‘ಲಿಂಗಾಯತ’ ಮಾನವ ಹಕ್ಕುಗಳ ಪ್ರತಿಪಾದಕ: ನಿಜಗುಣಾನಂದ ಸ್ವಾಮಿ

| Published : Sep 04 2025, 01:00 AM IST

‘ಲಿಂಗಾಯತ’ ಮಾನವ ಹಕ್ಕುಗಳ ಪ್ರತಿಪಾದಕ: ನಿಜಗುಣಾನಂದ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮದು ಸನಾತನ ಸಂಸ್ಕೃತಿಯಲ್ಲ, ನಮ್ಮದು ಬಸವ ಸಂಸ್ಕೃತಿ. ಲಿಂಗಾಯತ ಎಂದರೆ ಈ ದೇಶದ ಮಾನವ ಹಕ್ಕುಗಳ ಪ್ರತಿಪಾದಕ ಎಂಬಂಥ ವ್ಯವಸ್ಥೆಯಲ್ಲಿ ನಾವೆಲ್ಲ ಬರಬೇಕು ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ನಮ್ಮದು ಸನಾತನ ಸಂಸ್ಕೃತಿಯಲ್ಲ, ನಮ್ಮದು ಬಸವ ಸಂಸ್ಕೃತಿ. ಲಿಂಗಾಯತ ಎಂದರೆ ಈ ದೇಶದ ಮಾನವ ಹಕ್ಕುಗಳ ಪ್ರತಿಪಾದಕ ಎಂಬಂಥ ವ್ಯವಸ್ಥೆಯಲ್ಲಿ ನಾವೆಲ್ಲ ಬರಬೇಕು ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಬುಧವಾರ ಸಂಜೆ ಇಲ್ಲಿನ ಬಿವಿ ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ಲಿಂಗಾಯಕ ಮಠಾಧೀಶರ ಒಕ್ಕೂಟದಿಂದ ಆಯೋಜಿಸಲಾಗಿದ್ದ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಶ್ರೇಣಿಕೃತ ಸಂಸ್ಕೃತಿಯ ದೌಲತ್ತು, ದರ್ಪದ ಕಾಲದಲ್ಲಿ ಬಸವಣ್ಣ ಸಹೋದರತ್ವ, ಸೌಹಾರ್ದತೆಯನ್ನು ಬಿಂಬಿಸುವ ಬಸವ ಸಂಸ್ಕೃತಿಯನ್ನು ತಂದುಕೊಟ್ಟಿದ್ದು ಮಾನವ ಪ್ರೇಮದ ಘನತೆಯ ಸಂಸ್ಕೃತಿಯನ್ನು ಲಿಂಗಾಯತ ಪ್ರತಿಬಿಂಬಿಸುತ್ತದೆ ಎಂದರು.

ಬಸವ ಸಂಸ್ಕೃತಿಗೆ ಬೀದರ್‌ ಬೇರು:

ಬಸವ ಸಂಸ್ಕೃತಿ ಇತರ ಜಿಲ್ಲೆಗಳಲ್ಲಿ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ನಡೆದರೆ ಬೀದರ್‌ ಅದಕ್ಕೆ ಬೇರು. ಇಲ್ಲೇನಾದರೂ ಗೆದ್ದಲು ಹತ್ತಿದರೆ ಎಲ್ಲವೂ ನಾಶವಾಗುತ್ತೆ ಎಚ್ಚರ. ಬೇರಿಗೆ ನೀರೆರುವ ಕಾರ್ಯಕ್ರಮವೇ ಈ ಬಸವ ಸಂಸ್ಕೃತಿ ಅಭಿಯಾನ ಎಂದು ನಿಜಗುಣಾನಂದ ಶ್ರೀಗಳು ಹೇಳಿದರು.

ಸಾಣೇಹಳ್ಳಿ ತರಳಬಾಳು ಸಂಸ್ಥಾನದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ, ಎಲ್ಲರ ಮನೆಗಳಲ್ಲಿ ಬಸವಣ್ಣನ ಭಾವಚಿತ್ರ ಮಾತ್ರ ಇರಲಿ, ಲಿಂಗ ಧಾರಣೆ ಮಾಡಿ, ಅಂಗೈಯಲ್ಲಿ ಲಿಂಗ ಇಟ್ಟು ಪೂಜಿಸಿ ಎಂದು ಕರೆ ನೀಡಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ನಾಡೋಜ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ನಾವು ಮಾಡಿದ್ದ ಸಂಕಲ್ಪಕ್ಕೆ ಇಂದಿನ ಸಭೆಯೇ ಸಾಕ್ಷಿಯಾಗಿದೆ ಎಂದರು.

