ಹಲವರು ನಿಮ್ಮ ಬಗ್ಗೆ ಪುಸ್ತಕ ಬರೆಯುವಂತೆ ಬದುಕಿ: ಬುರಡಿ

| Published : Nov 26 2024, 12:48 AM IST

ಹಲವರು ನಿಮ್ಮ ಬಗ್ಗೆ ಪುಸ್ತಕ ಬರೆಯುವಂತೆ ಬದುಕಿ: ಬುರಡಿ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ವಿದ್ಯಾವರ್ಧಕ ಸಂಸ್ಥೆಯ ಸಿ.ಎಸ್. ಪಾಟೀಲ್ ಸಮೂಹ ಶಾಲೆಗಳ ಸ್ಥಾಪಕ ಸಿ.ಎಸ್. ಪಾಟೀಲ್ ಅವರ 113ನೇ ಜನ್ಮದಿನಾಚರಣೆ ನಡೆಯಿತು. ಈ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗದಗ:

ಮಕ್ಕಳು ಚೆನ್ನಾಗಿ ಅಧ್ಯಯನ ಮಾಡಿ ಸಮಾಜದಲ್ಲಿ ಒಳ್ಳೆಯ ಮಕ್ಕಳಾಗಿ ಬಾಳಬೇಕು. ಒಂದು ಉಕ್ತಿಯಂತೆ ಎಲ್ಲರೂ ಓದುವಂತೆ ಒಂದು ಪುಸ್ತಕ ಬರೆಯಿರಿ ಅಥವಾ ಹಲವರು ನಿಮ್ಮ ಬಗ್ಗೆ ಪುಸ್ತಕ ಬರೆಯುವಂತೆ ನೀವು ಬದುಕಬೇಕು ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಹೇಳಿದರು.

ಅವರು ವಿದ್ಯಾವರ್ಧಕ ಸಂಸ್ಥೆಯ ಸಿ.ಎಸ್. ಪಾಟೀಲ ಸಮೂಹ ಶಾಲೆಗಳು ಆಚರಿಸಿದ, ಸಂಸ್ಥೆಯ ಸಂಸ್ಥಾಪಕ ಸಿ.ಎಸ್. ಪಾಟೀಲ ಅವರ 113ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿ.ಎಸ್. ಪಾಟೀಲ ಅವರು ಬೇರೆಯವರು ತಮ್ಮ ಬಗ್ಗೆ ಬರೆಯುವಂತೆ ಬದುಕಿದವರಾಗಿದ್ದಾರೆ. ಇಂತಹ ಬೃಹತ್ ಆದರ್ಶ ಶಿಕ್ಷಣ ಸಂಸ್ಥೆ ಕಟ್ಟಿ ಆದರ್ಶರಾಗಿ ಬಾಳಿ ಬದುಕಿದವರು ಎಂದರು.

ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಗೌರವ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿ, ಸಾಮಾಜಿಕ ಕಳಕಳಿ ಹಾಗೂ ಶೈಕ್ಷಣಿಕ ಚಿಂತನೆಗಳು ಅನುಕರಣೀಯವಾಗಿವೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವ ನಮ್ಮ ಮಕ್ಕಳೂ ಸಹಿತ ಹೀಗೆ ಬಾಳಿ, ಬದುಕಿ ಹೆಸರು ಮಾಡಬೇಕು ಎಂದರು.

ಸಂಸ್ಥೆಯ ಉಪಾಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ಸಿ.ಎಸ್. ಪಾಟೀಲ ಅವರು ಶಿಸ್ತಿನ ಸಿಪಾಯಿಯಾಗಿದ್ದರು. ಸಮಯಪಾಲಕರು, ಕೆಲಸದಲ್ಲಿ ಶ್ರದ್ಧೆಯುಳ್ಳವರಾಗಿದ್ದರು. ಮಕ್ಕಳೂ ಅವರಂತೆ ಶ್ರದ್ಧಾಗುಣ ಹೊಂದಿ ಬೆಳೆಯಬೇಕು ಎಂದರು.

ಈ ವೇಳೆ ಬಾಲಕಿಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್.ಜಿ. ಕೋಲ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಡಾ. ಆರ್.ಎಲ್. ಹಂಸನೂರ ಅವರು, ಸಿ.ಎಸ್. ಪಾಟೀಲ ಅವರ ಕುರಿತು ಒಂದು ಸ್ವರಚಿತ ಕವನ ವಾಚಿಸಿದರು. ಶಿಕ್ಷಕ ಕೆ.ಐ. ಪಾಟೀಲ ಅವರು ಸಂವಿಧಾನ ಪೂರ್ವ ಪೀಠಿಕೆ ಓದಿಸಿದರು.

ಸಂಸ್ಥೆಯ ಅಧ್ಯಕ್ಷ ಕಳಕಪ್ಪ ನಾಗರಾಳ, ಆಡಳಿತ ಮಂಡಳಿಯ ಸದಸ್ಯರಾದ ಗೀತಾಬಾಯಿ ಪಾಟೀಲ, ಪ್ರಭಾರಿ ಮುಖ್ಯೋಪಾಧ್ಯಾಯ ಎಂ.ಆರ್. ನಾಯಕ ಹಾಗೂ ಬೋದ್ಲೇಖಾನ್‌ ಇದ್ದರು.

ಜಿ.ಎಸ್. ಪಾಟೀಲ ಸ್ವಾಗತಿಸಿದರು.ಎಸ್.ಎಚ್. ಕೆಂಗುಡ್ಡಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್. ಗುಜಮಾಗಡಿ ವಂದಿಸಿದರು.