ಬೆಂಗಳೂರಿನ ಜನರಿಗೆ ಆರೋಗ್ಯ ಬಗ್ಗೆ ಮಾಹಿತಿ ನೀಡಲು ಬಿಬಿಎಂಪಿ ‘ಮನೋಬಿಂಬ’ ಚಾನಲ್‌ ಆರಂಭ

| Published : Sep 06 2024, 01:47 AM IST / Updated: Sep 06 2024, 05:01 AM IST

ಸಾರಾಂಶ

ಬೆಂಗಳೂರಿನ ಜನರಿಗೆ ಆರೋಗ್ಯ ಮಾಹಿತಿ ನೀಡಲು ಬಿಬಿಎಂಪಿ ಸ್ವತಃ ಮನೋಬಿಂಬ ಹೆಸರಿನ ಯೂಟ್ಯೂಬ್‌ ಯುಟ್ಯೂಬ್‌ ಚಾಲನ್‌ ಆರಂಭಿಸಿದೆ.

 ಬೆಂಗಳೂರು : ಆರೋಗ್ಯ ಹಾಗೂ ವಿವಿಧ ಮಾನಸಿಕ ಸಮಸ್ಯೆಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡಲು ಬಿಬಿಎಂಪಿ ‘ಮನೋಬಿಂಬ’ ಯುಟ್ಯೂಬ್‌ ಚಾನಲ್‌ ಆರಂಭಿಸಿದೆ.

ಬಜೆಟ್‌ನಲ್ಲಿ ಘೋಷಿಸಿದಂತೆ ಆರಂಭಿಸಿರುವ ಯುಟ್ಯೂಬ್‌ ಚಾನಲ್‌ಗೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಾಳ್ಕರ್ ವಿಕಾಸ್ ಕಿಶೋರ್ ಗುರುವಾರ ಚಾಲನೆ ನೀಡಿದ್ದು, ಜಯನಗರದ ವಾಣಿಜ್ಯ ಸಂಕೀರ್ಣದಲ್ಲಿಈ ಚಾನಲ್‌ ಕಾರ್ಯ ನಿರ್ವಹಿಸಲಿದೆ.

ಬಿಬಿಎಂಪಿಯ ಆಂತರಿಕ ವೈದ್ಯರ ತಂಡ ಮತ್ತು ಕ್ಷೇತ್ರ ತಜ್ಞರು, ನಾಗರಿಕರ ಸಾಮಾಜಿಕ, ಕೌಟುಂಬಿಕ ಸಮಸ್ಯೆ, ಉದ್ಯೋಗ ಸಂಬಂಧಿ ಒತ್ತಡ, ಉದ್ಯಮಶೀಲತೆಯಲ್ಲಿ ಆಗುವ ಏರುಪೇರುಗಳಿಂದ ಆಗುವ ಮಾನಸಿಕ ಪರಿಣಾಮಗಳನ್ನು ನಿವಾರಿಸಲು ಸಲಹೆಗಳನ್ನು ನೀಡಲಿದ್ದಾರೆ. ಜತೆಗೆ, ಡೆಂಘೀ, ಕಾಲರಾ, ಮಲೇರಿಯಾ ಸೇರಿದಂತೆ ಕಾಲಕ್ಕೆ ತಕ್ಕಂತೆ ನಗರದಲ್ಲಿ ಜನರು ಎದುರಿಸುವ ಆರೋಗ್ಯ ಸಮಸ್ಯೆಗಳು ಕುರಿತು ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಒದಗಿಸಲಿದ್ದಾರೆ ಎಂದು ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪಾಲಿಕೆಯಿಂದ 28 ವಿಧಾನಸಭಾ ಕ್ಷೇತ್ರದಲ್ಲೂ ದಂತ ಚಿಕಿತ್ಸಾಲಯಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿಯು 28 ವಿಧಾನಸಭಾ ಕ್ಷೇತ್ರವಾರು ತಲಾ ಒಂದು ದಂತ ಚಿಕಿತ್ಸಾಲಯ ಆರಂಭಿಸಲು ಮುಂದಾಗಿದೆ.

ಬಿಬಿಎಂಪಿ ಈಗಾಗಲೇ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹೆರಿಗೆ ಆಸ್ಪತ್ರೆ ಹಾಗೂ ‘ನಮ್ಮ ಕ್ಲಿನಿಕ್‌’ಗಳನ್ನು ನಿರ್ವಹಣೆ ಮಾಡುತ್ತಿದೆ. 28 ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದು ದಂತ ಚಿಕಿತ್ಸಾಲಯ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಒಟ್ಟು ₹1.80 ಕೋಟಿ ವೆಚ್ಚದಲ್ಲಿ ದಂತ ಚಿಕಿತ್ಸಾಲಯ ಆರಂಭಿಸಲಾಗುತ್ತಿದೆ.

ದಂತ ಚಿಕಿತ್ಸಾಲಯಕ್ಕೆ ಪ್ರತ್ಯೇಕ ಆಸ್ಪತ್ರೆ ಮಾಡದೇ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅದರಲ್ಲೂ ಸ್ಥಳಾವಕಾಶ ಇರುವ ಕಡೆ ಈ ದಂತ ಚಿಕಿತ್ಸಾಲಯ ಆರಂಭಿಸಲು ಉದ್ದೇಶಿಸಲಾಗಿದೆ.

ದಂತ ಚಿಕಿತ್ಸೆಗೆ ಅಗತ್ಯವಿರುವ ಸಾಧನ ಸಲಕರಣೆ, ಔಷಧಿ, ದಂತ ಚಿಕಿತ್ಸಾ ಕುರ್ಚಿ ಖರೀದಿಸುವುದು. ಸದ್ಯಕ್ಕೆ ನಗರದ ದಂತ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಆರಂಭಿಸಲಾಗುತ್ತದೆ. ಮುಂದಿನ ವರ್ಷದಿಂದ ದಂತ ವೈದ್ಯರಿಗೆ ವೇತನ ನೀಡಲು ಬಜೆಟ್‌ ನಲ್ಲಿ ಹಣ ಮೀಸಲಿಟ್ಟು ಹೊರ ಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.