ಮೋಟಗಿಯ ಪ್ರಭು ಚನ್ನಬಸವ ಸ್ವಾಮಿಗಳು ಮಾತನಾಡಿ, ಎಲ್ಲರನ್ನು ಇಂಬಿಟ್ಟುಕೊಳ್ಳುವಂಥ ಸಂಸ್ಕೃತಿ ಬಸವ ಸಂಸ್ಕೃತಿಯಾಗಿದೆ ಎಂದು ಬಣ್ಣಿಸಿದರು.

ಬೆಳಗಾವಿಯ ಹಿರಿಯ ಸಾಹಿತಿ ಡಾ.ವಿ.ಎಸ್‌.ಮಾಳಿ ಅವರು ಅನುಭಾವ ಮಂಡಿಸಿದರು.

ಧನ್ನೂರ್‌ ದಂಪತಿಗಳಿಗೆ ಸನ್ಮಾನ :

ಇದೇ ಸಂದರ್ಭದಲ್ಲಿ ಅಭಿಯಾನದ ಅಧ್ಯಕ್ಷರಾದ ಬಸವರಾಜ ಧನ್ನೂರ್‌ ದಂಪತಿಗಳಿಗೆ ಮಠಾಧೀಶರುಗಳು ಆಶೀರ್ವದಿಸಿ ಶ್ಲಾಘಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಪುರಸ್ಕಾರ ಪ್ರದಾನ ಮಾಡಲಾಯಿತು.

ಸಾನಿಧ್ಯವನ್ನು ಡಂಬಳ-ಗದಗ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ನಾಡೋಜ ಬಸವಲಿಂಗ ಪಟ್ಟದ್ದೇವರು, ಹುಲಸೂರು ಶಿವಾನಂದ ಸ್ವಾಮಿಗಳು, ಬಸವ ಯೋಗಾಶ್ರಮದ ಸಿದ್ದರಾಮ ಶರಣ ಬೆಲ್ದಾಳ್‌, ನಾಗನೂರಿನ ಅಲ್ಲಮಪ್ರಬು ಸ್ವಾಮಿಗಳು, ಬಸವಧರ್ಮ ಪೀಠದ ಡಾ. ಗಂಗಾಮಾತಾಜಿ, ಬಸವಕಲ್ಯಾಣ ಹರಳಯ್ಯ ಪೀಠದ ಅಕ್ಕ ಗಂಗಾಂಬಿಕೆ, ಚನ್ನಬಸವಾನಂದ ಸ್ವಾಮಿಗಳು, ಬಸವಪ್ರಭುಗಳು, ಕರುಣಾನಂದ ಸ್ವಾಮೀಜಿ ಸೇರಿದಂತೆ ಅನೇಕರು ಶರಣರು ಇದ್ದರು. ಅಧ್ಯಕ್ಷತೆಯನ್ನು ಬಸವರಾಜ ಧನ್ನೂರ್‌ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಚಿವ ರಹೀಮ್‌ ಖಾನ್‌, ಶಾಸಕ ಶಶೀಲ್‌ ನಮೋಶಿ, ಎಚ್‌ಕೆಇ ಆಡಳಿತ ಮಂಡಳಿ ನಿರ್ದೇಶಕ ಡಾ. ರಜನೀಶ ವಾಲಿ, ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬು ವಾಲಿ, ಅಭಿಯಾನದ ಖಜಾಂಚಿ ಜಯರಾಜ್‌ ಖಂಡ್ರೆ, ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಹಾವಶೆಟ್ಟಿ ಪಾಟೀಲ್‌, ಬಿ.ಜಿ ಶೆಟಕಾರ್‌ ಸೇರಿದಂತೆ ಮತ್ತಿತರರು ಇದ್ದರು.ಶಿವಕುಮಾರ ಪಾಂಚಾಳ ತಂಡದಿಂದ ವಚನ ಗಾಯನ, ನೃತ್ಯಾಂಗನ ಸಂಸ್ಥೆಯ ಪೂರ್ಣಚಂದ್ರ ಮೈನಾಳೆ ಅವರ ತಂಡದಿಂದ ವಚನ ನೃತ್ಯ ನಡೆಯಿತು.