ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಯಾವುದೇ ಒಂದು ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯ ಬೇಕಾದರೆ ಆರೋಗ್ಯವಂತ ಮಾನವ ಸಂಪನ್ಮೂಲ ಅತಿ ಮುಖ್ಯ ಪಾತ್ರ ವಹಿಸುತ್ತದೆಯೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸಿ.ಎಸ್. ಪ್ರಶಾಂತ್ ಅಭಿಪ್ರಾಯಪಟ್ಟರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ತಿಮ್ಮಸಂದ್ರ ವಲಯದ ಕೋನಪ್ಪಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿ, ನಮ್ಮ ದೇಶದಲ್ಲಿ ಇಂದಿನ ಯುವ ಪೀಳಿಗೆ ಹದಿಹರೆಯದ ವಯಸ್ಸಿನಲ್ಲಿ ತಂಬಾಕು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ಬಲಿಯಾಗಿ ಕ್ಯಾನ್ಸರ್ ನಂತಹ ಭಯಾನಕ ಖಾಯಿಲೆಗೆ ತುತ್ತಾಗಿ ಪೋಷಕರು ಹಾಗೂ ಸಮಾಜಕ್ಕೆ ಹೊರೆಯಾಗುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.
ಕ್ಯಾನ್ಸರ್ ಆರಂಭದಲ್ಲಿಯೇ ಪತ್ತೆಬೆಂಗಳೂರು ಶಂಕರ ಕ್ಯಾನ್ಸರ್ ಆಸ್ಪತ್ರೆಯ ವೈದ್ಯೆ ಡಾ.ಸುಧಾರಾಣಿ ಮಾತನಾಡಿ, ತಂಬಾಕು ಸೇವನೆ ಮಾಡಿದವರಿಗೆ ಕ್ಯಾನ್ಸರ್ ಅನ್ನೋದು ಕಟ್ಟಿಟ್ಟ ಬುತ್ತಿ, ಒಮ್ಮೆ ಒಂದು ಸಿಗರೇಟ್ ಸೇದುವುದರಿಂದ ೫೦೦೦ ರಾಸಾಯನಿಕಗಳನ್ನು ನಾವು ದೇಹಕ್ಕೆ ಸೇರಿಸಿಕೊಂಡಂತೆ ಎಂದರು. ಅದಲ್ಲದೆ ೪೦ ವಯಸ್ಸು ದಾಟಿದ ಮಹಿಳೆಯರಲ್ಲಿ ಹಲವಾರು ವಿಧಗಳಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇದ್ದು ಇದನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಿದಲ್ಲಿ ಕ್ಯಾನ್ಸರ್‌ನಂತಹ ಖಾಯಿಲೆಯಿಂದ ಸಂಪೂರ್ಣ ಗುಣಮುಖರಾಗಬಹುದೆಂದರು.
ಜಿಲ್ಲಾ ಜನಜಾಗೃತಿ ಸದಸ್ಯ ಮಂಜುನಾಥ ಮಾತನಾಡಿ ನಮ್ಮ ಮುಂದಿನ ಪೀಳಿಗೆಗೆ ನಾವು ಉತ್ತಮ ಸಂಸ್ಕಾರವನ್ನು ಕೊಡಬೇಕು ಹಿರಿಯರಾದ ನಾವು ಉತ್ತಮ ಸಂಸ್ಕಾರ ಹೊಂದಿರಬೇಕು ನಾವು ತಂಬಾಕು, ಮದ್ಯಪಾನ, ಸಿಗರೇಟ್ ಸೇದುತ್ತಾ ಇದ್ದರೆ ನಮ್ಮ ಮಕ್ಕಳು ಅದನ್ನೇ ಮುಂದುವರೆಸಿಕೊAಡು ಹೋಗುತ್ತರಾದ್ದರಿಂದ ನಾವೇ ಇತರರಿಗೆ ಮಾದರಿ ಆಗಬೇಕೆಂದರು.ಕೋನಪ್ಪಲ್ಲಿ ಗ್ರಾ.ಪಂ. ಪಿಡಿಒ ಯಾಸ್ಮಿನ್ ಅಧ್ಯಕ್ಷತೆ ವಹಿಸಿದ್ದು, ತಾಲ್ಲೂಕಿನ ಯೋಜನಾಧಿಕಾರಿ ವಿನೋದ್, ಶಂಕರ ಕ್ಯಾನ್ಸರ್ ಆಸ್ಪತ್ರೆಯ ಡಾ.ಸೂರ್ಯಕಾಂತ್, ಆಸ್ಪತ್ರೆಯ ಪ್ರಭಂಧಕ ರವೀಂದ್ರನಾಥ್, ಕೃಷಿ ಮೇಲ್ವಿಚಾರಕ ಹರೀಶ್, ವಲಯದ ಮೇಲ್ವಿಚಾರಕಿ ಸೌಮ್ಯ, ಸೇವಾಪ್ರತಿನಿಧಿ ಸವಿತಾ, ಭಾಗವಹಿಸಿದ್ದರು.