ಪಾಂಡವಪುರ ತಾಲೂಕಿನಲ್ಲಿ ಸಂಭ್ರಮದಿಂದ ನಡೆದ ‘ಮಕರ ಸಂಕ್ರಾಂತಿ’

| Published : Jan 17 2024, 01:49 AM IST

ಸಾರಾಂಶ

ಪಾಂಡವಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಪುಟಾಣಿ ಹೆಣ್ಣು ಮಕ್ಕಳು, ಬಾಲಕಿಯರು, ಯುವತಿಯರು ಹೊಸ ಬಟ್ಟೆಗಳನ್ನು ತೊಟ್ಟು ತಮ್ಮ ಪರಿಚಯಸ್ಥರ ಮನೆ ಮನೆಗೆ ತೆರಳಿ ಎಳ್ಳು, ಬೆಲ್ಲ, ಕಬ್ಬಿನ ತುಂಡುಗಳನ್ನು ನೀಡಿ ಹಬ್ಬದ ಶುಭಾಶಯ ಕೋರಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಹೆಣ್ಣು ಮಕ್ಕಳು ತಮ್ಮ ಮನೆಗಳ ಮುಂದೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುವ ವಿವಿಧ ಬಗೆಯ ಚಿತ್ತಾರದ ರಂಗೋಲಿ ಬಿಡಿಸಿದರು. ಮನೆ ಮುಂದೆ ತಳಿರುತೋರಣ ಹಾಕಲಾಯಿತು.

ಪುಟಾಣಿ ಹೆಣ್ಣು ಮಕ್ಕಳು, ಬಾಲಕಿಯರು, ಯುವತಿಯರು ಹೊಸ ಬಟ್ಟೆಗಳನ್ನು ತೊಟ್ಟು ತಮ್ಮ ಪರಿಚಯಸ್ಥರ ಮನೆ ಮನೆಗೆ ತೆರಳಿ ಎಳ್ಳು, ಬೆಲ್ಲ, ಕಬ್ಬಿನ ತುಂಡುಗಳನ್ನು ನೀಡಿ ಹಬ್ಬದ ಶುಭಾಶಯ ಕೋರಿದರು.

ಪುರುಷರು ತಮ್ಮ ಮನೆಯಲ್ಲಿದ್ದ ದನ, ಕರು ಸೇರಿದಂತೆ ಇನ್ನಿತರ ಜಾನುವಾರುಗಳ ಮೈತೊಳೆದು, ಎತ್ತುಗಳ ಕೊಂಬಿಗೆ ಬಣ್ಣ ಹಚ್ಚಿ, ಬಣ್ಣಬಣ್ಣದ ಟೇಪ್ ಕಟ್ಟಿ ಸಿಂಗರಿಸಿದರು. ಕುರಿ, ಮೇಕೆಗಳ ಮೈ ಮೇಲೆ ಬಣ್ಣ ಚಲ್ಲಿದರು. ಟಗರು ಕೊಂಬಿಗೂ ಬಣ್ಣ ಬಳಿದರು.

ಕಿಚ್ಚು ಹಾಯಿಸುವಿಕೆ:

ಸಂಜೆ ತಮ್ಮೂರಿನ ದೇವಸ್ಥಾನದ ಬಳಿ ಎತ್ತುಗಳಿಗೆ ಕಿಚ್ಚು ಹಾಯಿಸಲು ಹೊಸ ಬೆಳೆಯ ಭತ್ತದ ಹುಲ್ಲು, ಕಬ್ಬಿನ ತರಗು ಹಾಕಿ ಸಿದ್ದಗೊಳಿಸಿದ್ದರು. ಎತ್ತುಗಳು ಸೇರಿದಂತೆ ಹಲವು ಜಾನುವಾರುಗಳನ್ನು ಹಿಡಿದು ಬಂದ ರೈತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಸೂರ್ಯ ಮುಳುಗುತ್ತಿದ್ದಂತೆ ಹುಲ್ಲಿಗೆ ಬೆಂಕಿ ಹೊತ್ತಿಸಲಾಯಿತು. ಹರಹರ ಮಹಾದೇವ ಎಂದು ಕೂಗುತ್ತಾ ರೈತರು ಎತ್ತುಗಳನ್ನು ಹುರಿದುಂಬಿಸಿ ಕಿಚ್ಚು ಹಾಯಿಸಿದರು.

ಜಾನುವಾರುಗಳಿಗೆ ಪೊಂಗಲ್:

ಕಿಚ್ಚು ಹಾಯಿಸಿ ಮನೆಗೆ ಬಂದ ಎತ್ತುಗಳಿಗೆ ರೈತ ಮಹಿಳೆಯರು ಪಾದ ತೊಳೆದು ನಮಸ್ಕಾರ ಮಾಡಿ, ಪೂಜೆ ಮಾಡಿದರು. ಬಳಿಕ ಎತ್ತುಗಳಿಗೆ ಪೊಂಗಲ್ ತಿನ್ನಿಸಿದರು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿಹಿ ಮತ್ತು ಖಾರ ಪೊಂಗಲ್, ಇಡ್ಲಿ, ವಡೆ, ಪಾಯಸ ಸೇರಿದಂತೆ ಇನ್ನಿತರ ಹಲವು ವಿಶೇಷ ಭೋಜನ ಸವಿದರು.

ಹಲವು ಹಳ್ಳಿಗಳಲ್ಲಿ ರೈತರು ತಾವು ಬೆಳೆದ ಹೊಸ ರಾಗಿ ಬೆಳೆ ಕುಯ್ದು ಮೆದೆ ಹಾಕಿ ಕಣ ನಿರ್ಮಾಣ ಮಾಡಲಾಗಿತ್ತು. ರಾಗಿ ಮೆದೆಗೆ ಮಾವಿನ ಸೊಪ್ಪು ಹಾಕಿ, ಕಣಕ್ಕೆ ನೇಗಿಲು, ನೊಗ, ಸೂರ್ಯನ ಚಿತ್ರ ಬರೆದು ಪೂಜಿಸಲಾಯಿತು. ಹೊಸ ಭತ್ತದ ಕಣಜಕ್ಕೂ ಫೂಜೆ ಮಾಡಲಾಯಿತು.