‘ಲೋಕ’ ಚುನಾವಣೆ: ಡಾ.ಸಿದ್ದರಾಮಯ್ಯ ಶಕ್ತಿ ಪ್ರದರ್ಶನ

| Published : Feb 03 2024, 01:47 AM IST

ಸಾರಾಂಶ

ತಾವರೆಗೆರೆ ಬಡಾವಣೆಯ ಚೀರನಹಳ್ಳಿ ರಸ್ತೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಬೃಹತ್ ಸಭೆ ಆಯೋಜಿಸಿದ್ದರು. ಈ ಸಭೆಗೆ ವಿವಿಧ ಕ್ಷೇತ್ರಗಳ ಬಿಜೆಪಿ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ವರಿಷ್ಠರಿಗೆ ಸಂದೇಶ ರವಾನೆ । ಅಭಿಮಾನಿ, ಕಾರ್ಯಕರ್ತರಿಂದ ಒಕ್ಕೊರಲ ಆಗ್ರಹ

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಅವರು ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಭೆ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಇದರೊಂದಿಗೆ ತಮ್ಮ ಹಿರಿತನ, ಜನಬೆಂಬಲವನ್ನು ಪರಿಗಣಿಸಿ ತಮಗೇ ಟಿಕೆಟ್ ನೀಡುವಂತೆ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.

ನಗರದ ತಾವರೆಗೆರೆ ಬಡಾವಣೆಯ ಚೀರನಹಳ್ಳಿ ರಸ್ತೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಬೃಹತ್ ಸಭೆ ಆಯೋಜಿಸಿದ್ದರು. ಈ ಸಭೆಗೆ ವಿವಿಧ ಕ್ಷೇತ್ರಗಳ ಬಿಜೆಪಿ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ಅವರೆಲ್ಲರೂ ಡಾ.ಸಿದ್ದರಾಮಯ್ಯ ಅವರಿಗೆ ಪಕ್ಷ ಟಿಕೆಟ್ ನೀಡಿದರೆ ಅವರ ಬೆಂಬಲಕ್ಕೆ ನಿಂತು ಒಮ್ಮತದಿಂದ ಗೆಲುವಿಗೆ ಶ್ರಮಿಸುವುದಾಗಿ ಸಂಕಲ್ಪ ಮಾಡಿದರು.

೨೦೧೮ರ ಲೋಕಸಭೆ ಉಪ ಚುನಾವಣೆಯಲ್ಲಿ ೨.೪೪ ಲಕ್ಷ ಮತಗಳನ್ನು ಗಳಿಸಿದ್ದ ಡಾ.ಸಿದ್ದರಾಮಯ್ಯನವರು ಮೊದಲ ಬಾರಿಗೆ ಜಿಲ್ಲೆಯೊಳಗೆ ಬಿಜೆಪಿ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದರು. ಬಿಜೆಪಿ ಹಿಂದೆಂದಿಗಿಂತಲೂ ಈಗ ಬಲವರ್ಧನೆಗೊಂಡಿದೆ. ಶೇಕಡಾವಾರು ಮತದಾನದ ಪ್ರಮಾಣ ಹೆಚ್ಚಿರುವುದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತಾಗಿದೆ. ಹಾಗಾಗಿ ಸ್ಥಳೀಯ ಹಾಗೂ ಸಮರ್ಥ ಅಭ್ಯರ್ಥಿಯಾಗಿರುವ ಡಾ.ಸಿದ್ದರಾಮಯ್ಯನವರಿಗೆ ಟಿಕೆಟ್ ನೀಡುವಂತೆ ಹಲವು ಮುಖಂಡರು ಆಗ್ರಹಿಸಿದರು.

ಮದ್ದೂರು ಕ್ಷೇತ್ರದ ಮುಖಂಡ ಎಸ್.ಪಿ.ಸ್ವಾಮಿ ಮಾತನಾಡಿ, ಜಿಲ್ಲೆಯೊಳಗೆ ಬಿಜೆಪಿ ಅಸ್ತಿತ್ವವನ್ನು ಗಟ್ಟಿಗೊಳಿಸುವಲ್ಲಿ ಸಿದ್ದರಾಮಯ್ಯನವರು ಪ್ರಮುಖ ಪಾತ್ರ ವಹಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಅವರಿಗೇ ಟಿಕೆಟ್ ನೀಡಬೇಕೆಂಬುದು ನಮ್ಮ ಬಯಕೆ. ಪಕ್ಷಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಪಕ್ಷದ ನಾಯಕರು ಟಿಕೆಟ್ ಕೊಡುವ ಮನಸ್ಸು ಮಾಡಲಿ ಎಂದರು.

