ಮಹಾದಾಯಿ: 2016ರ ರೈಲು ತಡೆ, ಈಗ ಬಂಧನ!

| Published : Mar 22 2024, 01:02 AM IST

ಮಹಾದಾಯಿ: 2016ರ ರೈಲು ತಡೆ, ಈಗ ಬಂಧನ!
Share this Article
  • FB
  • TW
  • Linkdin
  • Email

ಸಾರಾಂಶ

ಮಹದಾಯಿಗಾಗಿ 2016ರಲ್ಲಿ ನಡೆದ ರೈಲ್‌ ತಡೆಗೆ ಸಂಬಂಧಿಸಿದಂತೆ ಹೋರಾಟಗಾರರನ್ನು ರೈಲ್ವೆ ಪೊಲೀಸರು ಈಗ ಬಂಧಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಹೋರಾಟಗಾರ ಕುತುಬುದ್ದೀನ್‌ ಖಾಜಿ ಎಂಬುವವರನ್ನು ಗುರುವಾರ ಬಂಧಿಸಿದೆ.

ಹುಬ್ಬಳ್ಳಿ:

ಮಹದಾಯಿಗಾಗಿ 2016ರಲ್ಲಿ ನಡೆದ ರೈಲ್‌ ತಡೆಗೆ ಸಂಬಂಧಿಸಿದಂತೆ ಹೋರಾಟಗಾರರನ್ನು ರೈಲ್ವೆ ಪೊಲೀಸರು ಈಗ ಬಂಧಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಹೋರಾಟಗಾರ ಕುತುಬುದ್ದೀನ್‌ ಖಾಜಿ ಎಂಬುವವರನ್ನು ಗುರುವಾರ ಬಂಧಿಸಿದೆ. ಹೋರಾಟಗಾರನನ್ನು ಬಂಧಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹ ವ್ಯಕ್ತವಾಗಿದೆ.

ರೈತ ಹಾಗೂ ರೈಲು ಹೋರಾಟಗಾರ ಕುತುಬುದ್ದೀನ್‌ ಖಾಜಿ ಎಂಬುವವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?ಮಹದಾಯಿಗಾಗಿ 2015ರಿಂದ ನಿರಂತರ ಧರಣಿ ಪ್ರಾರಂಭಿಸಿದ್ದ ಹೋರಾಟಗಾರರು ನ್ಯಾಯಾಧಿಕರಣದ ತೀರ್ಪು ಬರುವವರೆಗೂ ದಿನಕ್ಕೊಂದು ಬಗೆಯ ಪ್ರತಿಭಟನೆ ನಡೆಸುತ್ತಿದ್ದರು. ರಸ್ತೆ ತಡೆ, ಜಿಲ್ಲಾಧಿಕಾರಿ ಕಚೇರಿ, ಕೇಂದ್ರ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ, ಸೇರಿ ವಿವಿಧ ಬಗೆಯ ಹೋರಾಟಗಳನ್ನು ನಡೆಸುತ್ತಿದ್ದರು. ಇದೇ ವೇಳೆ ಮಹದಾಯಿ ವಿಷಯವಾಗಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ 2016ರ ಮಾರ್ಚ್‌ 15ರಂದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಬರೋಬ್ಬರಿ ಏಳುವರೆ ಗಂಟೆ ರೈಲ್‌ ರೋಖೋ ನಡೆಸಿದ್ದರು. ಇದರಿಂದಾಗಿ 8ರಿಂದ 10 ರೈಲುಗಳು ನಿಲ್ದಾಣ ಬಿಟ್ಟು ಕದಲಿರಲಿಲ್ಲ. ಇಡೀ ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲೇ ಇದು ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಇಲ್ಲಿ ಏಳೆಂಟು ರೈಲುಗಳ ನಿಲುಗಡೆಯಾಗಿದ್ದರೆ, ಅತ್ತ ಬೇರೆ ಬೇರೆ ನಿಲ್ದಾಣಗಳಲ್ಲೂ ರೈಲುಗಳು ಕದಲಲು ಸಾಧ್ಯವಾಗಿರಲಿಲ್ಲ. ಕೆಲ ರೈಲುಗಳ ಸಂಚಾರ ಸಂಪೂರ್ಣ ರದ್ದಾಗಿದ್ದರೆ, ಕೆಲ ರೈಲುಗಳ ಸಂಚಾರ ಭಾಗಶಃ ರದ್ದಾಗಿದ್ದವು. ಬೆಳಗ್ಗೆ ಶುರುವಾಗಿದ್ದ ರೈಲು ತಡೆ ಸಂಜೆವರೆಗೂ ನಡೆದಿತ್ತು.

