ನು ವಂಚಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ನಿಗದಿತ ಸಮಯದೊಳಗೆ ಟಿಟಿ (ಟೆಂಪೊರವಿ ಟ್ಯಾಕ್ಸ್) ಪಾವತಿ ಮಾಡಬೇಕಿತ್ತು. ಆದರೆ ಯಾರೂ ಕಟ್ಟದ ಕಾರಣ, ಅಷ್ಟೂ ಭೂಮಿ ಮತ್ತೆ ಸರ್ಕಾರಕ್ಕೆ ವಾಪಸ್ ಆಗಿ ಗೋಮಾಳವಾಗಿಯೇ ಉಳಿಯಿತು. ಆದರೆ ಇತ್ತೀಚೆಗೆ ೭೩-೦೩ ಎಕರೆ ಜಾಗವನ್ನು ಮಾಜಿ ಶಾಸಕರೊಬ್ಬರು ಮತ್ತವರ ತಂಡದವರು ೯೭ ಮಂದಿಗೆ ಅಕ್ರಮವಾಗಿ ಖಾಯಂ ಸಾಗುವಳಿ ಚೀಟಿ ನೀಡಿ ಕಬಳಿಕೆ ಮಾಡಿ, ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕಾಗಿ ೨೫ ಎಕರೆ ಖರಾಬ್ ಜಾಗವನ್ನೂ ಕಬಳಿಸಿ ಅಕ್ರಮವಾಗಿ ಲೇಔಟ್ ಮಾಡುತ್ತಿದ್ದು, ಸರ್ಕಾರದ ಆದೇಶದಂತೆ ಈ ಅಕ್ರಮದ ಬಗ್ಗೆ ತನಿಖೆ ನಡೆಸಲು ಕಂದಾಯ ಆಯುಕ್ತಾಲಯ, ಜಾರಿಗಳ, ಅಭಿಯೋಜನೆ ಮತ್ತು ಕಾನೂನು ಶಾಖೆಯ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಜನವರಿ ೩ರಂದು ತನಿಖಾ ತಂಡ ರಚಿಸಲಾಗಿದೆ. ಕೇಂದ್ರೀಯ ಜಾರಿ ದಳದ ತಹಸೀಲ್ದಾರ್ ಗಣಪತಿ ಶಾಸ್ತ್ರಿ ಸದಸ್ಯ ಕಾರ್ಯದರ್ಶಿ ಆಗಿದ್ದು, ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ತಹಸೀಲ್ದಾರ್‌ಗಳಾದ ನಯನ ಎಸ್.ಎಲ್, ಶಂಕುಂತಳಾ ಎಂ.ಆರ್, ಬೆಂಗಳೂರು ಭೂಮಿ ತಂತ್ರಾಂಶ ಕೋಶದ ತಹಸೀಲ್ದಾರ್ ಮತ್ತು ಕಂದಾಯ ಆಯುಕ್ತಾಲಯದ ಗ್ರೇಡ್ -೨ ತಹಸೀಲ್ದಾರ್ ಈ ತಂಡ ೮ ದಿನಗಳ ಒಳಗಾಗಿ ಸಮಗ್ರವಾದ ವರದಿ ನೀಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕರ್ನಾಟಕ ಸೇವಾ ನಿಯಮಗಳು ೧೯೫೮ರ ಅನ್ವಯ ೧ರಿಂದ ೪ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಸಲ್ಲಿಸಲು ಆದೇಶಿಸಲಾಗಿದೆ.ಈ ಕಾಮಗಾರಿ ನಿಲ್ಲಬೇಕು. ಅಲ್ಲಿಯವರೆಗೂ ನಿರಂತರ ಹೋರಾಟ ಮಾಡುತ್ತೇವೆ. ಇಲ್ಲವಾದರೆ ಹೈಕೋರ್ಟ್ ಮೊರೆ ಹೋಗುತ್ತೇವೆ. ನಕಲಿ ದಾಖಲೆ ಮೂಲಕ ಭೂಮಿ ಕಬ್ಬಳಿಸಿ ಸರ್ಕಾರಕ್ಕೆ ವಂಚನೆ ಮಾಡಿರುವವರ ವಿರುದ್ಧ ಕಠಿಣ ಕ್ರಮಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ನಯನ, ಪ್ರಸನ್ನ ಕುಮಾರ್, ಲೋಕೇಶ್, ಭರತ್ ರಾಜ್ ಮತ್ತು ವೈ.ಡಿ. ಶರತ್ ರಾಜ್, ಇತರರು ಉಪಸ್ಥಿತರಿದ್ದರು.