ಶ್ರೀರಂಗಪಟ್ಟಣ ಕ್ಷೇತ್ರದ ಮುಖಂಡ ಎಸ್.ಸಚ್ಚಿದಾನಂದ ಮಾತನಾಡಿ, ಸಿದ್ದರಾಮಯ್ಯನವರು ಒಬ್ಬ ತ್ಯಾಗಿ, ಲೋಕಸಭಾ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದರೂ ಅಧಿಕಾರಕ್ಕೆ ಆಸೆಪಡದೆ ಕರ್ಣನಂತೆ ಸುಮಲತಾ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟರು. ನಾವೆಲ್ಲರೂ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ತಾಳ್ಮೆ, ಜಾಣ್ಮೆ ಅವರಲ್ಲಿದೆ. ಅವರನ್ನು ಎಂಎಲ್ಸಿ ಮಾಡುವಿರೋ, ರಾಜ್ಯಸಭೆಗೆ ಕಳಿಸುವಿರೋ ಗೊತ್ತಿಲ್ಲ. ಲೋಕಸಭೆ ಟಿಕೆಟ್ ಕೊಟ್ಟರೆ ನಾವೆಲ್ಲರೂ ಅವರ ಬೆನ್ನಿಗೆ ನಿಂತು ಗೆಲ್ಲಿಸುತ್ತೇವೆಂದು ಅಭಯ ನೀಡಿದರು.

ಮಂಡ್ಯ ಕ್ಷೇತ್ರದ ಮುಖಂಡ ಅಶೋಕ್ ಜಯರಾಂ ಮಾತನಾಡಿ, ಮಾಜಿ ಶಾಸಕ ದೊಡ್ಡಬೋರೇಗೌಡರ ಮಗನಾಗಿ ಅವರ ಆದರ್ಶಗಳನ್ನು ರೂಢಿಸಿಕೊಂಡಿರುವ ಸಿದ್ದರಾಮಯ್ಯನವರು ಲೋಕಸಭೆಗೆ ಸಮರ್ಥ ಅಭ್ಯರ್ಥಿ. ದಕ್ಷತೆ ಹಾಗೂ ಪಕ್ಷ ನಿಷ್ಠೆಯ ಸಂಕೇತದಂತಿದ್ದಾರೆ. ಜಿಲ್ಲೆಯೊಳಗೆ ಬಿಜೆಪಿಯನ್ನು ಪ್ರಯೋಗಶಾಲೆ ಮಾಡದೆ, ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವಕಾಶಗಳನ್ನು ನೀಡುವಂತೆ ಮನವಿ ಮಾಡಿದರು.

ಕೆ.ಆರ್.ಪೇಟೆ ಮುಖಂಡ ಶೀಳನೆರೆ ಅಂಬರೀಶ್ ಮಾತನಾಡಿ, ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಇರಲಿ. ಆದರೆ, ಅಭ್ಯರ್ಥಿ ಮಾತ್ರ ನಮ್ಮ ಪಕ್ಷದವರು ಇರಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಬಿಜೆಪಿ ಉಳಿಸಬೇಕು ಎಂದರು.

ಕಾರ್ಯಕ್ರಮವನ್ನು ಹಿರಿಯ ಮುಖಂಡ ದೊರೆಸ್ವಾಮಿ ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಮನ್‌ಮುಲ್ ನಿರ್ದೇಶಕಿ ರೂಪಾ, ಮುಖಂಡರಾದ ಎಚ್.ಪಿ.ಮಹೇಶ್, ಡಾ.ಸದಾನಂದ, ನಿತ್ಯಾನಂದ, ಜೋಗಿಗೌಡ, ಸುಜಾತಾ ಸಿದ್ದಪ್ಪ, ವಸಂತಕುಮಾರ್, ರಮೇಶ್, ಸೋಮಶೇಖರ್, ಸತೀಶ್, ಟಿ.ಸಿ.ಲಿಂಗೇಗೌಡ, ನಗರ ಘಟಕದ ಅಧ್ಯಕ್ಷ ವಿವೇಕ್, ಸಿ.ಟಿ.ಮಂಜುನಾಥ, ಸಿದ್ದರಾಜು ಮತ್ತಿತರರಿದ್ದರು.

------

ಮಂಡ್ಯದ ತಾವರೆಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಮಾವೇಶವನ್ನು ಪಕ್ಷದ ಹಿರಿಯ ಮುಖಂಡ ದೊರೆಸ್ವಾಮಿ ಉದ್ಭಾಟಿಸಿದರು.