ಕೇಸ್‌ ದಾಖಲು:ಆಗ ಆರ್‌ಪಿಎಫ್‌ ಪೊಲೀಸರು ವೀರೇಶ ಸೊಬರದಮಠ, ಶಂಕರಣ್ಣ ಅಂಬಲಿ, ಲೋಕನಾಥ ಹೆಬಸೂರು, ಕುತುಬುದ್ದೀನ ಖಾಜಿ ಸೇರಿದಂತೆ 500ಕ್ಕೂ ಅಧಿಕ ಹೋರಾಟಗಾರರ ಮೇಲೆ ಕೇಸ್‌ ದಾಖಲಿಸಿದ್ದಾರೆ. 60ಕ್ಕೂ ಹೆಚ್ಚು ಹೋರಾಟಗಾರರ ಹೆಸರನ್ನು ನಮೂದಿಸಿದ್ದರೆ, ಉಳಿದವರ ಹೆಸರು ನಮೂದಿಸದೇ ಇತರೆ 500 ಜನರು ಎಂದು ಉಲ್ಲೇಖಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೂ ಹೋರಾಟಗಾರರಿಗೆ ಯಾವುದೇ ನೋಟಿಸ್‌ ಬಂದಿರಲಿಲ್ಲ. ಹೋರಾಟಗಾರರು ರೈಲ್‌ ರೋಖೋ ಮಾಡಿದ್ದನ್ನೇ ಮರೆತ್ತಿದ್ದರು. ಕಳೆದ 2022ರಿಂದ ಆಗ ರೈಲ್‌ ರೋಖೋ ಮಾಡಿದ್ದ ಹೋರಾಟಗಾರರಿಗೆ ನೋಟಿಸ್‌ ಬರಲು ಶುರುವಾಗಿದ್ದವು. ರೈಲ್ವೆ ಪೊಲೀಸರು ಕೋರ್ಟ್‌ನಿಂದ ಜಾಮೀನು ಪಡೆದುಕೊಳ್ಳಿ, ಇಲ್ಲದಿದ್ದಲ್ಲಿ ನಾವು ಬಂಧಿಸುತ್ತೇವೆ ಎಂದು ಕೂಡ ತಿಳಿಸಿದ್ದುಂಟು. ಆದರೆ ಹೋರಾಟಗಾರರು ಮಾತ್ರ ಇದಕ್ಕೆ ಜಗ್ಗದೇ ಜಾಮೀನು ಪಡೆದುಕೊಳ್ಳುವುದಿಲ್ಲ. ಬಂಧಿಸುವುದಾದರೆ ಬಂಧಿಸಿ ಎಂದು ಸವಾಲು ಹಾಕುತ್ತಿದ್ದರು.

ಈಗ ಬಂಧನ:ಈ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಕೂಡ ಕೊಡಲಾಗಿತ್ತು. ಕೇಸ್‌ ವಾಪಸ್ ಪಡೆದುಕೊಳ್ಳಿ ಎಂದು ಕೂಡ ಆಗ್ರಹಿಸಿದ್ದು ಆಗಿದೆ. ಆದರೆ ಈ ವರೆಗೂ ಕೇಸ್‌ ಮಾತ್ರ ವಾಪಸ್‌ ಪಡೆದಿಲ್ಲ. ಇದೀಗ ಮತ್ತೊಮ್ಮೆ ನೋಟಿಸ್‌ ಜಾರಿ ಮಾಡಿ ಹೋರಾಟಗಾರರಲ್ಲಿ ಯಾರು ಸಿಗುತ್ತಾರೆ ಅವರನ್ನು ಬಂಧಿಸುವ ಕೆಲಸ ನಡೆದಿದೆ. ಅದೇ ರೀತಿ ಇದೀಗ ಬಾಗಲಕೋಟೆಯಲ್ಲಿ ಕುತುಬುದ್ದೀನ್‌ ಖಾಜಿ ಎಂಬುವವರನ್ನು ಬಂಧಿಸಲಾಗಿದೆ. ಇದು ರೈತ ಹೋರಾಟಗಾರರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಕೂಡಲೇ ಬಂಧಿತನನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಆಗ ದಾಖಲಾಗಿದ್ದ ಎಲ್ಲರ ಮೇಲಿನ ಕೇಸ್‌ಗಳನ್ನು ವಾಪಸ್‌ ಪಡೆದುಕೊಳ್ಳಬೇಕು ಎಂದು ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ.

ಎಚ್ಚರಿಸಿದ್ದ ಪತ್ರಿಕೆ:ರೈತರಿಗೆ ನೋಟಿಸ್‌ ಬರುತ್ತಿರುವ ಹಾಗೂ ಬಂಧನವಾಗುವ ಬಗ್ಗೆ ಕನ್ನಡಪ್ರಭ ಪತ್ರಿಕೆ 2022ರ ಫೆಬ್ರುವರಿಯಲ್ಲಿ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ರೈಲ್‌ ರೋಖೋ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ನೋಟಿಸ್‌ ಬಂದಿದ್ದವು. ಇದೀಗ ಓರ್ವ ಹೋರಾಟಗಾರರನ್ನು ಬಂಧಿಸಿದ್ದಾರೆ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು. ಎಲ್ಲ ಹೋರಾಟಗಾರರ ಮೇಲಿನ ಕೇಸ್‌ ವಾಪಸ್‌ ಪಡೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವೀರೇಶ ಸೊಬರದಮಠ ಹೇಳಿದ್ದಾರೆ.